ಸಾರಾಂಶ
ಕನ್ನಡಪ್ರಭ ವಾರ್ತೆ ಜಮಖಂಡಿ
ವಿಶ್ವಕ್ಕೆ ಭಾರತವನ್ನು ಪರಿಚಯಿಸಿಕೊಟ್ಟವರು ಗುರುದೇವ ರಾನಡೆ ಎಂದು ಬೆಳಗಾವಿಯ ತತ್ವಶಾಸ್ತ್ರಜ್ಞ ಡಾ.ವೀರೇಶ್ವರ ಸ್ವಾಮಿಗಳು ಅಭಿಪ್ರಾಯಪಟ್ಟರು. ನಗರದ ಪಿ.ಬಿ.ಹೈಸ್ಕೂಲ್ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಗುರುದೇವ ರಾನಡೆ ಸಾಂಸ್ಕೃತಿಕ ಭವನದ ಲೋಕಾರ್ಪಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.ರಾನಡೆಯವರು ತತ್ವಜ್ಞಾನಿಗಳು ಮತ್ತು ಅನುಭವಿಗಳು ಆಗಿದ್ದರಿಂದ ಅವರ ಮಾತುಗಳು ಪ್ರಭಾವ ಬೀರುತ್ತಿದ್ದವು. ದೇಶದ ತತ್ವಜ್ಞಾನವನ್ನು ಜಗತ್ತಿಗೆ ಸಾರಿದರು, 30 ಪುಸ್ತಕಗಳನ್ನು ಆಂಗ್ಲ, ಹಿಂದಿ, ಮರಾಠಿ ಭಾಷೆಗಳಲ್ಲಿ ಬರೆದು ದೇಶದ ಉನ್ನತ ಪರಂಪರೆ ಬಗ್ಗೆ ತೋರಿಸಿಕೊಟ್ಟಿದ್ದಾರೆ. ಅಲ್ಲದೇ, ಉಪನಿಷತ್ತು, ಭಾಗವತ, ಭಗವದ್ಗೀತೆ, ಸಂತರ ಪರಿಚಯ ಮುಂತಾದ ಕೃತಿಗಳನ್ನು ರಚಿಸಿದರು. ಅವರಿಗೆ ದೇಶ ವಿದೇಶಗಳಲ್ಲಿ ಭಕ್ತ ಸಮೂಹವೆ ಇದೆ ಎಂದು ಹೇಳಿದರು.ಅಧ್ಯಾತ್ಮ ಮತ್ತು ತತ್ವಶಾಸ್ತ್ರದಿಂದ ಜೀವನದ ದಿಕ್ಕು ಬದಲಾಗುತ್ತದೆ. ತತ್ವಶಾಸ್ತ್ರ ಗಡಿಯನ್ನು ಮೀರಿದ್ದು ಅದರ ಅನುಭವದಿಂದ ಜಗತ್ತನ್ನು ನೋಡುವ ದೃಷ್ಠಿಕೋನ ಬದಲಾಗುತ್ತದೆ, ಬಗವಂತನ ಇರುವಿಕೆಯ ಅನುಭೂತಿಯಾಗುತ್ತದೆ. ಅಂಥಹ ಸಾಧನೆಯನ್ನು ಗುರುದೇವ ರಾನಡೆ ಮಾಡಿದ್ದರು, ಇಂಚಗೇರಿ ಮಠದ ಸಂಪ್ರದಾಯದ ದೀಕ್ಷೆ ಪಡೆದು ತತ್ವಜ್ಞಾನಿ ಸಂತ ಎನಿಸಿದರು. ಬೆಳಗಾವಿಯ ಆರ್‌ಪಿಡಿ ಕಾಲೇಜು ಆವರಣದಲ್ಲಿ ರಾನಡೆ ಮಂದಿರವಿದೆ ಎಂದು ಹೇಳಿದರು.
ನಿವೃತ್ತ ಪ್ರಾಂಶುಪಾಲ ಜಿ.ಆರ್.ಕುಲಕರ್ಣಿ ಉಪನ್ಯಾಸ ನೀಡಿ, ರಾನಡೆಯವರು ಸತತ 6 ಗಂಟೆಗಳ ಕಾಲ ನಾಮ ಜಪ ಮಾಡುತ್ತಿದ್ದರು. ನಾಮಜಪದ ಸಾಧನೆ ಮಾಡಿದ್ದ ಅವರು ವ್ಯಕ್ತಿಯ ಚರಿತ್ರೆ, ನಡವಳಿಕೆ ಜೀವನಕ್ಕೆ ಅವಶ್ಯಕವೆಂದು ತೋರಿಸಿಕೊಟ್ಟರು. ತತ್ವಜ್ಞಾನಿಗಳು ಆಧ್ಯಾತ್ಮಿಕ ಚಿಂತಕರಾಗಿದ್ದ ಗುರುದೇವ ರಾನಡೆ ಅವರು ರಾಜೇಂದ್ರ ಪ್ರಸಾದ, ರಾಧಾಕೃಷ್ಣನ್ ಅವರ ಮಾರ್ಗದರ್ಶಕರು ಕೂಡ ಆಗಿದ್ದರು ಎಂದು ವಿವರಿಸಿದರು.ಶಾಸಕ ಜಗದೀಶ ಗುಡಗುಂಟಿ ಮಾತನಾಡಿ, ರಾನಡೆ ಅವರು ತೋರಿಸಿಕೊಟ್ಟ ಮಾರ್ಗದಲ್ಲಿ ಎಲ್ಲರೂ ನಡೆಯಬೇಕು, ಆಧ್ಯಾತ್ಮ ಮತ್ತು ತತ್ವಜ್ಞಾನ ಕುರಿತಾದ ಕಾರ್ಯಕ್ರಮಗಳು ಸಭಾಭವನದಲ್ಲಿ ನಡೆಯುವಂತಾಗಲಿ. ಅಲ್ಲದೇ, ಗುರುದೇವ ರಾನಡೆ ಅವರ ಮಾರ್ಗದಲ್ಲಿ ನಡೆಯಬೇಕು ಎಂಬ ಸಲಹೆ ನೀಡಿದರು.
ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿ, ರಾನಡೆ ಅವರು ಹುಟ್ಟಿ ಬೆಳೆದು ವಿದ್ಯಾಭ್ಯಾಸ ಮಾಡಿ, ಶಿಕ್ಷರಾಗಿ ಸೇವೆ ಸಲ್ಲಿಸಿದ ಸ್ಥಳದಲ್ಲಿ ಅವರ ಹೆಸರಿನಲ್ಲಿ ಭವನ ನಿರ್ಮಾಣ ಮಾಡಿದ್ದು ಸಂತಸ ತಂದಿದೆ. 2011ರಲ್ಲಿ ವಿಜಯಪುರದ ಸಿದ್ದೇಶ್ವರ ಸ್ವಾಮಿಗಳು ಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದರು. ಇಂದು ಅದು ಲೋಕಾರ್ಪಣೆಯಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ರಾನಡೆ ಭವನ ನಿರ್ಮಾಣಕ್ಕೆ ಕಾರಣೀಭೂತರಾದ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು. ಪುಸ್ತಕ ಪ್ರಕಟಿಸಿದ ಮಲ್ಲಕಾರ್ಜುನ ಉಪ್ಪಾರ, ರಾನಡೆಯವರ ಭಾವ ಚಿತ್ರ ಬಿಡಿಸಿದ ಮಹಾಂತೇಶ ಹಲಗಲಿ, ಅಭಿಯಂತರ ವಿಜಯ ಹಿರೇಮಠ ಅವರನ್ನು ಸನ್ಮಾನಿಸಲಾಯಿತು. ಬಿಇಒ ಎ.ಕೆ.ಬಸಣ್ಣವರ, ಪ್ರಾಚಾರ್ಯರಾದ ಎನ್.ಎಂ.ಚೌರ, ಎಸ್‌ಡಿಎಂಸಿ ಅಧ್ಯಕ್ಷ ಸರ್ವೋತ್ತಮ ಗಲಗಲಿ, ಮಾಜಿ ಶಾಸಕ ಜಿ.ಎಸ್.ನ್ಯಾಮಗೌಡ, ಓಲೆಮಠದ ಡಾ.ಚೆನ್ನಬಸವ ಸ್ವಾಮಿಗಳು ,ತಹಸೀಲ್ದಾರ್ ಸದಾಶಿವ ಮುಕ್ಕೊಜಿ ಮುಂತಾದವರಿದ್ದರು.