ಸಾರಾಂಶ
ಮಾನವೀಯ ಮೌಲ್ಯಗಳನ್ನು ನಮ್ಮ ಮುಂದಿನ ಪೀಳಿಗೆಗೆ ಮನದಟ್ಟು ಮಾಡುವ ಅಗತ್ಯವಿದೆ ಎಂದು ಹಾಲಪ್ಪ ಫೌಂಡೇಶನ್ ಅಧ್ಯಕ್ಷ ಮುರುಳೀಧರ ಹಾಲಪ್ಪ ತಿಳಿಸಿದರು.
ಕನ್ನಡಪ್ರಭ ವಾರ್ತೆ ಮಧುಗಿರಿಮಾನವೀಯ ಮೌಲ್ಯಗಳನ್ನು ನಮ್ಮ ಮುಂದಿನ ಪೀಳಿಗೆಗೆ ಮನದಟ್ಟು ಮಾಡುವ ಅಗತ್ಯವಿದೆ ಎಂದು ಹಾಲಪ್ಪ ಫೌಂಡೇಶನ್ ಅಧ್ಯಕ್ಷ ಮುರುಳೀಧರ ಹಾಲಪ್ಪ ತಿಳಿಸಿದರು.
ಇಲ್ಲಿನ ಜಾಮೀಯಾ ಮಸೀದಿಗೆ ಭೇಟಿ ನೀಡಿ ಪವಿತ್ರ ರಂಜಾನ್ ಮಾಸದ ಪ್ರಯುಕ್ತ ಮುಸ್ಲಿಂ ಬಂಧುಗಳಿಗೆ ಶುಭ ಕೋರಿ ಮಾತನಾಡಿದ ಅವರು, ಈ ಕಾರ್ಯ ಸಾಕಷ್ಟು ವರ್ಷಗಳಿಂದ ನಡೆದು ಬರುತ್ತಿದ್ದು ಹಿಂದು-ಮುಸ್ಲಿಂ ಜನಾಂಗದ ನಡುವೆ ಸ್ನೇಹ, ಪ್ರೀತಿ ವಾತ್ಸಲ್ಯದಿಂದ ಇದೆ. ಪರಸ್ಪರರ ಹೊಂದಿಕೊಂಡು ಬದುಕು ಸಾಗಿಸುವ ನಿಟ್ಟಿನಲ್ಲಿ ಸಹಬಾಳ್ವೆ ನಡೆಸುತ್ತಿದ್ದಾರೆ ಎಂದರು.ಈ ಜಾಮೀಯಾ ಮಸೀದಿ ಐನೂರು ವರ್ಷಗಳ ಇತಿಹಾಸವಿರುವ ಪುರಾತನ ಪುಣ್ಯಸ್ಥಳ. ಇಲ್ಲಿ ನಾವು ಕೋರಿದ ಬೇಡಿಕೆಗಳು ಈಡೇರುತ್ತವೆ ಎಂಬ ನಂಬಿಕೆಯಿದೆ. ರಂಜಾನ್ ಉಪವಾಸ ಮನುಷ್ಯನ ಆರೋಗ್ಯ ರಕ್ಷಣೆಗೆ ಸಹಕಾರಿ, ಉಪವಾಸ ಅತ್ಯಂತ ಶ್ರೇಷ್ಠವಾದುದು, ದೈಹಿಕ ಹಾಗೂ ಮಾನಸಿಕ ಶುದ್ಧತೆಗೆ ಪೂರಕ ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಜಿ.ಶ್ರೀನಿವಾಸಮೂರ್ತಿ ಮಾತನಾಡಿ, ಧಾರ್ಮಿಕ ಹಿನ್ನೆಲೆಯುಳ್ಳ ಜಾಮೀಯಾ ಮಸೀದಿಗೆ ರಾಜ್ಯ ಮತ್ತು ಹೊರ ರಾಜ್ಯಗಳಿಂದ ಭಕ್ತಾದಿಗಳು ಆಗಮಿಸಿ ಪ್ರಾರ್ಥನೆ ಸಲ್ಲಿಸುವರು. ಹಿಂದು-ಮುಸ್ಲಿಂಮರು ಸ್ನೇಹಪರವಾಗಿದ್ದು ಸಮಾಜದಲ್ಲಿ ಶಾಂತಿ ನೆಲಸಿದೆ. ಇಡೀ ಜಿಲ್ಲೆಗೆ ಮಧುಗಿರಿ ಮಾದರಿಯಾಗಿದೆ ಎಂದರು.ಈ ಸಂದರ್ಭದಲ್ಲಿ ಮುಸ್ಲಿಂ ಧರ್ಮದ ಗುರುಗಳು ಹಾಗೂ ಮುಖಂಡರಾದ ಕಾಲಕ್, ಮುಬಾರಕ್, ಕಬಡ್ಡಿ ಖಲೀಂ, ಅಲ್ಲಬಕಾಷ್ ಸೇರಿದಂತೆ ಅನೇಕರಿದ್ದರು. ಇದೇ ವೇಳೆ ಮುರುಳೀಧರ ಹಾಲಪ್ಪ ಮಧುಗಿರಿಯ ಇತಿಹಾಸ ಶ್ರೀ ದಂಡಿಮಾರಮ್ಮ ಜಾತ್ರೆ ಪ್ರಯುಕ್ತ ಶಕ್ತಿ ದೇವತೆ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದರು.