ವಕೀಲರ ಪ್ರತಿಭಟನೆಗೆ ಡೀಸಿ ಲತಾ ಕುಮಾರಿ ಬೇಸರ

| Published : Oct 31 2025, 02:00 AM IST

ಸಾರಾಂಶ

ವಕೀಲರು ಪ್ರಜ್ಞಾವಂತ ನಾಗರಿಕರು. ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ಶಾಂತಿಯುತವಾಗಿ ನಡೆದುಕೊಳ್ಳುವುದು ಅಗತ್ಯ. ಅವರು ರಸ್ತೆ ತಡೆ ಮಾಡಿದ ಕಾರಣ ಜನರಿಗೆ ತೊಂದರೆ ಆಗಿದೆ ಎನ್ನುವ ಮಾಹಿತಿಯೂ ಬಂದಿದೆ ಎಂದು ಮನವಿ ಸ್ವೀಕರಿಸದ ವಿಷಯ ಕುರಿತು ಸ್ಪಷ್ಟನೆ ನೀಡಿದದರು.

ಕನ್ನಡಪ್ರಭ ವಾರ್ತೆ ಹಾಸನ

ಜಿಲ್ಲಾಧಿಕಾರಿ ಲತಾ ಕುಮಾರಿ ವಿರುದ್ಧ ವಕೀಲರ ಸಂಘ ನಡೆಸಿದ ಪ್ರತಿಭಟನೆಗೆ ಪ್ರತಿಕ್ರಿಯಿಸಿ, ವಕೀಲರ ಅಸಮಾಧಾನಕ್ಕೆ ಯಾವುದೇ ಸ್ಪಷ್ಟ ಕಾರಣವೇ ಕಾಣಿಸಿಕೊಂಡಿಲ್ಲ ಎಂದು ಹೇಳಿದರು.

ಮಾಧ್ಯಮದೊಂದಿಗೆ ಗುರುವಾರ ಮಾತನಾಡಿ, ಯಾವ ಕಾರಣಕ್ಕೆ ಪ್ರತಿಭಟನೆ ಮಾಡುತ್ತಿದ್ದಾರೆ ಎನ್ನುವುದು ನಮಗೆ ಗೊಂದಲವಾಗಿದೆ. ಮೊನ್ನೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದರೂ ಅದರಲ್ಲಿ ಸ್ಪಷ್ಟತೆ ಇರಲಿಲ್ಲ. ಆ ಸಮಯದಲ್ಲಿ ನಾನು ಎಸ್‌ಸಿಪಿ, ಟಿಎಸ್ಪಿ ಸಂಬಂಧ ಅಧಿಕಾರಿಗಳ ಸಭೆ ನಡೆಸುತ್ತಿದ್ದೆ. ಜೊತೆಗೆ ಹಲವಾರು ಸಾರ್ವಜನಿಕರು ಕೂಡ ಮನವಿ ನೀಡಲು ಕಾದಿದ್ದರು ಎಂದು ವಿವರಿಸಿದರು.

ವಕೀಲರು ಏಕಾಏಕಿ ಆಕ್ರೋಶ ವ್ಯಕ್ತಪಡಿಸಿರುವುದು ಆಘಾತಕಾರಿ. ಯಾವುದೇ ವಿಚಾರವಾಗಲಿ ನಾವು ಯಾವಾಗಲೂ ಸ್ಪಂದನೆ ನೀಡಿದ್ದೇವೆ. ಅವರ ಮನವಿಯನ್ನು ಕೇಳಲು ಸದಾ ತಯಾರಾಗಿದ್ದೇವೆ. ಆದರೆ ಈ ಬಾರಿ ಅವರು ವಿಷಯವನ್ನು ನಮ್ಮ ಗಮನಕ್ಕೆ ತರುವ ಮೊದಲು ಪ್ರತಿಭಟನೆ ನಡೆಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ವಕೀಲರು ಪ್ರಜ್ಞಾವಂತ ನಾಗರಿಕರು. ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ಶಾಂತಿಯುತವಾಗಿ ನಡೆದುಕೊಳ್ಳುವುದು ಅಗತ್ಯ. ಅವರು ರಸ್ತೆ ತಡೆ ಮಾಡಿದ ಕಾರಣ ಜನರಿಗೆ ತೊಂದರೆ ಆಗಿದೆ ಎನ್ನುವ ಮಾಹಿತಿಯೂ ಬಂದಿದೆ ಎಂದು ಮನವಿ ಸ್ವೀಕರಿಸದ ವಿಷಯ ಕುರಿತು ಸ್ಪಷ್ಟನೆ ನೀಡಿದದರು.

ಯಾವುದೇ ಸಮಸ್ಯೆ ಇದ್ದರೂ ಸೂಕ್ತ ಪರಿಹಾರ ಎಂಬುದು ಇದ್ದೇ ಇರುತ್ತದೆ. ಶಾಂತಿಯುತವಾಗಿ ಮಾತನಾಡಿದರೆ ಸಮಸ್ಯೆ ಬಗೆಹರಿಯುತ್ತದೆ ಎಂದು ಸಲಹೆ ನೀಡಿದರು.