ಅಧಿಕಾರಿಗಳು ತಪ್ಪು ಮಾಡಿದರೆ ಅದನ್ನು ಪ್ರಶ್ನಿಸುವ ಸಂಪೂರ್ಣ ಹಕ್ಕು ಮತ್ತು ಕಾನೂನುಬದ್ಧ ಅವಕಾಶವಿದೆ. ಆದರೆ ಅದನ್ನು ಹೇಳುವ ವಿಧಾನಕ್ಕೂ ಒಂದು ಘನತೆ ಇರಬೇಕು. ವೈಯಕ್ತಿಕವಾಗಿ, ಅಗೌರವದಿಂದ ಹಾಗೂ ಹಗುರವಾಗಿ ಮಾತನಾಡುವುದು ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತದೆ ಎಂದು ಹೇಳಿದರು. ಮಾಜಿ ಸಚಿವರು ತಮ್ಮ ವಿರುದ್ಧ ಬಳಸಿರುವ ಕೆಲವು ಪದಗಳು ತಮಗೆ ನೋವುಂಟು ಮಾಡಿವೆ ಎಂದು ಹೇಳಿದ ಅವರು, “ಜಿಲ್ಲಾಧಿಕಾರಿಯಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವ ಅಧಿಕಾರಿಯ ಬಗ್ಗೆ ಈ ರೀತಿಯಾಗಿ ಮಾತನಾಡಿದರೆ, ಉಳಿದ ಅಧಿಕಾರಿಗಳ ಪರಿಸ್ಥಿತಿ ಏನಾಗುತ್ತದೆ? ಅಧಿಕಾರಿಗಳನ್ನು ಬಹಿರಂಗ ಸಭೆಗಳಲ್ಲಿ ಕೀಳಾಗಿ ಕಾಣಿಸುವ ರೀತಿಯ ವರ್ತನೆ ಸರಿಯಲ್ಲ” ಎಂದು ಪ್ರಶ್ನಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಗ್ರಾಮ ಪಂಚಾಯಿತಿ ಚುನಾವಣೆಯ ಮೀಸಲಾತಿ ನಿಗದಿ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಮಾಜಿ ಸಚಿವ ಎಚ್.ಡಿ. ರೇವಣ್ಣ ಮಾಡಿರುವ ಆರೋಪಗಳಿಗೆ ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಸೋಮವಾರ ಮಾಧ್ಯಮದೊಂದಿಗೆ ಮಾತನಾಡಿ, ಅಧಿಕಾರಿಯೊಬ್ಬರ ಕಾರ್ಯವೈಖರಿಯನ್ನು ಪ್ರಶ್ನಿಸಲು ಕಾನೂನುಬದ್ಧ ಮಾರ್ಗಗಳಿದ್ದರೂ, ವೈಯಕ್ತಿಕವಾಗಿ ಅವಮಾನಿಸುವ ಅಥವಾ ಮಾನಸಿಕವಾಗಿ ಕುಗ್ಗಿಸುವ ರೀತಿಯ ಭಾಷೆ ಬಳಸುವುದು ಸರಿಯಲ್ಲ. ಅಧಿಕಾರಿಗಳು ತಪ್ಪು ಮಾಡಿದರೆ ಅದನ್ನು ಪ್ರಶ್ನಿಸುವ ಸಂಪೂರ್ಣ ಹಕ್ಕು ಮತ್ತು ಕಾನೂನುಬದ್ಧ ಅವಕಾಶವಿದೆ. ಆದರೆ ಅದನ್ನು ಹೇಳುವ ವಿಧಾನಕ್ಕೂ ಒಂದು ಘನತೆ ಇರಬೇಕು. ವೈಯಕ್ತಿಕವಾಗಿ, ಅಗೌರವದಿಂದ ಹಾಗೂ ಹಗುರವಾಗಿ ಮಾತನಾಡುವುದು ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತದೆ ಎಂದು ಹೇಳಿದರು. ಮಾಜಿ ಸಚಿವರು ತಮ್ಮ ವಿರುದ್ಧ ಬಳಸಿರುವ ಕೆಲವು ಪದಗಳು ತಮಗೆ ನೋವುಂಟು ಮಾಡಿವೆ ಎಂದು ಹೇಳಿದ ಅವರು, “ಜಿಲ್ಲಾಧಿಕಾರಿಯಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವ ಅಧಿಕಾರಿಯ ಬಗ್ಗೆ ಈ ರೀತಿಯಾಗಿ ಮಾತನಾಡಿದರೆ, ಉಳಿದ ಅಧಿಕಾರಿಗಳ ಪರಿಸ್ಥಿತಿ ಏನಾಗುತ್ತದೆ? ಅಧಿಕಾರಿಗಳನ್ನು ಬಹಿರಂಗ ಸಭೆಗಳಲ್ಲಿ ಕೀಳಾಗಿ ಕಾಣಿಸುವ ರೀತಿಯ ವರ್ತನೆ ಸರಿಯಲ್ಲ” ಎಂದು ಪ್ರಶ್ನಿಸಿದರು.

ತಮ್ಮನ್ನು ಎಲ್ಲಿಂದ ಈ ಡಿಸಿಯನ್ನು ಹಿಡಿದುಕೊಂಡು ಬಂದಿದ್ದಾರೆ ಎಂಬ ರೀತಿಯಲ್ಲಿ ಪ್ರಶ್ನಿಸಿರುವುದಕ್ಕೆ ಪ್ರತಿಕ್ರಿಯಿಸಿ, ನಾನು ಯಾರನ್ನೂ ಕೇಳಿಕೊಂಡು ಈ ಸ್ಥಾನಕ್ಕೆ ಬಂದಿಲ್ಲ. ಈ ಹಂತಕ್ಕೆ ತಲುಪಲು ನಮ್ಮದೇ ಆದ ಹೋರಾಟ, ಪರಿಶ್ರಮ ಮತ್ತು ಸೇವಾ ಪಯಣವಿದೆ. ಒಂದು ಜವಾಬ್ದಾರಿಯುತ ಸ್ಥಾನಕ್ಕೆ ಬರಲು ಸಾಕಷ್ಟು ಶ್ರಮ ಪಟ್ಟಿದ್ದೇವೆ. ನಾನು ಮೂರು-ನಾಲ್ಕು ತಿಂಗಳಿಗೊಮ್ಮೆ ಮಾಧ್ಯಮಗಳೊಂದಿಗೆ ಮಾತನಾಡುತ್ತೇನೆ. ಸಾರ್ವಜನಿಕರ ಕೆಲವು ಆರೋಪಗಳ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ ಯಾವುದೇ ವಿಷಯವಿದ್ದರೂ ಅದನ್ನು ಸೂಕ್ತ ರೀತಿಯಲ್ಲಿ ಗಮನಕ್ಕೆ ತರಬಹುದು. ಅಧಿಕಾರಿಯನ್ನು ವೈಯಕ್ತಿಕವಾಗಿ ಗುರಿಯಾಗಿಸಿಕೊಂಡು ಮಾತನಾಡುವುದು ಸಮಂಜಸವಲ್ಲ ಎಂದರು.

ಹಿರಿಯ ರಾಜಕಾರಣಿಗಳು ಬಳಸುವ ಮಾತುಗಳು ಸಮಾಜದ ಮೇಲೆ ಪರಿಣಾಮ ಬೀರುತ್ತವೆ. ಹೀಗಾಗಿ ಭಾಷೆಯ ಬಳಕೆಯಲ್ಲಿ ಜವಾಬ್ದಾರಿ ಇರಬೇಕು ಎಂದು ಹೇಳಿದರು. ಎಚ್.ಡಿ. ರೇವಣ್ಣ ಅವರು ಹಿರಿಯ ಹಾಗೂ ಅಪಾರ ಅನುಭವ ಹೊಂದಿರುವ ರಾಜಕಾರಣಿ ಎಂದು ಉಲ್ಲೇಖಿಸಿದ ಲತಾಕುಮಾರಿ, ಅಂತಹ ಅನುಭವಿಗಳಿಂದ ಈ ರೀತಿಯ ಭಾಷೆ ನಿರೀಕ್ಷಿಸುವುದಿಲ್ಲ. ಅಧಿಕಾರಿಗಳನ್ನು ಮಾನಸಿಕವಾಗಿ ದುರ್ಬಲಗೊಳಿಸುವ ಪ್ರಯತ್ನಗಳು ನಡೆಯಬಹುದು. ಆದರೆ ನನ್ನನ್ನು ಮಾನಸಿಕವಾಗಿ ದುರ್ಬಲಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ; ನಾನು ಅದಕ್ಕೆ ಮಣಿಯುವುದೂ ಇಲ್ಲ ಎಂದು ಖಡಕ್‌ ಆಗಿ ತಿರುಗೇಟು ನೀಡಿದರು.

ಗ್ರಾಮ ಪಂಚಾಯಿತಿ ಮೀಸಲಾತಿ ನಿಗದಿ ವಿಚಾರವಾಗಿ ಆರಂಭವಾಗಿರುವ ರಾಜಕೀಯ ವಾಕ್ಸಮರ ಇದೀಗ ಜಿಲ್ಲಾಡಳಿತ ಮತ್ತು ಮಾಜಿ ಸಚಿವರ ನಡುವಿನ ಮಾತಿನ ಚಕಮಕಿಗೂ ಕಾರಣವಾಗಿದೆ.