ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ಚಲಾಯಿಸುವ ಪ್ರಕ್ರಿಯೆಗೆ ಗುರುವಾರ ಖುದ್ದು ಸಾಕ್ಷಿಯಾಗುವ ಮೂಲಕ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಅವರು ಹೋಮ್ ಬೇಸ್ಡ್ ವೋಟಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿದರು.ಕಲಬುರಗಿ ಉತ್ತರ ಕ್ಷೇತ್ರಕ್ಕೆ ಸೇರಿದ ಕಲಬುರಗಿ ನೆಹರು ಗಂಜ್ ಪ್ರದೇಶದ ಗಾಂಧಿ ನಗರದ ನಿವಾಸಿ ಶಾಂತಮ್ಮ (85) ಮನೆಗೆ ಚುನಾವಣಾ ಸಿಬ್ಬಂದಿ ಮತ್ತು ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಭುವನೇಶ ಪಾಟೀಲ ಅವರೊಂದಿಗೆ ತೆರಳಿ ಮನೆಯಿಂದ ಮತದಾನ ಪ್ರಕ್ರಿಯೆಗೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಹಿರಿಯ ಜೀವಿಗಳೊಂದಿಗೆ ಆರೋಗ್ಯ ಕುಶಲೋಪರಿ ವಿಚಾರಿಸಿದರು.
ಜಿಲ್ಲಾ ಚುನಾವಣಾಧಿಕಾರಿಗಳು ಕಲಬುರಗಿ ದಕ್ಷಿಣ ಕ್ಷೇತ್ರದ ಕಲಬುರಗಿ ನಗರದ ಜಯನಗರ ಮತಗಟ್ಟೆ ಸಂ.220ಕ್ಕೆ ಸೇರಿದ ಮತದಾರರ ಮನೆಯಿಂದ ಮತದಾನ ಕಾರ್ಯ ವೀಕ್ಷಿಸಿದರು. ನಂತರಇದೇ ಕ್ಷೇತ್ರದ ಮತಗಟ್ಟೆ ಸಂ.121ಕ್ಕೆ ಸೇರಿದ ರೆಹಮತ್ ನಗರ ನಿವಾಸಿ ಜುಬೇದಾ ಬೀ ಮತ ಚಲಾವಣೆ ಪ್ರಕ್ರಿಯೆಗೂ ಸಾಕ್ಷಿಯಾದರು.
ಕಲಬುರಗಿ ಗ್ರಾಮೀಣ ಕ್ಷೇತ್ರದ ಮತಗಟ್ಟೆ ಸಂ.207ಕ್ಕೆ ಸೇರಿದ ಕುಸನೂರ ತಾಂಡಾ ನಿವಾಸಿ ಶತಕದ ಅಂಚಿನಲ್ಲಿರುವ ಚಾಂದಿಬಾಯಿ ಖೂಬು (96) ಅವರು ಮನೆಯಿಂದ ಮತದಾನಕ್ಕೆ ಡಿಸಿ ಬಿ.ಫೌಜಿಯಾ ತರನ್ನುಮ್ ಮತ್ತು ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಎ.ಸಿ. ರೂಪಿಂದರ್ ಕೌರ್ ಸಾಕ್ಷಿಯಾದರು.ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂ.68ಕ್ಕೆ ಸೇರಿದ ಕಲಬುರಗಿ ನಗರದ ಹಳೇ ರಾಘವೇಂದ್ರ ಕಾಲೋನಿ ನಿವಾಸಿ ವಿಮಲಾಬಾಯಿ (85) ಅವರು ಮತ ಚಲಾಯಿಸಿದರು. ಇತ್ತ ಚಿತ್ತಾಪುರ ಕ್ಷೇತ್ರದ ಲಾಡ್ಲಾಪುರ ಮತಗಟ್ಟೆ ಸಂ.199 ವ್ಯಾಪ್ತಿಗೆ ಸೇರಿದ ಪಾರ್ಶ್ವವಾಯು ಪೀಡಿತ ವಿಜ್ಜಮ್ಮ ಸಾಬಣ್ಣಾ ಲಾಡ್ಲಾಪುರ (75) ಅವರು ಮನೆಯಲ್ಲಿಯೆ ಮತದಾನ ಗಮನ ಸೆಳೆದರು. ಚುನಾವಣಾಧಿಕಾರಿ ನವೀನ್ ಯು. ಉಪಸ್ಥಿತರಿದ್ದರು.
ಕ್ಷೇತ್ರವಾರು ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರು: ಕಲಬುರಗಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರದಲ್ಲಿ 85 ವರ್ಷ ಮೇಲ್ಪಟ್ಟ 18,233 ಹಿರಿಯ ನಾಗರಿಕರು ಮತ್ತು 22,123 ವಿಶೇಷ ಚೇತನರಿದ್ದು, 1,149 ಹಿರಿಯ ನಾಗರಿಕರು ಮತ್ತು 396 ವಿಶೇಷಚೇತನರು ಸೇರಿದಂತೆ ಒಟ್ಟು 1,545 ಜನ ಮನೆಯಿಂದ ಮತದಾನ ಮಾಡಲು ಆಯ್ಕೆ ಮಾಡಿಕೊಂಡಿದ್ದಾರೆ. ಕ್ಷೇತ್ರವಾರು ನೋಡುವುದಾದರೆ ಹಿರಿಯ ನಾಗರಿಕರು ಮತ್ತು ವಿಶೇಷಚೇತನರು ಕ್ರಮವಾಗಿ ಅಫಜಲಪೂರ 177 ಮತ್ತು 90, ಚಿತ್ತಾಪೂರ 24 ಮತ್ತು 15, ಕಲಬುರಗಿ ದಕ್ಷಿಣ 149 ಮತ್ತು 28, ಕಲಬುರಗಿ ಗ್ರಾಮೀಣ 151 ಮತ್ತು 43, ಕಲಬುರಗಿ ಉತ್ತರ 121 ಮತ್ತು 20, ಜೇವರ್ಗಿ 164 ಮತ್ತು 74, ಸೇಡಂ 200 ಮತ್ತು 91 ಹಾಗೂ ಗುರುಮಠಕಲ್ 163 ಮತ್ತು 35 ಜನ ಇದ್ದಾರೆ.ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ವಿಶೇಷಚೇತನರು ಹಾಗೂ ಹಿರಿಯ ನಾಗರಿಕರು ಮತಗಟ್ಟೆಗೆ ಬಂದು ಮತ ಚಲಾಯಿಸಲು ಅನುಕೂಲವಾಗುವಂತೆ ಆಟೋ ವ್ಯವಸ್ಥೆ, ಮತಗಟ್ಟೆಯಲ್ಲಿ ತ್ರಿಚಕ್ರ ವಾಹನ ವ್ಯವಸ್ಥೆ ಮಾಡಲಾಗಿತ್ತು.
ಸಕಲ ಸಿದ್ಧತೆ: ಜಿಲ್ಲೆಯಾದ್ಯಂತ ಇಂದಿನಿಂದ ಎರಡು ದಿನಗಳ ಕಾಲ ನಡೆಯಲಿರುವ ಮನೆಯಿಂದ ಮತದಾನ ಪ್ರಕ್ರಿಯೆಗೆ ಜಿಲ್ಲೆಯಾದ್ಯಂತ ಸುಮಾರು 81 ತಂಡಗಳನ್ನು ರಚಿಸಲಾಗಿದೆ. ಪ್ರತಿ ತಂಡದೊಂದಿಗೆ ಪಿಆರ್‌ಒ ಎಪಿಆರ್‌ಒ, ಮೈಕ್ರೋ ವೀಕ್ಷಕರು, ಸೆಕ್ಟರ್ ಅಧಿಕಾರಿಗಳು ಇರಲಿದ್ದು, ಮನೆ ಮನೆಗೆ ಪೋಸ್ಟಲ್ ಬಾಕ್ಸ್‌ನೊಂದಿಗೆ ತೆರಳಿ ಮತದಾನ ಮಾಡಿಸಿಕೊಳ್ಳಲಿದ್ದಾರೆ. ಇಲ್ಲಿ ಮತದಾನದ ಗೌಪ್ಯತೆ ಸಹ ಕಾಪಾಡಲಾಗುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮಾಹಿತಿ ನೀಡಿದರು.