ಗೋಮಾಳ ಒತ್ತುವರಿ ಸ್ಥಳ ಪರಿಶೀಲಿಸಲು ಡೀಸಿಗೆ ಸೂಚನೆ

| Published : Jul 04 2024, 01:03 AM IST / Updated: Jul 04 2024, 01:04 AM IST

ಗೋಮಾಳ ಒತ್ತುವರಿ ಸ್ಥಳ ಪರಿಶೀಲಿಸಲು ಡೀಸಿಗೆ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಮಡಹಳ್ಳಿ ಸ.ನಂ.೧೯೨ ಸರ್ಕಾರಿ ಗೋಮಾಳ ಒತ್ತುವರಿ ಮಾಡಿಕೊಂಡು ಸ್ವಾಭಾವಿಕ ನೀರು ಹರಿಯುವ ಹಳ್ಳ ಮುಚ್ಚಿರುವ ಬಗ್ಗೆ ಜಿಲ್ಲಾಧಿಕಾರಿ ಖುದ್ದು ಪರಿಶೀಲನೆ ನಡೆಸಬೇಕು ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ತಾಕೀತು ಮಾಡಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ತಾಲೂಕಿನ ಮಡಹಳ್ಳಿ ಸ.ನಂ.೧೯೨ ಸರ್ಕಾರಿ ಗೋಮಾಳ ಒತ್ತುವರಿ ಮಾಡಿಕೊಂಡು ಸ್ವಾಭಾವಿಕ ನೀರು ಹರಿಯುವ ಹಳ್ಳ ಮುಚ್ಚಿರುವ ಬಗ್ಗೆ ಜಿಲ್ಲಾಧಿಕಾರಿ ಖುದ್ದು ಪರಿಶೀಲನೆ ನಡೆಸಬೇಕು ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ತಾಕೀತು ಮಾಡಿದೆ. ದೂರುದಾರ ಸದಾನಂದ ಎಂ.ಬಿ ಕಳೆದ ಫೆ.೨೧ ರಂದು ದೂರು ನೀಡಿದ್ದು, ಒತ್ತುವರಿ ಮಾಡಿಕೊಂಡು ಹಳ್ಳ ಮುಚ್ಚಿ, ಪೈಪ್‌ ತೆರವುಗೊಳಿಸುವಂತೆ ತಹಸೀಲ್ದಾರ್‌ ಆದೇಶ ಹೊರಡಿಸಿದ್ದಾರೆ. ಆದರೆ ಗ್ರಾಮ ಆಡಳಿತ ಅಧಿಕಾರಿ ತಹಸೀಲ್ದಾರ್‌ ಆದೇಶ ಪಾಲಿಸುತ್ತಿಲ್ಲ ಎಂದು ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.

ಈ ಬಗ್ಗೆ ಜಿಲ್ಲಾಧಿಕಾರಿ ಖುದ್ದು ಪರಿಶೀಲಿಸಿ, ನಾಲ್ಕು ವಾರಗಳಲ್ಲಿ ಮರು ಪರಿಶೀಲನಾ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದು, ಬರುವ ಆ.೨೬ ರೊಳಗೆ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷ ಟಿ.ರಾಮಭಟ್‌ ಗೆ ಮಂಡಿಸುವುದು ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಸಹಾಯಕ ವಿಲೇಖನಾಧಿಕಾರಿ ಪತ್ರದಲ್ಲಿ ತಿಳಿಸಿದ್ದಾರೆ.ಏನಿದು ಪ್ರಕರಣ ? ಮಡಹಳ್ಳಿ ಗ್ರಾಮದ ಸದಾನಂದ ಎಂ.ಬಿ ಸರ್ಕಾರಿ ಗೋಮಾಳದಲ್ಲಿ ಸ್ವಾಭಾವಿಕ ನೀರು ಹರಿಯುವ ಹಳ್ಳ ಮುಚ್ಚಿ ಪೈಪ್‌ ಹಾಕಿದ್ದಾರೆ ಇದರಿಂದ ಬೆಳೆಗೆ ನಷ್ಟವಾಗುತ್ತದೆ ಎಂದು ತಹಸೀಲ್ದಾರ್‌ಗೆ ಮೊದಲಿಗೆ ದೂರು ಸಲ್ಲಿಸಿದ್ದರು. ಒತ್ತುವರಿ ತೆರವುಗೊಳಿಸುವಂತೆ ತಹಸೀಲ್ದಾರ್‌ ಟಿ.ರಮೇಶ್‌ ಬಾಬು ರೆವಿನ್ಯೂ ಇನ್ಸ್‌ಪೆಕ್ಟರ್‌, ಗ್ರಾಮ ಆಡಳಿತ ಅಧಿಕಾರಿ ಸೂಚಿಸಿದರೂ ಸರ್ಕಾರಿ ಗೋಮಾಳ ಒತ್ತುವರಿ ತೆರವುಗೊಳಿಸಲು ಮುಂದಾಗಲಿಲ್ಲ. ರೆವಿನ್ಯೂ ಇನ್ಸ್‌ಪೆಕ್ಟರ್‌ ಹಾಗು ಗ್ರಾಮ ಆಡಳಿತ ಅಧಿಕಾರಿ ನಿರ್ಲಕ್ಷ್ಯ ವಹಿಸಿ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಕಳೆದ ಫೆ.೨೧ ರಂದು ದೂರು ಸಲ್ಲಿಸಿದ್ದರು. ದೂರಿನ ಆಧಾರದ ಮೇಲೆ ತಹಸೀಲ್ದಾರ್‌ ಟಿ.ರಮೇಶ್‌ ಬಾಬು ಒತ್ತುವರಿಯಾಗಿರುವ ನೀರು ಹರಿಯುವ ಹಳ್ಳವನ್ನು ತೆರವುಗೊಳಿಸಬೇಕು ಎಂದು ೨೦೨೩ ರ ಅ.೭ ರಂದು ರೆವಿನ್ಯೂ ಇನ್ಸ್‌ಪೆಕ್ಟರ್‌, ಗ್ರಾಮ ಆಡಳಿತ ಅಧಿಕಾರಿಗೆ ಪತ್ರ ಕೂಡ ಬರೆದಿದ್ದಾರೆ. ಆದರೂ ಯಾವುದೇ ಕ್ರಮ ಕೈಗೊಳ್ಳದೇ ಇದ್ದುದರಿಂದ ದೂರುದಾರ ಸದಾನಂದ ಎಂ.ಬಿ ಕರ್ನಾಟಕ ರಾಜ್ಯ ಮಾನವ ಹಕ್ಕುಗಳಆಯೋಗಕ್ಕೆ ಕಳೆದ ಫೆ.೨೧ ರಂದು ದೂರು ಸಲ್ಲಿಸಿ ಸಿಬ್ಬಂದಿಯ ನಿರ್ಲಕ್ಷ್ಯದ ಬಗ್ಗೆ ಗಮನ ಸೆಳೆದಿದ್ದರು.

ಬದಲಾಗದ ಸಿಬ್ಬಂದಿ:

ರಾಜ್ಯದಲ್ಲಿ ಹೊಸ ಸರ್ಕಾರ ಅಸ್ಥಿತ್ವಕ್ಕೆ ಬಂದು ವರ್ಷ ಉರುಳುತ್ತಿದೆ. ಕ್ಷೇತ್ರದಲ್ಲಿ ಶಾಸಕರು ಬದಲಾದರು, ತಾಲೂಕು ಮಟ್ಟದ ಅಧಿಕಾರಿಗಳು ಬದಲಾದರೂ ಅವರ ಕೈ ಕೆಳಗಿನ ಸಿಬ್ಬಂದಿ ಮಾತ್ರ ಬದಲಾದಂತೆ ಕಂಡು ಬಂದಿಲ್ಲ ಎಂಬುದಕ್ಕೆ ಇಲ್ಲೊಂದು ತಾಜ ಉದಾಹರಣೆ. ತಹಸೀಲ್ದಾರ್ ಪತ್ರಕ್ಕೂ ಬೆಲೆ ಇಲ್ಲದ ಮೇಲೆ ಜನ ಸಾಮಾನ್ಯ ಕೆಲಸ ಕಾರ್ಯಗಳು ಹೇಗೆ ನಡೆಯುತ್ತವೆ ನೀವೇ ಹೇಳಿ ಎಂದು ಸಾರ್ವಜನಿಕರು ವ್ಯಂಗವಾಗಿ ತಾಲೂಕು ಆಡಳಿತದ ಕಾರ್ಯವೈಖರಿ ಪ್ರಶ್ನಿಸುವಂತಾಗಿದೆ. ಎಚ್.ಎಂ.ಗಣೇಶ್‌ ಪ್ರಸಾದ್‌ ಅವರು ಹೊಸದಾಗಿ ಶಾಸಕರಾದ ಬಳಿಕ ಕ್ಷೇತ್ರದಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನೀಡಬೇಕು, ಜನ ಸಾಮಾನ್ಯ ಕೆಲಸ ಕಾರ್ಯಗಳು ಸರಾಗವಾಗಿ ಆಗಬೇಕು ಎಂಬ ಮಹದಾಸೆ ಇಟ್ಟು ಕೊಂಡಿದ್ದರು. ಆದರೆ ಶಾಸಕರ ಆಸೆ, ಭರವಸೆಗೆ ತಾಲೂಕಿನಲ್ಲಿ ಹಲವು ವರ್ಷಗಳಿಂದ ಜಾಂಡಾ ಹೂಡಿರುವ ಹಲವು ಇಲಾಖೆಗಳ ಸಿಬ್ಬಂದಿ ಕೆಲಸ ಮಾಡುತ್ತಿಲ್ಲ. ಕೇಳಿದರೆ ಶಾಸಕರು ಏನು ಕೇಳಲ್ಲ, ಕೇಳಿದರೂ ಒತ್ತಡ ಹಾಕಿಸಿದರಾಯ್ತು ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ ಎಂಬ ಜನರ ಆರೋಪಕ್ಕೆ ಈ ಪ್ರಕರಣ ತಾಜಾ ಉದಾಹರಣೆಯಾಗಿದೆ.ಮಹದೇವಪ್ರಸಾದ್ ನೆನೆಪು:

ಯಾವುದೇ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸಗಳು ಮಹದೇವಪ್ರಸಾದ್‌ ಅವರ ಕಾಲದಲ್ಲಿ ಅವರ ಹೆಸರೇಳಿದರೆ ಸಾಕು ಸರಾಗವಾಗಿ ಆಗುತ್ತಿದ್ದವು. ಮೆಲುವಂಗಿಯ ಜೇಬಿನಲ್ಲಿ ಮಹದೇವಪ್ರಸಾದ್‌ರ ಪಾಕೆಟ್‌ ಕ್ಯಾಲೆಂಡರ್‌ ಕಂಡರೆ ಸಾಕು ಅಧಿಕಾರಿಗಳು ಹಾಗು ಸಿಬ್ಬಂದಿ ಹಣವಿಲ್ಲದೆ ಕೆಲಸ ಮಾಡಿ ಬೇಗ ಕಳುಹಿಸುತ್ತಿದ್ದರು ಎಂದು ಹಾಲಹಳ್ಳಿಯ ಅಭಿಮಾನಿಗಳು ಅವರನ್ನು ನೆನಪು ಮಾಡಿಕೊಂಡರು.