ಸಾರಾಂಶ
ಕನ್ನಡಪ್ರಭ ವಾರ್ತೆ ಕೊಪ್ಪಳ
ಜಿಲ್ಲಾಧಿಕಾರಿ ಹಾಗೂ ಉಪಪ್ರಾದೇಶಿಕ ವಿಜ್ಞಾನ ಕೇಂದ್ರದ ಅಧ್ಯಕ್ಷ ನಲಿನ್ ಅತುಲ್ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿ ಕೇಂದ್ರದಲ್ಲಿ ಅಳವಡಿಸಲಾದ ಮೂರು ಕೊಠಡಿಗಳಲ್ಲಿನ 27 ಒಳಾಂಗಣ ವಿಜ್ಞಾನದ ಮಾದರಿ ವೀಕ್ಷಿಸಿದರು. ವಿಜ್ಞಾನದಲ್ಲಿ ಅವುಗಳ ಮಹತ್ವ ಕುರಿತು ಮತ್ತು ಶಾಲಾ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ, ತಾರ್ಕಿಕತೆ ಹೆಚ್ಚಿಸುವ ಕುರಿತು ಚರ್ಚಿಸಿದರು. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಇನ್ನೂ ಹೆಚ್ಚಿನ ವಿಜ್ಞಾನದ ಮಾದರಿಗಳನ್ನು ಅಳವಡಿಸಿ ಅಭಿವೃದ್ಧಿ ಪಡಿಸುವ ಬಗ್ಗೆ ಚರ್ಚಿಸಿದರು. ವಿಜ್ಞಾನ ಕೇಂದ್ರದಲ್ಲಿನ ಕುಂದು ಕೊರತೆಗಳನ್ನು ಆಲಿಸಿ ಪರಿಹರಿಸುವ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ತಿಳಿಸಿದರು.ಉಪಪ್ರಾದೇಶಿಕ ವಿಜ್ಞಾನ ಕೇಂದ್ರವು ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ(ಕೆಸ್ಟೆಪ್ಸ್) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯಾಗಿದ್ದು, ವಿಜ್ಞಾನ ಕೇಂದ್ರವು ವಿದ್ಯಾರ್ಥಿಗಳಿಗೆ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವ ಕೆಲಸ ಮಾಡುತ್ತಿದೆ. ಪ್ರತಿ ದಿನ ಒಂದೊಂದು ಶಾಲೆಯ ಮಕ್ಕಳು ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿ ವಿಜ್ಞಾನದ ಮಾದರಿ ವೀಕ್ಷಿಸಿ ಹೋಗುತ್ತಿದ್ದಾರೆ. ವಿಜ್ಞಾನ ಕೇಂದ್ರದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ, ರಾಷ್ಟ್ರೀಯ ಗಣಿತ ದಿನಾಚರಣೆ, ಅರಣ್ಯ ದಿನ, ಜಲ ದಿನ, ಶೂನ್ಯ ನೆರಳು ದಿನ, ಆಹಾರ ದಿನ, ಯುವ ದಿನ, ಮಹಿಳಾ ದಿನ ಸೇರಿದಂತೆ ನಾನಾ ದಿನಾಚರಣೆಯನ್ನು ಆಚರಿಸುವ ಮೂಲಕ ವಿದ್ಯಾರ್ಥಿಗಳಿಗೆ ಅವುಗಳ ಮಹತ್ವದ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ ಎಂದು ವಿಜ್ಞಾನ ಕೇಂದ್ರದ ಸಿಬ್ಬಂದಿ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಮುನಿರಾಬಾದ್ ಡಯಟ್‌ನ ಉಪನ್ಯಾಸಕ ಶೇಖರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ತಿಪ್ಪಣ್ಣ ಪಿ. ಶಿರಸಗಿ, ಕೊಪ್ಪಳ ವಿಜ್ಞಾನ ಕೇಂದ್ರದ ನೋಡಲ್ ಅಧಿಕಾರಿ ಗವಿಸಿದ್ದೇಶ್ವರ ಸ್ವಾಮಿ ಆರ್. ಬೆಣಕಲ್‌ಮಠ, ವಿಜ್ಞಾನ ಕೇಂದ್ರದ ಕ್ಯೂರೇಟರ್ ಮೈಲಾರಪ್ಪ, ಶಿಕ್ಷಣ ಸಹಾಯಕ ಫಕೀರ್ ಸಾಬ್ ಎಲ್ಲ ಮಾದರಿ ಕುರಿತು ಸವಿವರವಾಗಿ ವಿವರಿಸಿ ವಿಜ್ಞಾನ ಕೇಂದ್ರದ ಮಹತ್ವ ತಿಳಿಸಿದರು. ಕೇಂದ್ರದ ತಾಂತ್ರಿಕ ಸಹಾಯಕ ಮಹಾಲಿಂಗಪ್ಪ, ತಂತ್ರಜ್ಞ ಶಂಕ್ರಪ್ಪ ರಾಜೂರು ಹಾಗೂ ವಿಜ್ಞಾನ ಸಹಾಯಕ ಫಯಾಜುದ್ದೀನ್ ಇದ್ದರು.