ಸಾರಾಂಶ
ಮರಿಯಮ್ಮನಹಳ್ಳಿಯ ಶ್ರೀ ಲಕ್ಷ್ಮೀನಾರಾಯಣಸ್ವಾಮಿ ಹಾಗೂ ಶ್ರೀ ಆಂಜನೇಯಸ್ವಾಮಿ ನೂತನ ಜೋಡಿ ರಥಗಳು ಉತ್ತರ ಕರ್ನಾಟಕದಲ್ಲಿ ಅತಿ ಎತ್ತರವಾದ ರಥಗಳಾಗಲಿವೆ.
ಮರಿಯಮ್ಮನಹಳ್ಳಿ: ಉತ್ತರ ಕರ್ನಾಟದಲ್ಲೇ ಮಾದರಿಯಾಗುವಂತಹ ರಥಗಳು ಮರಿಯಮ್ಮನಹಳ್ಳಿಯಲ್ಲಿ ನಿರ್ಮಾಣವಾಗುತ್ತಿವೆ ಎಂದು ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಹೇಳಿದರು.
ಇತ್ತೀಚೆಗೆ ಪಟ್ಟಣದ ಆರಾಧ್ಯದೈವಗಳಾದ ಶ್ರೀ ಲಕ್ಷ್ಮೀನಾರಾಯಣಸ್ವಾಮಿ ಹಾಗೂ ಶ್ರೀ ಆಂಜನೇಯಸ್ವಾಮಿ ಜೋಡಿ ರಥಗಳ ನಿರ್ಮಾಣ ಕಾಮಗಾರಿ ಪ್ರಗತಿ ಪರಿಶೀಲನೆ ವೀಕ್ಷಿಸಿದ ಆನಂತರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ಮರಿಯಮ್ಮನಹಳ್ಳಿಯ ಶ್ರೀ ಲಕ್ಷ್ಮೀನಾರಾಯಣಸ್ವಾಮಿ ಹಾಗೂ ಶ್ರೀ ಆಂಜನೇಯಸ್ವಾಮಿ ನೂತನ ಜೋಡಿ ರಥಗಳು ಉತ್ತರ ಕರ್ನಾಟಕದಲ್ಲಿ ಅತಿ ಎತ್ತರವಾದ ರಥಗಳಾಗಲಿವೆ. ಈ ರಥಗಳ ನಿರ್ಮಾಣಕ್ಕೆ ಉತ್ತರ ಕನ್ನಡದಿಂದ ಕಟ್ಟಿಗೆಗಳನ್ನು ತರಿಸಲಾಗಿದೆ. ರಾಜಸ್ಥಾನದ ಕುಶಲಕರ್ಮಿಗಳಿಂದ ರಥಗಳ ಕೆತ್ತನೆ ಕಾರ್ಯ ನಡೆಯುತ್ತಿದೆ. ಮುಂದೆ ಈ ಭಾಗದಲ್ಲಿ ಮಾದರಿ ರಥಗಳಾಗಲಿವೆ ಎಂದು ಅವರು ಹೇಳಿದರು.
600- 700 ವರ್ಷಗಳ ನಂತರ ಪಟ್ಟಣದಲ್ಲಿ ನೂತನ ರಥಗಳ ನಿರ್ಮಾಣವಾಗುತ್ತಿವೆ. ಇಲ್ಲಿನ ಭಕ್ತರ ಸೇವೆ ಮಾದರಿಯಾಗಿದೆ. ₹100ಯಿಂದ ಮೊದಲ್ಗೊಂಡು ಕೋಟ್ಯಂತರ ರು. ವರೆಗೂ ರಥಗಳ ನಿರ್ಮಾಣಕ್ಕೆ ಭಕ್ತರಿಂದ ದೇಣಿಗೆ ಬಂದಿದೆ. ದೇಣಿಗೆ ಹಣ ದುರ್ಬಳಕೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ. ದೇವಸ್ಥಾನದ ಆವರಣದಲ್ಲಿ ಭಕ್ತರಿಗೆ ನೆರಳಿನಾಶ್ರಯಕ್ಕಾಗಿ ಮೇಲ್ಚಾವಣಿ ಹಾಕುವ ಕಾರ್ಯ ನಡೆಯುತ್ತಿದೆ. ಭಕ್ತರ ಅಪೇಕ್ಷೆಯಂತೆ ಮುಂದಿನ ಹಂತದಲ್ಲಿ ಗೋಪುರ ಕಾರ್ಯಕ್ಕೆ ರೂಪುರೇಷೆ ತಯಾರಿಸಲಾಗುವುದು ಎಂದು ಅವರು ಹೇಳಿದರು.ಹೊಸಪೇಟೆ ತಹಸೀಲ್ದಾರ್ ಶ್ರುತಿ ಎಂ.ಎಂ. ಗೌಡರ್, ಉಪತಹಸೀಲ್ದಾರ್ ಎಚ್. ನಾಗರಾಜ್, ಕಂದಾಯ ನಿರೀಕ್ಷಕ ಅಂದಾನಗೌಡ, ದೇವಸ್ಥಾನ ಅಭಿವೃದ್ಧಿ ಸಮಿತಿ ಸದಸ್ಯರಾದ ಚಿದ್ರಿ ಸತೀಶ, ಗೋವಿಂದರ ಪರಶುರಾಮ, ತಳವಾರ ದೊಡ್ಡರಾಮಣ್ಣ, ಡಾ. ಈ. ಎರ್ರಿಸ್ವಾಮಿ, ಸಜ್ಜೇದ ವಿಶ್ವನಾಥ, ಸ್ಥಳೀಯ ಮುಖಂಡರಾದ ಎಲೆಗಾರ ಮಂಜುನಾಥ, ನಂದೀಶ್, ದೊಡ್ಡ ಮಂಜುನಾಥ ಉಪಸ್ಥಿತರಿದ್ದರು.