ಪ್ರತಿಯೊಬ್ಬರೂ ತಪ್ಪದೇ ಮತ ಚಲಾಯಿಸಬೇಕು

| Published : Apr 05 2024, 01:01 AM IST

ಸಾರಾಂಶ

ಪಟ್ಟಣದಲ್ಲಿ ತಾಲೂಕಾಡಳಿತ, ತಾಲೂಕು ಸ್ವೀಪ್ ಸಮಿತಿ ಹಾಗೂ ಪುರಸಭೆ ಸಹಯೋಗದಲ್ಲಿ ಗುರುವಾರ ಮತದಾನ ಕುರಿತು ಜಾಗೃತಿ ಜಾಥಾ ಹಮ್ಮಿಕೊಳ್ಳಲಾಯಿತು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಪಟ್ಟಣದಲ್ಲಿ ತಾಲೂಕಾಡಳಿತ, ತಾಲೂಕು ಸ್ವೀಪ್‌ ಸಮಿತಿ ಹಾಗೂ ಪುರಸಭೆ ಸಹಯೋಗದಲ್ಲಿ ಗುರುವಾರ ಮತದಾನ ಕುರಿತು ಜಾಗೃತಿ ಜಾಥಾ ಹಮ್ಮಿಕೊಳ್ಳಲಾಯಿತು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಮತದಾನ ಜಾಗೃತಿ ಮೂಡಿಸಿದ ನಂತರ ಬಸ್ ನಿಲ್ದಾಣದವರೆಗೂ ಜಾಗೃತಿ ಜಾಥಾ ನಡೆಸಿದ ನಂತರ ಪುನಃ ಬಸವೇಶ್ವರ ವೃತ್ತಕ್ಕೆ ಜಾಥಾ ಆಗಮಿಸಿತು. ಜಾಥಾದಲ್ಲಿ ಮತದಾನ ಜಾಗೃತಿ ಫಲಕಗಳ ಮೂಲಕ ಸಾರ್ವಜನಿಕರಲ್ಲಿ ಮತದಾನದ ಅರಿವು ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಮತದಾನ ಪ್ರತಿಜ್ಞಾ ವಿಧಿ ಬೋಧಿಸಿದ ತಹಸೀಲ್ದಾರ್‌ ವೈ.ಎಸ್.ಸೋಮನಕಟ್ಟಿ ಮಾತನಾಡಿ, ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಪ್ರಜಾಪ್ರಭುತ್ವ ಹಬ್ಬವಾಗಿ ಚುನಾವಣೆಯಲ್ಲಿ ನಿಮ್ಮ ನಾಯಕನನ್ನು ಆಯ್ಕೆ ಮಾಡಲು ತಪ್ಪದೇ ಮತದಾನ ಮಾಡಬೇಕು. ಪ್ರಜ್ಞಾವಂತರು ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಬೇಕು. ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೇ ನಿರ್ಭೀತಿಯಿಂದ ಮತ ಚಲಾಯಿಸಬೇಕು. ಈ ಸಲ ಹೆಚ್ಚು ಪ್ರತಿಶತ ಮತದಾನವಾಗಲು ಪ್ರತಿಯೊಬ್ಬರೂ ಮತದಾನ ತಪ್ಪದೇ ಮಾಡಬೇಕೆಂದರು.

ತಾಲೂಕು ಪಂಚಾಯಿತಿ ಪ್ರಭಾರಿ ಇಒ ಹಾಗೂ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಪ್ರಕಾಶ ದೇಸಾಯಿ ಮಾತನಾಡಿ, ನಮ್ಮ ಸಂವಿಧಾನ ಪ್ರತಿಯೊಬ್ಬ ಪ್ರಜೆಗೆ ಮತದಾನ ಎಂಬ ಅಮೂಲ್ಯವಾದ ಕೊಡುಗೆ ನೀಡಿದೆ. ಮತದಾನ ಮಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಪ್ರತಿ ಮತವೂ ಅಮೂಲ್ಯವಾಗಿದೆ. ಮೇ. ೭ ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ತಪ್ಪದೇ ಮತದಾನ ಮಾಡಿ ತಮ್ಮ ಹಕ್ಕನ್ನು ಚಲಾಯಿಸಬೇಕೆಂದರು.

ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಪುರಸಭೆ ವ್ಯವಸ್ಥಾಪಕ ವಿರೇಶ ಹಟ್ಟಿ, ಪುರಸಭೆ ಆರೋಗ್ಯ ನಿರೀಕ್ಷಕ ಮಹೇಶ ಹಿರೇಮಠ, ಪುರಸಭೆ ಸಿಬ್ಬಂದಿಗಳಾದ ರಾಜು ರಾಠೋಡ, ಗೀತಾಂಜಲಿ ದಾಸರ, ನೀಲಾ ಬಳವಾಟ, ಮುದುಕು ರಾಂಪೂರ, ಆಶಾ ಕಾರ್ಯಕರ್ತರು,ಅಂಗನವಾಡಿ ಕಾರ್ಯಕರ್ತರು, ಅಸ್ಕಿ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಇತರರು ಭಾಗವಹಿಸಿದ್ದರು.