ಕನ್ನಡಪ್ರಭ ವಾರ್ತೆ ಮಂಡ್ಯ
ಪಾಂಡವಪುರ ತಾಲೂಕಿನ ಮೇಲುಕೋಟೆ ಶ್ರೀ ಚೆಲುವನಾರಾಯಣಸ್ವಾಮಿ ದೇವಾಲಯದ ಆಸ್ತಿ ಸಂರಕ್ಷಣೆ ಹಾಗೂ ಸಮಗ್ರ ಅಭಿವೃದ್ಧಿ ಕುರಿತು ಕ್ರಿಯಾಯೋಜನೆ ರೂಪಿಸುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ಅಧಿಕಾರಿಗಳಿಗೆ ಸೂಚನೆ ನೀಡಿದರು.ಬುಧವಾರ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ದೇವಾಲಯಕ್ಕೆ ಸೇರಿದ ಒಟ್ಟು 49 ಆಸ್ತಿಗಳ ಪೈಕಿ 22 ಆಸ್ತಿಗಳ ಸರ್ವೇ ಪೂರ್ಣಗೊಂಡಿದ್ದು, ಉಳಿದ 27 ಆಸ್ತಿಗಳನ್ನು ಆದ್ಯತೆಯ ಮೇರೆಗೆ ಸರ್ವೇ ನಡೆಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.
ದೇವಾಲಯದ ಎಲ್ಲಾ ಆಸ್ತಿಗಳಿಗೆ ತಂತಿಬೇಲಿ ನಿರ್ಮಿಸಿ ನಾಮಫಲಕ ಅಳವಡಿಸುವುದು, ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ಬೆಂಬತ್ತುವುದು ಹಾಗೂ ಆಸ್ತಿಗಳ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು.ಇದೇ ವೇಳೆ ಯಾತ್ರಿ ನಿವಾಸ ನಿರ್ಮಾಣ, ಪ್ರವಾಸಿ ಮಂದಿರ ಅಭಿವೃದ್ಧಿ, ಶೌಚಾಲಯಗಳ ನಿರ್ಮಾಣ, ಭಕ್ತರಿಗಾಗಿ ಸುಧಾರಿತ ಸರದಿ ಸಾಲಿನ ವ್ಯವಸ್ಥೆ, ಸೇವಾ ಹಾಗೂ ಪ್ರಸಾದ ವಿತರಣಾ ಕೌಂಟರ್‌ಗಳ ನಿರ್ಮಾಣ, ಅಷ್ಟತೀರ್ಥಗಳು, ಮಂಟಪಗಳು ಹಾಗೂ ಇತರೆ ಮೂಲಸೌಕರ್ಯಗಳ ಅಭಿವೃದ್ಧಿಗೆ ಸಮಗ್ರ ಕ್ರಿಯಾ ಯೋಜನೆ ಸಿದ್ಧಪಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಸಭೆಯಲ್ಲಿ ಮಾನ್ಯ ಶಾಸಕರು, ಪಾಂಡವಪುರ ವಿಧಾನಸಭಾ ಕ್ಷೇತ್ರ, ಉಪವಿಭಾಗಾಧಿಕಾರಿ ಪಾಂಡವಪುರ, ತಹಸೀಲ್ದಾರ್ ಮುಜರಾಯಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು, ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ವ್ಯವಸ್ಥಾಪನಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.