ಸಾರಾಂಶ
ಬೇಸಗೆಯಲ್ಲಿ ಆಸ್ಪತ್ರೆಯಲ್ಲಿ ನೀರಿನ ಸಮಸ್ಯೆ ಆಗದಂತೆ ಮುಂಜಾಗ್ರತೆ ವಹಿಸಿ ಕ್ರಮ ಕೈಗೊಳ್ಳುವಂತೆ ಹಾಗೂ ಅಗತ್ಯ ಬಿದ್ದಲ್ಲಿ ಹೊಸದಾಗಿ ಬೋರ್‌ವೆಲ್ ಕೊರೆಸುವ ಕಾಮಗಾರಿಯನ್ನು ಶೀಘ್ರದಲ್ಲೇ ಪ್ರಾರಂಭಿಸುವಂತೆ ಎಂಜಿನಿಯರ್‌ಗೆ ಜಿಲ್ಲಾಧಿಕಾರಿ ಸೂಚಿಸಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ವೆನ್‍ಲಾಕ್ ಆಸ್ಪತ್ರೆಯಲ್ಲಿ ನಿರ್ಮಾಣವಾಗಿರುವ ಸರ್ಜಿಕಲ್ ಬ್ಲಾಕ್‍ನಲ್ಲಿ ಕಾಮಗಾರಿಗಳು ವಿಳಂಬವಾಗಿ ನಡೆಯುತ್ತಿರುವ ಬಗ್ಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಜಿಲ್ಲಾಸ್ಪತ್ರೆಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಹಲವು ವರ್ಷ ಕಳೆದರೂ ಸರ್ಜಿಕಲ್ ಬ್ಲಾಕ್ ಕಾಮಗಾರಿ ನಡೆಯುತ್ತಿದೆ. ಈ ಕಟ್ಟಡ ಪೂರ್ಣಗೊಳ್ಳಲು ಉಳಿದಿರುವ ವ್ಯವಸ್ಥೆಗಳನ್ನು ಆದಷ್ಟು ಬೇಗ ಮಾಡಿಕೊಂಡು, ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಿದರು. ಸ್ಮಾರ್ಟ್ ಸಿಟಿಯ ಅಧಿಕಾರಿಗಳು ಮತ್ತು ಎಂಜಿನಿಯರ್ ಅವರಿಗೆ ಉಳಿದಿರುವ ಕೆಲಸ ಕಾರ್ಯಗಳನ್ನು ತಕ್ಷಣವೇ ಪೂರ್ಣಗೊಳಿಸುವಂತೆ ಆದೇಶಿಸಿದರು.
ಆಸ್ಪತ್ರೆಯ ತ್ಯಾಜ್ಯ ಘಟಕದ ದುರಸ್ತಿ ಕಾರ್ಯ ಪೂರ್ಣಗೊಂಡಿದ್ದು, ನಿರ್ವಹಣೆಗೆ ಟೆಂಡರ್ ಕರೆಯುವಂತೆ ಇದೇ ಸಂದರ್ಭ ಜಿಲ್ಲಾಧಿಕಾರಿ ಸೂಚಿಸಿದರು. ಆಸ್ಪತ್ರೆಗೆ ಬರುವ ಎಲ್ಲ ರೋಗಿಗಳ ವೈಯಕ್ತಿಕ ದಾಖಲೆಗಳು, ರೋಗಿಯ ಕಾಯಿಲೆಯನ್ನು ಒಳಗೊಂಡ ಮಾಹಿತಿ ಹಾಗೂ ಚಿಕಿತ್ಸೆಯ ವಿವರಗಳ ಬಗ್ಗೆ ದಾಖಲೆಯನ್ನು ತಯಾರು ಮಾಡಬೇಕು ಮತ್ತು ಅದನ್ನು ಒದಗಿಸುವಂತೆ ಸೂಚಿಸಿದರು.ಬೇಸಗೆಯಲ್ಲಿ ಆಸ್ಪತ್ರೆಯಲ್ಲಿ ನೀರಿನ ಸಮಸ್ಯೆ ಆಗದಂತೆ ಮುಂಜಾಗ್ರತೆ ವಹಿಸಿ ಕ್ರಮ ಕೈಗೊಳ್ಳುವಂತೆ ಹಾಗೂ ಅಗತ್ಯ ಬಿದ್ದಲ್ಲಿ ಹೊಸದಾಗಿ ಬೋರ್‌ವೆಲ್ ಕೊರೆಸುವ ಕಾಮಗಾರಿಯನ್ನು ಶೀಘ್ರದಲ್ಲೇ ಪ್ರಾರಂಭಿಸುವಂತೆ ಎಂಜಿನಿಯರ್‌ಗೆ ಸೂಚಿಸಿದರು.
ವೆನ್‍ಲಾಕ್ ಅಧೀಕ್ಷಕಿ ಜೆಸಿಂತಾ ಡಿಸೋಜ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ, ಸ್ಮಾರ್ಟ್‍ಸಿಟಿ ಎಂಡಿ ರಾಜು.ಕೆ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.ಪರಿಶೀಲನೆ: ಸಭೆಯ ಬಳಿಕ ಜಿಲ್ಲಾಧಿಕಾರಿ ಅವರು ಜಿಲ್ಲಾಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಎರಡು ವಾರಗಳಿಂದ ನೀರು ಸರಿಯಾಗಿ ಸರಬರಾಜು ಆಗದೆ ಸಮಸ್ಯೆ ಆಗುತ್ತಿರುವ ಬಗ್ಗೆ ದೂರನ್ನು ಆಲಿಸಿ, ಖುದ್ದಾಗಿ ನೀರು ಸರಬರಾಜು ಆಗುತ್ತಿರುವ ಆಸ್ಪತ್ರೆಯ ಜಾಗಕ್ಕೆ ಪಾಲಿಕೆಯ ಆಯುಕ್ತರೊಂದಿಗೆ ಭೇಟಿ ನೀಡಿ ವೀಕ್ಷಿಸಿದರು. ಎಂಜಿನಿಯರ್ ಮತ್ತು ಆಸ್ಪತ್ರೆಯ ನಿರ್ವಹಣಕಾರರಿಗೆ ಸಮಸ್ಯೆಯ ಬಗ್ಗೆ ಗಮನ ಹರಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.