ಸಾರಾಂಶ
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಬುಧವಾರ ತಾಲೂಕಿನ ಬಗದಲ್ ಗ್ರಾಮದ ಶಾಲೆಯಲ್ಲಿ ಕೆಲಹೊತ್ತು ಗಣಿತ ಶಿಕ್ಷಕಿಯಾಗಿ ಮಕ್ಕಳಿಗೆ ಪಾಠ ಹೇಳುವ ಮೂಲಕ ಸ್ಫೂರ್ತಿ ನೀಡಿದರಲ್ಲದೇ ನಲಿಕಲಿ ಕೇಂದ್ರದ ಚಿಕ್ಕ ಮಕ್ಕಳ ಚಟುವಟಿಕೆಗಳನ್ನು ವೀಕ್ಷಿಸಿ ಸಮಯ ಕಳೆದರು.
ಕನ್ನಡಪ್ರಭ ವಾರ್ತೆ ಬೀದರ್
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಬುಧವಾರ ತಾಲೂಕಿನ ಬಗದಲ್ ಗ್ರಾಮದ ಶಾಲೆಯಲ್ಲಿ ಕೆಲಹೊತ್ತು ಗಣಿತ ಶಿಕ್ಷಕಿಯಾಗಿ ಮಕ್ಕಳಿಗೆ ಪಾಠ ಹೇಳುವ ಮೂಲಕ ಸ್ಫೂರ್ತಿ ನೀಡಿದರಲ್ಲದೇ ನಲಿಕಲಿ ಕೇಂದ್ರದ ಚಿಕ್ಕ ಮಕ್ಕಳ ಚಟುವಟಿಕೆಗಳನ್ನು ವೀಕ್ಷಿಸಿ ಸಮಯ ಕಳೆದರು.ಬಗದಲ್ ಗ್ರಾಮದ ಪ್ರಾಥಮಿಕ ಶಾಲೆ ಹಾಗೂ ಮೌಲಾನಾ ಆಜಾದ್ ಪ್ರೌಢಶಾಲೆಗೆ ಭೇಟಿ ನೀಡಿ ಶಿಥಿಲಗೊಂಡ ಕಟ್ಟಡಗಳ ಪರಿಶೀಲನೆ ನಡೆಸಿದಲ್ಲದೇ ಇತ್ತೀಚಿಗೆ ವಿದ್ಯಾರ್ಥಿ ಯೊಬ್ಬರ ಮೇಲೆ ಗೋಡೆಯ ಪ್ಲಾಸ್ಟರ ಬಿದ್ದು ಗಾಯಗೊಂಡಿರುವ ವಿದ್ಯಾರ್ಥಿಯ ಆರೋಗ್ಯದ ಬಗ್ಗೆ ಶಿಕ್ಷಕರಿಂದ ಮಾಹಿತಿ ಪಡೆದರು.
ಬಗದಲ್ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಗಣಿತ ಪಾಠ ಮಾಡಿದರು. ಮಕ್ಕಳ ಶೈಕ್ಷಣಿಕ ಗುಣಮಟ್ಟ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಶಾಲಾ ಉಪನಿರ್ದೇಶಕರಾದ ಓಂಕಾರ ರುಗನ್ ಹಾಗೂ ಬಿ.ಇ.ಒ ಮದರಖಾನ್ ಉಪಸ್ಥಿತರಿದ್ದರು.ನಂತರ ಅವರು ತಾಲೂಕಿನ ಸಿಕಿಂದ್ರಾಪೂರ ಹಾಲು ಉತ್ಪಾದಕರ ಸಂಘಕ್ಕೆ ಭೇಟಿ ನೀಡಿ ಮಹಿಳಾ ಸದಸ್ಯರೊಂದಿಗೆ ಹಾಲು ಶೇಖರಣೆ ಬಗ್ಗೆ ಮಾಹಿತಿ ಪಡೆದರು.
ಅಲ್ಲಿಂದ ಭಾಲ್ಕಿ ತಾಲ್ಲೂಕಿನ ಹಾಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದರು. ದಿನನಿತ್ಯ ಬರುವ ಹೊರ ರೋಗಿಗಳ ಬಗ್ಗೆ ಹೆರಿಗೆ ಕೋಣೆ ಹಾಗೂ ಔಷಧಾಲಯವನ್ನು ಪರಿಶೀಲಿಸಿದರು.ನಾಯಿ ಕಡಿತ ಹಾಗೂ ಹಾವು ಕಡಿತಕ್ಕೆ ಲಸಿಕೆಗಳನ್ನು ಕಡ್ಡಾಯವಾಗಿ ಲಭ್ಯವಿರುವಂತೆ ಸೂಚಿಸಿದರು. ಅನಿಮಿಯಾ ನಿಯಂತ್ರಣಕ್ಕೆ ಕ್ರಮ ವಹಿಸುವಂತೆ ತಿಳಿಸಿದರು. ವೈದ್ಯಾಧಿಕಾರಿ ಡಾ.ಜೋಹಾ ಫಾತಿಮಾ ಉಪಸ್ಥಿತರಿದ್ದರು.