ಮತದಾರರ ಪಟ್ಟಿಯನ್ನು ಸಂಪೂರ್ಣ ನಿಖರ ಹಾಗೂ ದೋಷರಹಿತವಾಗಿಸುವುದು ಚುನಾವಣಾ ಆಯೋಗದ ಪ್ರಮುಖ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರತಿಯೊಬ್ಬ ಮತದಾರರ ಮನೆಗೆ ತೆರಳಿ ಅಗತ್ಯ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಸಾರ್ವಜನಿಕರು ಈ ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡಿ, ಬಿ.ಎಲ್.ಒ.ಗಳು ಭೇಟಿ ನೀಡಿದಾಗ ಅಗತ್ಯ ದಾಖಲೆಗಳು ಹಾಗೂ ಮಾಹಿತಿಯನ್ನು ಒದಗಿಸಬೇಕು

ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ:

ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಕಾರ್ಯಕ್ಕೆ ಮಂಗಳವಾರ ಜಿಲ್ಲಾಧಿಕಾರಿ ಜಿ. ಪ್ರಭು ಅಧಿಕೃತ ಚಾಲನೆ ನೀಡಿದರು.

ತಾಲೂಕಿನ ಅಡವಿಗೊಲ್ಲವಾರಹಳ್ಳಿ ಗ್ರಾಮದಲ್ಲಿ ಹಿರಿಯ ನಾಗರಿಕರಿಗೆ ಗಣತಿ ನಮೂನೆಗಳನ್ನು ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸುದ್ದಿಗಾರರೊಂದಿಗೆ ಮಾತನಾಡಿ, ಮತದಾರರ ಪಟ್ಟಿಯನ್ನು ಸಂಪೂರ್ಣ ನಿಖರ ಹಾಗೂ ದೋಷರಹಿತವಾಗಿಸುವುದು ಚುನಾವಣಾ ಆಯೋಗದ ಪ್ರಮುಖ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರತಿಯೊಬ್ಬ ಮತದಾರರ ಮನೆಗೆ ತೆರಳಿ ಅಗತ್ಯ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಸಾರ್ವಜನಿಕರು ಈ ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡಿ, ಬಿ.ಎಲ್.ಒ.ಗಳು ಭೇಟಿ ನೀಡಿದಾಗ ಅಗತ್ಯ ದಾಖಲೆಗಳು ಹಾಗೂ ಮಾಹಿತಿಯನ್ನು ಒದಗಿಸಬೇಕು ಎಂದು ಮನವಿ ಮಾಡಿದರು.

ಈ ಅಭಿಯಾನದ ಅಂಗವಾಗಿ ಜಿಲ್ಲೆಯಾದ್ಯಂತ ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿ.ಎಲ್.ಒ.) ಮನೆ ಮನೆಗೆ ಭೇಟಿ ನೀಡಿ ಹಾಲಿ ಮತದಾರರಿಗೆ ಗಣತಿ ನಮೂನೆಗಳನ್ನು ವಿತರಿಸುವ ಕಾರ್ಯವನ್ನು ಇಂದಿನಿಂದ ಆರಂಭಿಸಿದ್ದು, ಹೊಸ ಮತದಾರರ ನೋಂದಣಿ ಹಾಗೂ ಮತದಾರರ ವಿವರಗಳ ಪರಿಷ್ಕರಣೆಗೂ ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಈ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯಕ್ಕಾಗಿ 1,293 ಮಂದಿ ಮತಗಟ್ಟೆ ಮಟ್ಟದ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಅವರು ಜುಲೈ 29ರವರೆಗೆ ಮನೆ ಮನೆಗೆ ಭೇಟಿ ನೀಡಿ ಪ್ರತಿಯೊಬ್ಬ ಮತದಾರರಿಗೂ ಗಣತಿ ನಮೂನೆಗಳನ್ನು ವಿತರಿಸಿ, ಭರ್ತಿ ಮಾಡಿದ ಮಾಹಿತಿಯನ್ನು ಆನ್‌ಲೈನ್ ತಂತ್ರಾಂಶದಲ್ಲಿ ದಾಖಲಿಸಲಿದ್ದಾರೆ. ಈ ಪ್ರಕ್ರಿಯೆಯ ಮೂಲಕ ಮತದಾರರ ಹೆಸರು, ವಿಳಾಸ, ವಯಸ್ಸು ಹಾಗೂ ಇತರ ವಿವರಗಳನ್ನು ಪರಿಶೀಲಿಸಿ ಅಗತ್ಯ ತಿದ್ದುಪಡಿಗಳನ್ನು ಮಾಡಲಾಗುತ್ತದೆ ಎಂದರು.

ಅಡವಿಗೊಲ್ಲವಾರಹಳ್ಳಿಯ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಾದ ವೆಂಕಟಮ್ಮ, ಚಿನ್ನಮ್ಮ, ವೆಂಕಟಪ್ಪ, ಮೇಲೂರಪ್ಪ ಹಾಗೂ ಮುನಿನಂಜಪ್ಪ ಅವರಿಗೆ ಜಿಲ್ಲಾಧಿಕಾರಿಗಳು ಸ್ವತಃ ಬಿ.ಎಲ್.ಒ.ಗಳ ಮೂಲಕ ಗಣತಿ ನಮೂನೆ ವಿತರಿಸಿದರು. ಅಲ್ಲದೆ ಸ್ಥಳದಲ್ಲಿಯೇ ಹಿರಿಯ ನಾಗರಿಕರಿಂದ ಅಗತ್ಯ ಮಾಹಿತಿಯನ್ನು ಪಡೆದು ಆನ್‌ಲೈನ್ ವ್ಯವಸ್ಥೆಯಲ್ಲಿ ದಾಖಲಿಸುವ ಕಾರ್ಯವನ್ನು ಪರಿಶೀಲಿಸಿ ಅಧಿಕಾರಿಗಳಿಗೆ ಅಗತ್ಯ ಸಲಹೆ ಹಾಗೂ ಮಾರ್ಗದರ್ಶನ ನೀಡಿದರು. ಗಣತಿ ನಮೂನೆ ಸ್ವೀಕರಿಸಿ ಮಾಹಿತಿ ನೀಡಿದ ಹಿರಿಯ ನಾಗರಿಕರಿಗೆ ಸನ್ಮಾನ ಮಾಡಿದರು.

ಸಿಕೆಬಿ-4

ತಾಲೂಕಿನ ಅಡವಿಗೊಲ್ಲಾರಹಳ್ಳಿ ಗ್ರಾಮದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಕಾರ್ಯಾರಂಭದಲ್ಲಿ ಗಣತಿ ನಮೂನೆ ಸ್ವೀಕರಿಸಿ ಮಾಹಿತಿ ನೀಡಿದ ಹಿರಿಯ ನಾಗರಿಕರನ್ನು ಜಿಲ್ಲಾಧಿಕಾರಿ ಜಿ.ಪ್ರಭು ಸನ್ಮಾನಿಸಿದರು.