ಸಾರಾಂಶ
ಸಂದೀಪ್ ವಾಗ್ಲೆ
ಕನ್ನಡಪ್ರಭ ವಾರ್ತೆ ಮಂಗಳೂರುಸ್ಥಳೀಯ ಈಜುಪಟುಗಳನ್ನು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟಕ್ಕೆ ತಯಾರುಗೊಳಿಸುವ ಆಶಯದಿಂದ ಕೆಲ ಸಮಯದ ಹಿಂದಷ್ಟೇ ಎಮ್ಮೆಕೆರೆ ಅಂತಾರಾಷ್ಟ್ರೀಯ ಈಜುಕೊಳ ಉದ್ಘಾಟನೆಗೊಂಡಿದೆ. ಆದರೆ ಉಚಿತವಾಗಿ ಈ ಈಜುಕೊಳದ ಪ್ರಯೋಜನ ಪಡೆದುಕೊಂಡು ಸಾಧನೆ ಮಾಡಬಹುದು ಎಂಬ ಆಸೆ ಇಟ್ಟುಕೊಂಡಿದ್ದ ಈಜುಪಟುಗಳಿಗೆ ನಿರಾಸೆಯಾಗಿದೆ. ಇಲ್ಲಿ ಅಭ್ಯಾಸ ಮಾಡಬೇಕಾದರೆ ನಿಗದಿತ ದರ ಪಾವತಿಸಲೇಬೇಕು!
ಎಮ್ಮೆಕೆರೆ ಈಜುಕೊಳ ನಿರ್ಮಾಣ ಆಗುವ ಮೊದಲು ಮಂಗಳೂರಿನಲ್ಲಿ ಸರ್ಕಾರದ ಅಧೀನದಲ್ಲಿ ಇದ್ದದ್ದು ಮಂಗಳಾ ಈಜುಕೊಳವೊಂದೇ. ಇಲ್ಲಿ ಕೆಲ ವರ್ಷಗಳಿಂದ ಈಜಿನಲ್ಲಿ ಪದಕ ಪಡೆದ ಕ್ರೀಡಾಳುಗಳಿಗೆ ಅಭ್ಯಾಸಕ್ಕೆ ಉಚಿತವಾಗಿ ಅವಕಾಶ ಒದಗಿಸಲಾಗಿದ್ದು, ಈಗಲೂ ಮುಂದುವರಿದಿದೆ. ಈ ರೀತಿಯ ಪ್ರೋತ್ಸಾಹದ ಕಾರಣದಿಂದ ಅನೇಕ ಈಜುಪಟುಗಳು ತಯಾರಾಗಿದ್ದಾರೆ. ಅದೇ ರೀತಿ ಎಮ್ಮೆಕೆರೆ ಈಜುಕೊಳದಲ್ಲೂ ಉಚಿತ ವ್ಯವಸ್ಥೆ ಇರಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಈಜುಪಟುಗಳನ್ನು ರೂಪುಗೊಳಿಸುವ ಉದ್ದೇಶದಿಂದ ಸ್ಥಾಪನೆಯಾಗಿರುವ ನೂತನ ಈಜುಕೊಳಕ್ಕೆ ಇಳಿಯಬೇಕಾದರೆ ಹಣ ಪಾವತಿಸಬೇಕಾದ ಸಂದಿಗ್ಧತೆಗೆ ಸಿಲುಕಿದ್ದಾರೆ.ಸಾವಿರ ರು. ಶುಲ್ಕ:
‘‘ಮಂಗಳಾ ಈಜುಕೊಳದಲ್ಲಿ ಮಂಗಳಾ ಕ್ಲಬ್ ಅಡಿಯಲ್ಲಿ ನನ್ನ ಮೂವರು ಮಕ್ಕಳು ಈಜು ತರಬೇತಿ ಪಡೆಯುತ್ತಿದ್ದಾರೆ. ಅವರಲ್ಲಿ ಇಬ್ಬರು ಪದಕ ವಿಜೇತರಾಗಿರುವುದರಿಂದ ಉಚಿತವಾಗಿ ಅಭ್ಯಾಸ ಮಾಡಲು ಆಡಳಿತ ಅವಕಾಶ ಕಲ್ಪಿಸಿದೆ. ಎಮ್ಮೆಕೆರೆ ಈಜುಕೊಳದಲ್ಲಿ ಈಜು ಸ್ಪರ್ಧೆಗೆ ಅಭ್ಯಾಸ ಮಾಡಲು ಪೂರಕ ಸುಸಜ್ಜಿತ ವ್ಯವಸ್ಥೆ ಇರುವುದರಿಂದ ಅಲ್ಲಿ ತರಬೇತಿ ನೀಡಲು ಉದ್ದೇಶಿಸಿದ್ದೆವು. ಆದರೆ ಪದಕ ಪಡೆದ ಕ್ರೀಡಾಳುಗಳಿಗೂ ತಿಂಗಳಿಗೆ ಒಂದು ಸಾವಿರ ರು. ಶುಲ್ಕ ನಿಗದಿ ಮಾಡಿದ್ದಾರೆ’’ ಎಂದು ಕೋಡಿಕಲ್‌ನ ಮಹೇಶ್ ಕುಮಾರ್ ‘ಕನ್ನಡಪ್ರಭ’ಕ್ಕೆ ಹೇಳಿದರು.120ಕ್ಕೂ ಅಧಿಕ ಕ್ರೀಡಾಳುಗಳಿಗೆ ಸಮಸ್ಯೆ:
ಪ್ರಸ್ತುತ ಮಂಗಳಾ ಈಜುಕೊಳದಲ್ಲಿ 10ನೇ ವಯಸ್ಸಿನಿಂದ ಪದವಿಯವರೆಗಿನ 120ಕ್ಕೂ ಅಧಿಕ ಈಜುಪಟುಗಳು ತರಬೇತಿ ಪಡೆಯುತ್ತಿದ್ದಾರೆ. ಇಂಥ ಸ್ಪೋರ್ಟ್ಸ್ ಬ್ಯಾಚ್‌ನ ಈಜುಪಟುಗಳಿಗೆ ಬೆಳಗ್ಗೆ 5ರಿಂದ 6.30ರವರೆಗೆ ಹಾಗೂ ರಾತ್ರಿ 7.30ರಿಂದ 9.30ರವರೆಗೆ ಉಚಿತ ಅಭ್ಯಾಸಕ್ಕೆ ಅವಕಾಶವಿದೆ. 120ಕ್ಕೂ ಅಧಿಕ ಮಂದಿ ಇರುವುದರಿಂದ ಒಂದೇ ಈಜುಕೊಳದಲ್ಲಿ ಏಕಕಾಲದಲ್ಲಿ ಅಭ್ಯಾಸ ಮಾಡಲು ಸ್ಥಳಾವಕಾಶದ ಕೊರತೆ ಇದೆ. ಆದರೆ ಎಮ್ಮೆಕೆರೆಯಲ್ಲಿ ಮೂರು ಬಗೆಯ ಈಜುಕೊಳಗಳಿದ್ದು, ಹಲವು ಲೇನ್‌ಗಳಿವೆ. ಹಾಗಾಗಿ ಅಲ್ಲಿಗೆ ಸ್ಥಳಾಂತರ ಆಗಲು ಈಜುಪಟುಗಳು ತಯಾರಾಗಿದ್ದಾರೆ. ಆದರೆ ಅನೇಕ ಬಡ ಮಕ್ಕಳಿಗೆ ಶುಲ್ಕ ಕಟ್ಟುವುದೇ ಹೊರೆಯಾಗಿದೆ.ಬಡ ಮಕ್ಕಳಿಗೆ ಸಮಸ್ಯೆ:
‘‘ಈಜು ತರಬೇತಿ ಪಡೆಯಲು ತರಬೇತುದಾರರಿಗೆ ತಿಂಗಳಿಗೆ ಸುಮಾರು 1,500 ರು. ಪಾವತಿಸಬೇಕು. ಮನೆಯಿಂದ ಈಜುಕೊಳಕ್ಕೆ ಪ್ರತ್ಯೇಕ ವ್ಯಾನ್ ವ್ಯವಸ್ಥೆ, ಅದಕ್ಕೆ ಸಾವಿರ ರು. ನೀಡಬೇಕು. ಅದರ ಮೇಲೆ ಈಜುಕೊಳಕ್ಕೆ 1 ಸಾವಿರ ರು. ಶುಲ್ಕ ಹಾಕಿದರೆ ತಿಂಗಳ ಖರ್ಚೇ ದೊಡ್ಡದಾಗುತ್ತದೆ. ಬಡವರ ಮಕ್ಕಳು ಕ್ರೀಡೆಯಲ್ಲಿ ಸಾಧನೆ ಮಾಡಲು ತೊಡಕಾಗಲಿದೆ” ಎಂದು ಕ್ರೀಡಾಪಟುವೊಬ್ಬರ ಪೋಷಕರು ಅಳಲು ತೋಡಿಕೊಂಡರು.“ಎಮ್ಮೆಕೆರೆ ಈಜುಕೊಳ ಸರ್ಕಾರದ ಅಧೀನದಲ್ಲಿ ಇರುವುದರಿಂದ ಪದಕ ವಿಜೇತರಿಗೆ ಸಂಪೂರ್ಣ ಉಚಿತವಾಗಿ ಅಭ್ಯಾಸ ಮಾಡಲು ಅವಕಾಶ ಕಲ್ಪಿಸಬೇಕು. ಅಲ್ಲದೆ, ಪೂರ್ಣಾವಧಿ ತರಬೇತುದಾರರನ್ನು ಇಲ್ಲಿ ನಿಯೋಜಿಸಬೇಕು. ಹೀಗೆ ಮಾಡುವುದರಿಂದ ತರಬೇತಿಗಾಗಿ ನೀಡುವ ಶುಲ್ಕವೂ ಉಳಿತಾಯವಾಗಿ ಬಡ ಮಕ್ಕಳೂ ಕ್ರೀಡೆಯಲ್ಲಿ ಸಾಧನೆ ಮಾಡಲು ಪ್ರೋತ್ಸಾಹ ನೀಡಿದಂತಾಗುತ್ತದೆ. ಅಲ್ಲದೆ ಸ್ಪೋರ್ಟ್ಸ್ ಬ್ಯಾಚ್‌ನ ಅಭ್ಯಾಸ ಅವಧಿಯನ್ನೂ ಏರಿಕೆ ಮಾಡಬೇಕು” ಎಂದು ಮಹೇಶ್ ಕುಮಾರ್ ಒತ್ತಾಯಿಸುತ್ತಾರೆ.
ಪ್ರಸ್ತುತ ಮಂಗಳಾ ಈಜುಕೊಳದಲ್ಲೂ, ಎಮ್ಮೆಕೆರೆಯಲ್ಲೂ ಸ್ಪೋರ್ಟ್ಸ್ ಬ್ಯಾಚ್ ಹೊರತುಪಡಿಸಿ ಸಾರ್ವಜನಿಕರಿಗೆ ನಿಗದಿತ ಶುಲ್ಕ ವಿಧಿಸಲಾಗಿದೆ. ಆದರೆ ಸಾಧನೆಯ ಹಾದಿಯಲ್ಲಿರುವ ಈಜುಪಟುಗಳಿಗೆ ಶುಲ್ಕ ವಿಧಿಸುವುದನ್ನು ನಿಲ್ಲಿಸಬೇಕು. ಮಂಗಳಾ ಈಜುಕೊಳದಲ್ಲಿರುವ ಉಚಿತ ನಿಯಮವನ್ನು ಎಮ್ಮೆಕೆರೆಯಲ್ಲೂ ಜಾರಿಗೆ ತರಬೇಕು. ಶುಲ್ಕ ವಿಧಿಸಿದರೆ ಬಡವರ ಮಕ್ಕಳಿಗೆ ಸಾಧನೆ ಮಾಡಲು ತೊಡಕಾಗಲಿದೆ ಎನ್ನುತ್ತಾರೆ ಈಜುಪಟು ಮಕ್ಕಳ ಪೋಷಕರಾದ ಮಹೇಶ್ ಕುಮಾರ್ ಕೋಡಿಕಲ್.