ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರ ಕೊರತೆ ಇದೆ. ಜತೆಗೆ ತಾಯಿ, ಮಕ್ಕಳ ಆಸ್ಪತ್ರೆಗೆ ಒಬ್ಬರೇ ಪ್ರಸೂತಿ ತಜ್ಞರಿದ್ದಾರೆ. ಆದ್ದರಿಂದ ಇವುಗಳ ಬಗ್ಗೆ ಹೆಚ್ಚಿನ ಕಾಳಜಿ ತೋರುವುದಾಗಿ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಭರವಸೆ ನೀಡಿದರು. ತಾಲೂಕಿಗೆ ಭೇಟಿ ಕೊಟ್ಟು ವಿವಿಧ ಸ್ಥಳಗಳ ಪರಿಶೀಲನೆ ನಡೆಸಿದ ನಂತರ ಪಟ್ಟಣದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಸುದ್ದಿಗಾರರೊಂದಿಗೆ ಮಾತನಾಡಿದರು. ನದಿಗೆ ಕಲುಷಿತ ನೀರು ಸೇರ್ಪಡೆಯಾಗುತ್ತಿದೆ. ಮುಸ್ಲಿಂ ಬಾಹುಳ್ಯದ ಬಡಾವಣೆಯ ಯಾಸೀನ್ ನಗರ ಮಳೆಗಾಲದಲ್ಲಿ ನದಿ ತುಂಬಿ ಮನೆಗಳು ನೀರು ನುಗ್ಗಿ ಮನೆಗಳು ಮುಳುಗುತ್ತವೆ ಎಂದು ಪಟ್ಟಣದ ಸಮಸ್ಯೆ ಕಾಳಜಿಯ ನಡೆ ಕುರಿತು ತಿಳಿಸಿದರು. ಉನ್ನತ ವ್ಯಾಸಂಗದ ಅವಕಾಶ ಪಡೆಯಲು ಬೇಕಿರುವ ಸಿಇಟಿ ಹಾಗೂ ನೀಟ್ ಕೋಚಿಂಗ್ ಖಾಸಗಿ ಕಾಲೇಜಿನಂತೆ ಇಲ್ಲದಿರುವ ಬಗ್ಗೆ ಸಮಸ್ಯೆಗಳನ್ನು ಆಲಿಸಿದರು.ಸಮಸ್ಯೆಗಳನ್ನು ಖುದ್ದು ವೀಕ್ಷಿಸಿದ ನಂತರವೇ ಅದರ ನೈಜ ಸ್ವರೂಪ ಅರಿಯಲು ಸಾಧ್ಯ. ಹೀಗಾಗಿ ಪ್ರತಿ ತಾಲೂಕಿಗೂ ಭೇಟಿ ನೀಡುತ್ತೇನೆ ಜತೆಗೆ ಸೂಕ್ತ ಪರಿಹಾರ ಕಂಡು ಕೊಡುವ ಬಗ್ಗೆ ಪ್ರಯತ್ನಿಸಬಹುದು ಎಂದರು. ಇಲ್ಲಿನ ಪ್ರಶಾಂತ ವಾತಾವರಣ, ದೇಗುಲಗಳ ಸೊಬಗು ಭಕ್ತಿ ಭಾವ ಮೂಡಿಸಿವೆ ಎಂದು ಅಭಿಮಾನದಿಂದ ನುಡಿದರು. ಹಂಗರಹಳ್ಳಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಪೂರ್ವ ಪ್ರಾಥಮಿಕ ಶಾಲೆಯನ್ನು ಗ್ರಾಮದ ಮುಖಂಡರು ದತ್ತು ಪಡೆದು ಸವಲತ್ತು ಒದಗಿಸಿಕೊಟ್ಟಿರುವ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.ತಹಸೀಲ್ದಾರ್, ಪುರಸಭಾ ಮುಖ್ಯಾಧಿಕಾರಿ, ಬಿಇಒ, ಗ್ರಾಮ ಲೆಕ್ಕಾಧಿಕಾರಿಗಳು ಹಾಜರಿದ್ದರು.