ಸಾರಾಂಶ
ಮೊಳಕಾಲ್ಮುರು ಪಟ್ಟಣ ಪಂಚಾಯಿತಿ ಕಚೇರಿಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ ದಿಢೀರ್ ಭೇಟಿಯ ವೇಳೆ ಮುಖ್ಯಾಧಿಕಾರಿ ಮಂಜುನಾಥ್ ಮೇಲೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ವ್ಯಕ್ತವಾದವು.
ಕನ್ನಡಪ್ರಭ ವಾರ್ತೆ ಮೊಳಕಾಲ್ಮುರುಜಿಲ್ಲಾಧಿಕಾರಿ ಟಿ.ವೆಂಕಟೇಶ ಪಟ್ಟಣ ಪಂಚಾಯಿತಿ ಕಚೇರಿಗೆ ಗುರುವಾರ ಸಂಜೆ ದಿಢೀರನೇ ಭೇಟಿ ನೀಡಿ ಸಾರ್ವಜನಿಕರೊಂದಿಗೆ ಸಮಸ್ಯೆಗಳನ್ನು ಆಲಿಸಿದರು.
ಈ ವೇಳೆ ಮುಖ್ಯಾಧಿಕಾರಿ ಮಂಜುನಾಥ ಮೇಲೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ವ್ಯಕ್ತವಾದವು. ಪಟ್ಟಣದ ಸ್ವಚ್ಛತೆ, ಕುಡಿಯುವ ನೀರು ನಿರ್ವಹಣೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯದಲ್ಲಿ ಉದಾಸೀನ ತೋರುತ್ತಾರೆ. ಏನಾದರೂ ಕೇಳಿದರೆ ಕಾನೂನು ಪಾಠ ಹೇಳುತ್ತಾರೆ. ಸದಸ್ಯರ ಮಾತಿಗೆ ಕಿಮ್ಮತ್ತಿಲ್ಲದಂತೆ ನಡೆದುಕೊಳ್ಳುತ್ತಾರೆ. ಸಿಬ್ಬಂದಿಗಳಿಗೆ ವೇತನ ನೀಡಿಲ್ಲ. ಸಮಸ್ಯೆಗಳನ್ನು ಹಿಡಿದು ಬರುವ ಸಾರ್ವಜನಿಕರಿಗೆ ಅಗೌರವದಿಂದ ನಡೆದುಕೊಳ್ಳುತ್ತಾರೆ. ಜತೆಗೆ ಇ-ಸ್ವತ್ತು ನಿರ್ವಹಣೆಯಲ್ಲಿ ವಿಳಂಬ ವಾಗುತ್ತಿದೆ, ಒಟ್ಟಾರೆ ಮುಖ್ಯಾಧಿಕಾರಿಗಳ ವರ್ತನೆಗೆ ಸಾರ್ವಜನಿಕರು ಬೇಸತ್ತಿದ್ದಾರೆ ಎಂದು ಸಭೆಯಲ್ಲಿ ಕೆಲ ಸದಸ್ಯರು ಆರೋಪ ಮಾಡಿದರು. ಇದಕ್ಕೆ ಸಾರ್ವಜನಿಕರೂ ಧ್ವನಿ ಗೂಡಿಸಿದರು. ಇದೇ ವೇಳೆ ಸದಸ್ಯರು ಮತ್ತು ಮುಖ್ಯಾಧಿಕಾರಿ ನಡುವೆ ಮಾತಿನ ಚಕಮಕಿಯೂ ನಡೆಯಿತು. ಸಾರ್ವಜನಿಕರ ಮತ್ತು ಮುಖ್ಯಾಧಿಕಾರಿ ನಡುವಿನ ನಡೆದ ಗದ್ದಲದಿಂದಾಗಿ ಪಟ್ಟಣ ಪಂಚಾಯಿತಿ ಕಚೇರಿ ಕ್ಷಣ ಕಾಲ ಗೊಂದಲದ ಗೂಡಾಯಿತು. ಮಧ್ಯೆ ಪ್ರವೇಶಿಸಿದ ಜಿಲ್ಲಾಧಿಕಾರಿ ವೆಂಕಟೇಶ ಸಾರ್ವಜನಿಕ ಬದುಕಿನಲ್ಲಿ ಇರುವ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಎಲ್ಲವನ್ನೂ ಒಟ್ಟಿಗೆ ಕರೆದೊಯ್ಯುವ ಕೆಲಸ ಮಾಡಬೇಕು. ಅದು ಬಿಟ್ಟು ಸರ್ವಾಧಿಕಾರಿ ಧೋರಣೆ ಸಲ್ಲದು. ಮುಖ್ಯಾಧಿಕಾರಿಗಳಿಂದ ತಪ್ಪಾಗಿದ್ದರೆ ಸರಿಪಡಿಸುತ್ತೇನೆ. ಮುಂದೆ ಇಂಥ ಸಮಸ್ಯೆಗಳು ಬಾರದಂತೆ ಕ್ರಮ ವಹಿಸುತ್ತೇನೆ. ಕೆಲಸಗಳಿಗೆ ವಿಳಂಬ ಮಾಡಿದ್ದಲ್ಲಿ ನನ್ನ ಗಮನಕ್ಕೆ ತನ್ನಿ ಎಂದು ಸಮಾಧಾನಪಡಿಸಿದ ಜಿಲ್ಲಾಧಿಕಾರಿ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡು ಕೆಲಸ ನಿರ್ವಹಿಸಬೇಕು. ದೂರುಗಳು ಬರದಂತೆ ಎಚ್ಚರ ವಹಿಸಬೇಕೆಂದು ಮುಖ್ಯಾಧಿಕಾರಿ ಮಂಜುನಾಥ ಅವರಿಗೆ ತಾಕೀತು ಮಾಡಿದರು.ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ತಿಪ್ಪೇಸ್ವಾಮಿ, ಅಬ್ದುಲ್ಲಾ, ಟಿ.ಟಿ.ರವಿ ಕುಮಾರ್, ಮಾಜಿ ಅಧ್ಯಕ್ಷ ಜಿ.ಪ್ರಕಾಶ, ನಾಗರಾಜ,ಹರೀಶ ಪಾಳೆಗಾರ್ ಸೇರಿದಂತೆ ಹಲವರು ಇದ್ದರು.