ಕೆ.ಆರ್.ಪೇಟೆ ತಾಲೂಕು ಕಚೇರಿಗೆ ಅನಿರೀಕ್ಷಿತ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ.ಕುಮಾರ ವಿವಿಧ ಶಾಖೆಗಳಿಗೆ ಆಗಮಿಸಿ ಕಚೇರಿ ಕಾರ್ಯನಿರ್ವಹಣೆ, ಕಡತ ವಿಲೇವಾರಿ, ಸಾರ್ವಜನಿಕ ಸೇವೆಗಳ ಅನುಷ್ಠಾನ ಹಾಗೂ ಸಿಬ್ಬಂದಿ ಹಾಜರಾತಿ ಪರಿಶೀಲಿಸಿದರು.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕು ಕಚೇರಿಗೆ ಅನಿರೀಕ್ಷಿತ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ.ಕುಮಾರ ವಿವಿಧ ಶಾಖೆಗಳಿಗೆ ಆಗಮಿಸಿ ಕಚೇರಿ ಕಾರ್ಯನಿರ್ವಹಣೆ, ಕಡತ ವಿಲೇವಾರಿ, ಸಾರ್ವಜನಿಕ ಸೇವೆಗಳ ಅನುಷ್ಠಾನ ಹಾಗೂ ಸಿಬ್ಬಂದಿ ಹಾಜರಾತಿ ಪರಿಶೀಲಿಸಿದರು.ಕಚೇರಿಯಲ್ಲಿ ಹಾಜರಿದ್ದ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಅವುಗಳನ್ನು ನಿಗದಿತ ಅವಧಿಯೊಳಗೆ ಇತ್ಯರ್ಥಪಡಿಸುವಂತೆ ತಹಸೀಲ್ದಾರ್‌ಗೆ ಸೂಚನೆ ನೀಡಿದ ಡೀಸಿ, ಇ-ಆಫೀಸ್ ವ್ಯವಸ್ಥೆಯಲ್ಲಿನ ಬಾಕಿ ಕಡತಗಳನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡಿ ಡಿಜಿಟಲ್ ಕಾರ್ಯವಿಧಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ನಿರ್ದೇಶನ ನೀಡಿದರು.
ಆದಾಯ, ಜಾತಿ, ಭೂ ಹಿಡುವಳಿ, ವಂಶವೃಕ್ಷ, ನಿವಾಸ ಪ್ರಮಾಣಪತ್ರ ಸೇರಿದಂತೆ ಎಲ್ಲಾ ಸೇವೆಗಳನ್ನು ಸಕಾಲ ಯೋಜನೆಯಡಿ ನಿಗದಿತ ಅವಧಿಯಲ್ಲಿಯೇ ಒದಗಿಸುವಂತೆ ಕಟ್ಟುನಿಟ್ಟಾಗಿ ಸೂಚಿಸಿ ವಿಳಂಬ ಕಂಡುಬಂದಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಅಭಿಲೇಖಾಲಯ ಶಾಖೆ ದಾಖಲೆ ನಿರ್ವಹಣೆ ಹಾಗೂ ಡಿಜಿಟಲೀಕರಣಕ್ಕೆ ಒತ್ತು ನೀಡಿ, ಸರ್ಕಾರಕ್ಕೆ ನಿಗದಿತ ಶುಲ್ಕವನ್ನು ಕಡ್ಡಾಯವಾಗಿ ವಸೂಲಿಸಿ ದಾಖಲೆಗಳನ್ನು ಸರಿಯಾಗಿ ಸಂರಕ್ಷಿಸುವಂತೆ ಸೂಚಿಸಿದರು. ಹೋಬಳಿ ಮಟ್ಟದ ಸಿಬ್ಬಂದಿ ಕೇಂದ್ರ ಸ್ಥಾನದಲ್ಲಿಯೇ ಲಭ್ಯವಿದ್ದು, ಸಾರ್ವಜನಿಕರ ಮನವಿಗಳಿಗೆ ತ್ವರಿತ ಸ್ಪಂದನೆ ನೀಡಬೇಕು, ಕಚೇರಿ ಶಿಸ್ತು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ನಿರ್ದೇಶನ ನೀಡಿದರು.
ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಪ್ರಗತಿ ಪರಿಶೀಲಿಸಿ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಸರ್ಕಾರದ ನಿಯಮಾವಳಿ ಪಾಲಿಸಿ ಸಾರ್ವಜನಿಕರಿಗೆ ಸಕಾಲಿಕ ಹಾಗೂ ಗುಣಮಟ್ಟದ ಸೇವೆ ಒದಗಿಸುವಂತೆ ಜಿಲ್ಲಾಧಿಕಾರಿಗಳು ಸ್ಪಷ್ಟ ನಿರ್ದೇಶನ ನೀಡಿದರು.ನಂತರ ಇಂದಿರಾ ಕ್ಯಾಂಟೀನ್ ಅನಿರೀಕ್ಷಿತವಾಗಿ ಆಗಮಿಸಿ ಪರಿಶೀಲನೆ ಮಾಡಿ ಕ್ಯಾಟೀನ್‌ನ ಸ್ವಚ್ಛತೆ, ಆರೋಗ್ಯ ಹಾಗೂ ಆಹಾರ ಸುರಕ್ಷತಾ ಮಾನದಂಡಗಳ ಅನುಷ್ಠಾನವನ್ನು ಪರಿಶೀಲಿಸಿದರು. ಆಹಾರದ ಗುಣಮಟ್ಟ, ಪ್ರಮಾಣ ಹಾಗೂ ವಿತರಣೆ ವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿದರು. ಆಹಾರ ತಯಾರಿಕೆ ಮತ್ತು ವಿತರಣೆಯಲ್ಲಿ ಸರ್ಕಾರದ ನಿಗದಿತ ಮಾರ್ಗಸೂಚಿಗಳ ಕಟ್ಟುನಿಟ್ಟಿನ ಪಾಲನೆ ಕುರಿತು ಪರಿಶೀಲಿಸಿದರು.
ಕ್ಯಾಂಟೀನ್ ಸಿಬ್ಬಂದಿ ಹಾಜರಾತಿ, ಕರ್ತವ್ಯ ನಿರ್ವಹಣೆ ಹಾಗೂ ಶಿಸ್ತು ಪಾಲನೆ ಕುರಿತು ಮಾಹಿತಿ ಪಡೆದರು. ಸಾರ್ವಜನಿಕರೊಂದಿಗೆ ಸಂವಾದ ನಡೆಸಿ ಸೇವೆಯ ಗುಣಮಟ್ಟದ ಕುರಿತು ಅಭಿಪ್ರಾಯಗಳನ್ನು ಸ್ವೀಕರಿಸಿದರು.ನಂತರ ಆಹಾರದ ಗುಣಮಟ್ಟ ಮತ್ತು ಸ್ವಚ್ಛತೆಯನ್ನು ನಿರಂತರವಾಗಿ ಕಾಪಾಡುವುದು, ಸಾರ್ವಜನಿಕರಿಗೆ ಸಕಾಲಿಕ ಹಾಗೂ ಸಮರ್ಪಕ ಆಹಾರ ಒದಗಿಸುವುದು ಮತ್ತು ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಬಳಿಕ ಪುರಸಭೆ ವ್ಯಾಪ್ತಿಯ ಘನ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಸ್ವಚ್ಛ ಭಾರತ್ ಮಿಷನ್ (ನಗರ) ಯೋಜನೆಯಡಿ ಅನುಷ್ಠಾನಗೊಳಿಸಲಾಗುತ್ತಿರುವ ತಾಂತ್ರಿಕ ವ್ಯವಸ್ಥೆಗಳ ಸಮಗ್ರ ಪರಿಶೀಲನೆ ನಡೆಸಿದರು.ಕಸದ ಸಂಗ್ರಹಣೆ, ಮೂಲದಲ್ಲಿಯೇ ಕಸ ವಿಂಗಡಣೆ, ಸಂಸ್ಕರಣೆ, ಮರುಬಳಕೆ ಹಾಗೂ ವೈಜ್ಞಾನಿಕ ವಿಲೇವಾರಿ ಪ್ರಕ್ರಿಯೆಗಳ ಕಾರ್ಯಾಚರಣೆಯನ್ನು ಸೂಕ್ಷ್ಮವಾಗಿ ವೀಕ್ಷಿಸಿದರು. ಮನೆಮನೆ ಕಸ ಸಂಗ್ರಹಣೆ, ತೇವ ಕಸದ ಕಾಂಪೋಸ್ಟಿಂಗ್, ಒಣ ಕಸದ ಮರುಬಳಕೆ, ಪರಿಸರ ಸುರಕ್ಷತಾ ಕ್ರಮಗಳು, ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಶೇ.100ರಷ್ಟು ಕಸ ವಿಂಗಡಣೆ ಗುರಿ ಸಾಧಿಸಲು ಸೂಚನೆ ನೀಡಿದರು.
ಈ ವೇಳೆ ಪುರಸಭೆ ಅಧಿಕಾರಿಗಳು ಉಪಸ್ಥಿತರಿದ್ದರು.