ಭತ್ತ ನಾಟಿಗೆ ಮುಯ್ಯಾಳಾದ ಡಿಸಿ, ಎಸ್‌ಪಿ, ಸ್ವಾಮೀಜಿ..!

| Published : Sep 08 2025, 01:00 AM IST

ಸಾರಾಂಶ

ನಿತ್ಯವೂ ಸೂಟು-ಬೂಟಿನಲ್ಲಿ ಓಡಾಡುತ್ತಿದ್ದ ಐಎಎಸ್, ಐಪಿಎಸ್ ಅಧಿಕಾರಿಗಳು, ಆಶೀರ್ವಚನದಲ್ಲಿ ಕಾಲ ಕಳೆಯುತ್ತಿದ್ದ ಸ್ವಾಮೀಜಿ, ಸಾಫ್ಟ್‌ವೇರ್ ಕಂಪನಿಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎಂಜಿನಿಯರ್‌ಗಳು ಮುಯ್ಯಾಳಾಗಿ ಹಳ್ಳಿಗೆ ಬಂದು ಭತ್ತದ ಗದ್ದೆಗಿಳಿದು ನಾಟಿ ಮಾಡಿದರೆ ಹೇಗಿರುತ್ತದೆ..?.

ಕನ್ನಡಪ್ರಭ ವಾರ್ತೆ ಮಂಡ್ಯ

ನಿತ್ಯವೂ ಸೂಟು-ಬೂಟಿನಲ್ಲಿ ಓಡಾಡುತ್ತಿದ್ದ ಐಎಎಸ್, ಐಪಿಎಸ್ ಅಧಿಕಾರಿಗಳು, ಆಶೀರ್ವಚನದಲ್ಲಿ ಕಾಲ ಕಳೆಯುತ್ತಿದ್ದ ಸ್ವಾಮೀಜಿ, ಸಾಫ್ಟ್‌ವೇರ್ ಕಂಪನಿಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎಂಜಿನಿಯರ್‌ಗಳು ಮುಯ್ಯಾಳಾಗಿ ಹಳ್ಳಿಗೆ ಬಂದು ಭತ್ತದ ಗದ್ದೆಗಿಳಿದು ನಾಟಿ ಮಾಡಿದರೆ ಹೇಗಿರುತ್ತದೆ..?

ರೈತರ ಶಾಲೆ ಹಾಗೂ ಕನ್ನಡದ ಮನಸ್ಸುಗಳು ಸೇರಿದಂತೆ ಹಲವು ಸಂಘಟನೆಗಳು ಕೈಜೋಡಿಸಿ ಮುಯ್ಯಾಳು ಸಂಸ್ಕೃತಿಗೆ ಮರುಹುಟ್ಟು ನೀಡುವ ಆಶಯದೊಂದಿಗೆ ನೆಲದ ನಂಟು ಘೋಷವಾಕ್ಯದೊಂದಿಗೆ ಗದ್ದೆನಾಟಿ ಸಂಭ್ರಮ ಶೀರ್ಷಿಕೆಯಡಿ ಇಂತಹದೊಂದು ಚಿತ್ರಣವನ್ನು ತಾಲೂಕಿನ ಆಲಕೆರೆ ಗ್ರಾಮದಲ್ಲಿ ಸೃಷ್ಟಿಸಿಕೊಟ್ಟಿದ್ದು ಮಾದರಿ ಎನಿಸಿತ್ತು.

ಆಲಕೆರೆ ಗ್ರಾಮದ ಎರಡು ಎಕರೆ ಜಮೀನಿಗೆ ಪಟಾಪಟಿ ಚಡ್ಡಿ ಧರಿಸಿ, ಪಂಚೆ ಸುತ್ತಿಕೊಂಡು, ತಲೆಗೆ ಟವೆಲ್ ಕಟ್ಟಿಕೊಂಡು ಸಾಮಾನ್ಯ ರೈತರಂತೆ ಭತ್ತದ ಪೈರುಗಳನ್ನು ಹಿಡಿದು ನಾಟಿಗಿಳಿದವರು ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಆರಕ್ಷಕ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ಜಂಟಿ ಕೃಷಿ ನಿರ್ದೇಶಕ ವಿ.ಎಸ್.ಅಶೋಕ್. ಇವರೊಟ್ಟಿಗೆ ಖಾವಿ ತೊಟ್ಟುಕೊಂಡೇ ಕೆಂಗೇರಿ ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀನಿಶ್ಚಲಾನಂದನಾಥ ಸ್ವಾಮೀಜಿ ನಾಟಿ ಕಾರ್ಯ ನೆರವೇರಿಸಿದರು.

ಬೆಂಗಳೂರಿನ ದೊಡ್ಡ ದೊಡ್ಡ ಸಾಫ್ಟ್‌ವೇರ್ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದ್ಯಾವಂತ ಯುವಕರು, ಚನ್ನಪಟ್ಟಣದ ಸಂಪೂರ್ಣ ಕಾಲೇಜಿನ ೪೦ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು ೧೦೦ಕ್ಕೂ ಹೆಚ್ಚು ಮಂದಿ ಮುಯ್ಯಾಳುಗಳಾಗಿ ದಿನವಿಡೀ ಗದ್ದೆಗಿಳಿದು ಭತ್ತದ ನಾಟಿ ಮಾಡಿ ಸಂಭ್ರಮಿಸಿದರು.

ನಗರ ಜೀವನದ ಜಂಜಾಟದಿಂದ ದೂರ ಉಳಿದು, ಮನಸ್ಸಿನ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಹಳ್ಳಿಯ ಪ್ರಶಾಂತ ವಾತಾವರಣದಲ್ಲಿ ಮನಸ್ಸನ್ನು ನಿರಾಳವಾಗಿಸಿಕೊಂಡು ದುಡಿಮೆಯಲ್ಲಿ ತೊಡಗಿ ರೈತರಿಗೆ ಸಹಕಾರಿಯಾಗುವಂತಹ ಮುಯ್ಯಾಳುಗಳಾಗಿ ನಾಟಿ ಕಾರ್ಯಕ್ಕೆ ನೆರವಾದರು. ಮೈ-ಕೈಯ್ಯನ್ನೆಲ್ಲಾ ಕೆಸರು ಮಾಡಿಕೊಂಡು ಮಣ್ಣಿನ ಸುವಾಸನೆಯನ್ನು ಸಂಭ್ರಮಿಸಿದರು. ಗದ್ದೆಬಯಲಿನಲ್ಲಿ ರೈತರೊಂದಿಗೆ ಒಟ್ಟಿಗೆ ಕುಳಿತು ಊಟ ಮಾಡಿ ಆನಂದಿಸಿದರು. ಹಳ್ಳಿಯ ಊಟದ ಸವಿಯನ್ನು ಸವಿದರಲ್ಲದೆ ಅಲ್ಲಿನ ಸಂಸ್ಕೃತಿಯನ್ನು ಕಣ್ತುಂಬಿಕೊಂಡರು. ಇಡೀ ದಿನ ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತಾ ಭತ್ತ ನಾಟಿ ಮಾಡಿದ ಸಂತಸದೊಂದಿಗೆ ಕಾಲ ಕಳೆದರು.

ಗದ್ದೆಯಲ್ಲಿ ಭತ್ತದ ಪೈರುಗಳನ್ನು ಹಿಡಿದ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಕ್ರಮಬದ್ಧವಾಗಿ ನಾಟಿ ಮಾಡುವ ಮೂಲಕ ತಮ್ಮ ಕೈಚಳಕ ಪ್ರದರ್ಶಿಸಿದರು. ಸುಮಾರು ೩೦ ನಿಮಿಷಗಳಿಗೂ ಹೆಚ್ಚು ಕಾಲ ಗದ್ದೆಯಲ್ಲೇ ನಾಟಿ ಮಾಡುವುದರೊಂದಿಗೆ ಚಿಕ್ಕ ವಯಸ್ಸಿನಲ್ಲಿ ತಂದೆ-ತಾಯಿ ಹಾಗೂ ಕುಟುಂಬದವರೊಂದಿಗೆ ಗದ್ದೆಗೆ ತೆರಳಿ ನಾಟಿ ಮಾಡುತ್ತಿದ್ದ ನೆನಪುಗಳನ್ನು ನೆನೆದರು. ಮುಯ್ಯಾಳಾಗಿ ಗದ್ದೆಗಿಳಿದು ಶ್ರಮದ ಜೀವನವನ್ನು ಮತ್ತೆ ಅನುಭವಿಸಿ ಖುಷಿಪಟ್ಟರು.

ಜಿಲ್ಲಾಧಿಕಾರಿಗಳೊಂದಿಗೆ ಜಿಲ್ಲಾ ಆರಕ್ಷಕ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಅವರೂ ಕೂಡ ಉತ್ತಮವಾಗಿ ನಾಟಿ ಮಾಡಿ ಮೆಚ್ಚುಗೆ ಗಳಿಸಿದರು. ಭತ್ತದ ಪೈರುಗಳನ್ನು ಎಡ-ಬಲವಾಗಿ ನೇರವಾಗಿ ನಾಟಿ ಮಾಡುವುದು ಸಂಪ್ರದಾಯ. ಅದನ್ನು ಕರಾರುವಕ್ಕಾಗಿ ಮಾಡುವುದರೊಂದಿಗೆ ನಾಟಿ ಸಂಸ್ಕೃತಿಯನ್ನು ಮರೆತಿಲ್ಲ ಎಂಬುದನ್ನು ಸಾಬೀತುಪಡಿಸಿದರು.

ಇದೇ ಮಾದರಿಯಲ್ಲಿ ಶ್ರೀನಿಶ್ಚಲಾನಂದನಾಥ ಸ್ವಾಮೀಜಿ ಅವರು ಕೂಡ ಸ್ವಲ್ಪವೂ ಎಡವದೆ ಗದ್ದೆಯ ತೆವರಿ ಮೇಲೆ ಆರಾಮವಾಗಿ ನಡೆದುಕೊಂಡು ಹೋಗಿ ಕೆಸರುಗದ್ದೆಗಿಳಿದು ಭತ್ತದ ಪೈರುಗಳನ್ನು ಹಿಡಿದು ನಾಟಿ ಮಾಡಿದರು. ತಮ್ಮ ಪೂರ್ವಾಶ್ರಮದ ತಂದೆ-ತಾಯಿಯೊಂದಿಗೆ ಗದ್ದೆಗೆ ತೆರಳಿ ನಾಟಿ ಮಾಡಿದ ಹಳೆಯ ನೆನಪುಗಳನ್ನು ಸ್ಮರಿಸಿಕೊಂಡರು.

ಗದ್ದೆ ನಾಟಿ ಮಾಡಿ ಹೊರಬಂದ ಅಧಿಕಾರಿಗಳು, ಸ್ವಾಮೀಜಿಯವರು ಕೈ-ಕಾಲುಗಳನ್ನು ಸ್ವಚ್ಛಗೊಳಿಸಿಕೊಂಡರು. ಎಳನೀರು ಸೇವಿಸಿ ದಾಹ ಇಂಗಿಸಿಕೊಂಡರು. ನಾಲ್ವಡಿ ಹಾಗೂ ರಾಷ್ಟ್ರಕವಿ ಕುವೆಂಪು ಅವರ ಭಾವಚಿತ್ರಗಳಿಗೆ ಪುಷ್ಪಾರ್ಪಣೆ ಮಾಡಿ ಅಲ್ಲಿಂದ ನಿರ್ಗಮಿಸಿದರು.

ಟಿ.ನರಸೀಪುರ ತಾಲೂಕು ಯಾಚೇನಹಳ್ಳಿಯ ರಾಮಕೃಷ್ಣ ಸೇವಾಶ್ರಮದ ಶ್ರೀ ನಾದಾನಂದನಾಥ ಸ್ವಾಮೀಜಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಜಿ.ಸಿದ್ದರಾಮಯ್ಯ, ರೈತರ ಶಾಲೆ ಮುಖ್ಯಸ್ಥ ಪ್ರೊ.ಸತ್ಯಮೂರ್ತಿ, ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ಎಂ.ವಿನಯ್‌ಕುಮಾರ್, ನಾಟಕ ನಿರ್ದೇಶಕ ವಿನಯ್, ಜೈಕರ್ನಾಟಕ ಪರಿಷತ್ತಿನ ಎಸ್.ನಾರಾಯಣ್, ನೇಗಿಲಯೋಗಿ ಟ್ರಸ್ಟ್‌ನ ಎ.ಸಿ.ರಮೇಶ್, ಯುವ ಪ್ರಶಸ್ತಿ ಪುರಸ್ಕೃತರಾದ ಎಂ.ಸಿ.ಲಂಕೇಶ್, ಕೀಲಾರ ಕೃಷ್ಣೇಗೌಡ ಸೇರಿದಂತೆ ಇತರರಿದ್ದರು.

ಹಳ್ಳಿ ಹಾಡುಗಳನ್ನು ಜನಪದ ಗಾಯಕ ಗಾಮನಹಳ್ಳಿ ಸ್ವಾಮಿ ಮತ್ತು ಗಾನಾಸುಮ ಪ್ರಸ್ತುತಪಡಿಸಿದರೆ ಹಚ್ಚೆ ಹಸೆ ಮೂಲಕ ಹಳ್ಳಿಯ ಸೊಗಡನ್ನು ಕಲಾವಿದ ವೈರಮುಡಿ ಬಿಂಬಿಸಿದರು. ಕನ್ನಡ ಮನಸ್ಸುಗಳು ತಂಡದ ಕಲಾವಿದ ಸಚಿನ್ ಅವರಿಂದ ಕೃಷಿ ಕಲಾಕೃತಿ ರಚನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ನಾನೂ ಕೃಷಿ ಕುಟುಂಬದಿಂದ ಬಂದವನು. ಚಿಕ್ಕ ವಯಸ್ಸಿನಲ್ಲಿ ಕೃಷಿ ಚಟುವಟಿಕೆ ನಡೆಸಿದ ಅನುಭವವಿದೆ. ತಂದೆಯ ಜೊತೆ ನಾಟಿ, ಉಳುಮೆ, ಬೇಸಾಯ ಮಾಡಿದ್ದೇನೆ. ನಾನೊಬ್ಬ ರೈತನ ಮಗ, ಕೃಷಿ ಅನುಭವವಿದೆ ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ. ಗ್ರಾಮೀಣ ಸಂಸ್ಕೃತಿ ಜೀವಂತವಾಗಿ ಉಳಿಯಬೇಕು. ಅದು ಎಲ್ಲರಿಗೂ ಚೈತನ್ಯಶೀಲ. ಗ್ರಾಮೀಣ ಬದುಕಿನಲ್ಲೇ ನಿಜವಾದ ಸಂಸ್ಕೃತಿ ಅಡಗಿದೆ. ನಾವ್ಯಾರೂ ಕೂಡ ನಮ್ಮ ಮೂಲ ಜೀವಂತಿಕೆಯ ಸೆಲೆಯನ್ನು ಬಿಡಬಾರದು.

- ಡಾ.ಕುಮಾರ, ಜಿಲ್ಲಾಧಿಕಾರಿ, ಮಂಡ್ಯಭತ್ತದ ನಾಟಿ ನನಗೆ ಮೊದಲ ಅನುಭವ. ಕಬ್ಬಿನ ನಾಟಿಯಿಂದ, ಕಡಿದು ಸಾಗಿಸುವವರೆಗೆ ಅನುಭವವಿದೆ. ನಾನು ಕೃಷಿ ಪದವೀಧರ. ಕಬ್ಬಿನ ಬೆಳೆಯಲ್ಲಿ ಸಂಶೋಧನೆ ನಡೆಸಿ ಚಿನ್ನದ ಪದಕ ಪಡೆದಿದ್ದೇನೆ. ರೈತರ ಬದುಕು, ಸಂಕಷ್ಟ ಎಲ್ಲವನ್ನೂ ಅರಿತಿದ್ದೇನೆ. ರೈತರ ಬೆಳೆಗಳಿಗೆ ಉತ್ತಮ ಬೆಲೆ ಸಿಗದೆ ದಲ್ಲಾಳಿಗಳ ಪಾಲಾಗುತ್ತಿದೆ. ರೈತರೆಲ್ಲರೂ ಒಗ್ಗೂಡಿ ಉತ್ತಮ ಮಾರುಕಟ್ಟೆ ಸ್ಥಾಪಿಸಿ ಹೆಚ್ಚು ಲಾಭ ರೈತರಿಗೆ ಸಿಗುವಂತಾಗಬೇಕು.

- ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಆರಕ್ಷಕ ಅಧೀಕ್ಷಕರುಆಧುನೀಕತೆ ಎಷ್ಟೇ ಬೆಳೆದರೂ ಎಲ್ಲರ ಮೂಲ ಹಳ್ಳಿಗಳೇ. ನಗರ ಬದುಕಿನ ಒತ್ತಡವನ್ನು ದೂರ ಮಾಡಿಕೊಳ್ಳಲು ಇದೊಂದು ಸದಾವಕಾಶ. ಮುಯ್ಯಾಳು ಎನ್ನುವುದೇ ಒಬ್ಬರಿಗೊಬ್ಬರು ಸಹಕಾರಿಯಾಗುವುದು. ಎಷ್ಟೇ ಓದಿದರೂ ಹಳ್ಳಿ ಸಂಸ್ಕೃತಿ ಮರೆಯುವಂತಿಲ್ಲ. ಈ ಮುಯ್ಯಾಳು ಸಂಸ್ಕೃತಿಯನ್ನು ಮರುಹುಟ್ಟು ನೀಡುವ ಸಂಕಲ್ಪದೊಂದಿಗೆ ರೈತರೊಳಗೆ ಅಧಿಕಾರಿಗಳು, ವಿದ್ಯಾವಂತ ಯುವಕರು ಒಂದಾಗಿ ನಾಟಿ ಕಾರ್ಯ ನೆರವೇರಿಸಿದ್ದೇವೆ. ತುಂಬಾ ಖುಷಿಯಾಗಿದೆ.

- ಎಂ.ವಿನಯ್‌ಕುಮಾರ್, ಅಧ್ಯಕ್ಷರು, ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ರೈತ ಶಾಲೆಯ ಮೂಲಕ ರೈತರಿಗೆ ಕೃಷಿ ಬಗ್ಗೆ ಮಾರ್ಗದರ್ಶನ ನೀಡುತ್ತಿದ್ದೆವು. ಅದು ಬಹಳ ಸುಲಭ. ಆದರೆ, ಕೃಷಿ ಕೆಲಸಕ್ಕಿಳಿದಾಗ ಕೂಲಿಯಾಳುಗಳ ಕೊರತೆ ಎದ್ದು ಕಾಣುತ್ತಿತ್ತು. ಉತ್ತಮ ಇಳುವರಿ ಬರಬೇಕಾದರೆ ಭತ್ತವನ್ನು ಸಕಾಲದಲ್ಲಿ ನಾಟಿ ಮಾಡಬೇಕು. ಇದರ ಯೋಚನೆಯಲ್ಲಿದ್ದಾಗ ಕನ್ನಡ ಸಂಘಟನೆಯವರು ನಾಟಿಗೆ ಬರುವುದಕ್ಕೆ ಉತ್ಸಾಹ ತೋರಿದರು. ಅವರೆಲ್ಲರನ್ನೂ ಒಟ್ಟುಗೂಡಿಸಿಕೊಂಡು ಭಾನುವಾರದಂದು ನಾಟಿ ಕಾರ್ಯ ನೆರವೇರಿಸಿ ರೈತರಿಗೆ ಸಹಕಾರಿಯಾಗಿದ್ದೇವೆ.

- ಪ್ರೊ.ಸತ್ಯಮೂರ್ತಿ, ಮುಖ್ಯಸ್ಥರು, ರೈತರ ಶಾಲೆ