ಕನ್ನಡಪ್ರಭ ವಾರ್ತೆ ಕೋಲಾರಸರ್ಕಾರಿ ಇಲಾಖೆಗಳು, ಸರ್ಕಾರದ ಸ್ವಾಮ್ಯದ ಪ್ರಾಧಿಕಾರಗಳು ಹಾಗೂ ಇತರೆಡೆ ಕನ್ನಡಭಾಷೆ ಆಡಳಿತದಲ್ಲಿ ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕೆಂದು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ತಿಳಿಸಿದರು.ಸೋಮವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ತಮ್ಮ ಕಚೇರಿಯಲ್ಲಿ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.ಜಿಲ್ಲೆಯ ಎಲ್ಲಾ ವ್ಯಾಪಾರ ಮಳಿಗೆಗಳು ಕೈಗಾರಿಕೆಗಳು, ಕಚೇರಿಗಳಲ್ಲಿ, ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆಯಲ್ಲೇ ಇರುವಂತೆ ಸಂಬಂಧಪಟ್ಟ ಇಲಾಖೆಗಳು ಕ್ರಮ ವಹಿಸಬೇಕು. ಕನ್ನಡ ನಮ್ಮ ಮಾತೃಭಾಷೆ ತಾಯಿಗೆ ಸಮಾನ, ಅದಕ್ಕೆ ಪ್ರಾಶಸ್ತ್ಯ ಕೊಡದಿದ್ದರೆ ಹೆತ್ತ ತಾಯಿಗೆ ಅವಮಾನ ಮಾಡಿದಂತೆ. ಆದ್ದರಿಂದ ಎಲ್ಲರೂ ಈ ಕುರಿತು ಗಮನ ಹರಿಸಬೇಕು. ಎಲ್ಲಾ ಇಲಾಖೆಗಳ ವೆಬ್‌ಸೈಟ್‌ಗಳು, ಟೆಂಡರ್ ಪ್ರಕ್ರಿಯೆಗಳು ಮತ್ತು ಅರ್ಜಿ ನಮೂನೆಗಳು ಕಡ್ಡಾಯವಾಗಿ ಕನ್ನಡದಲ್ಲಿರಬೇಕು ಎಂದು ಸೂಚಿಸಿದರು.

ಕನ್ನಡ ಶಾಲೆಗಳ ಪ್ರಸ್ತಾಪ: ಕನ್ನಡ ಅನುಷ್ಠಾನದ ಸಮಿತಿ ಸದಸ್ಯ ಜೆ.ಜಿ. ನಾಗರಾಜ ಮಾತನಾಡಿ, ಕನ್ನಡ ಶಾಲೆಗಳು ಮುಚ್ಚುತ್ತಿರುವ ಬಗ್ಗೆ ಪ್ರಸ್ತಾಪಿಸಿದರು. ಅದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ಶಿಕ್ಷಣ, ಮುಂತಾದ ಪೂರಕ ಇಲಾಖೆಯೊಂದಿಗೆ ಸಭೆ ಕರೆದು ಈ ಕುರಿತು ವಿಸ್ಮೃತವಾಗಿ ಚರ್ಚಿಸಲಾಗುವುದು ಎಂದರು.ಜಿಲ್ಲಾ ಕನ್ನಡ ಅನುಷ್ಠಾನ ಸಮಿತಿ ಸದಸ್ಯರು ಬೆಮೆಲ್ ಹಾಗೂ ಕೆಲವು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಕನ್ನಡ ವ್ಯವಹಾರದ ಭಾಷೆಯಾಗಿಲ್ಲ, ಈ ಬಗ್ಗೆ ಕ್ರಮ ಕೈಗೊಳ್ಳಬೇಕು, ಜಿಲ್ಲಾಧಿಕಾರಿ ಕನ್ನಡ ಭಾಷೆ ಇತರೆ ಭಾಷಿಗರೂ ಪ್ರೀತಿಯಿಂದ ಸ್ವೀಕರಿಸಿ ಕಲಿತದ್ದೇ ಆದರೆ ಸಮಸ್ಯೆ ಪರಿಹಾರಗೊಳ್ಳುವುದು ಎಂದರು.ಸಭೆಯಲ್ಲಿ ಅಪರ ಪೋಲಿಸ್ ವರಿಷ್ಠಾಧಿಕಾರಿ ಜಗದೀಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ವಿಜಯಲಕ್ಷ್ಮೀ ಇದ್ದರು.

೧೧ಕೆಎಲ್‌ಆರ್-೪

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕೋಲಾರದ ಡಿಸಿ ಕಚೇರಿಯಲ್ಲಿ ಸೋಮವಾರ ನಡೆದ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಮಾತನಾಡಿದರು.