ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿಗೆ ಪ್ರಸ್ತುತ ಇರುವ ಶಾಖೆಗಳ ಜೊತೆಗೆ ಇನ್ನೂ ಮೂರು ಶಾಖೆಗಳನ್ನು ತೆರೆಯಲು ಭಾರತೀಯ ರಿಸರ್ವ್ ಬ್ಯಾಂಕ್ ಅನುಮತಿ ನೀಡಿದ್ದು, ಡಿಸೆಂಬರ್ ಅಂತ್ಯದೊಳಗೆ ಈ ಮೂರು ಶಾಖೆಗಳನ್ನು ಉದ್ಘಾಟಿಸಲಾಗುವುದು ಎಂದು ಬ್ಯಾಂಕ್‌ನ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ತಿಳಿಸಿದರು.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಟ್ಟು 22 ಹೊಸ ಶಾಖೆಗಳನ್ನು ತೆರೆಯಲು ಅನುಮತಿ ಕೋರಿದ್ದು, ಈಗ ಮೂರು ಶಾಖೆಗಳಿಗೆ ಆರ್‌ಬಿಐ ಅನುಮತಿ ನೀಡಿದೆ. ಅದರಂತೆ ಡಿ.6 ರಂದು ಸೊರಬ ತಾಲೂಕಿನ ಜಡೆ ಗ್ರಾಮದಲ್ಲಿ, ಡಿ.12ರಂದು ಶಿಕಾರಿಪುರ ತಾಲೂಕಿನ ಸುಣ್ಣದಕೊಪ್ಪದಲ್ಲಿ ಶಾಖೆ ಹಾಗೂ ಡಿ.18ರಂದು ಭದ್ರಾವತಿ ತಾಲೂಕಿನ ಕಲ್ಲಿಹಾಳ್‌ನಲ್ಲಿ ಶಾಖೆ ಆರಂಭಿಸಲಾಗುವುದು. ವಿಧಾನಮಂಡಲದ ಅಧಿವೇಶನದ ಬಳಿಕ ವಿದ್ಯುಕ್ತವಾಗಿ ಈ ಶಾಖೆಗಳನ್ನು ಉದ್ಘಾಟಿಸಲಾಗುವುದು ಎಂದು ತಿಳಿಸಿದರು.
2023-24ನೇ ಸಾಲಿನಲ್ಲಿ ಒಟ್ಟು ₹17.99 ಕೋಟಿ ಲಾಭ ಗಳಿಸಿದ ಬ್ಯಾಂಕ್ ₹10.58 ಕೋಟಿ ನಿವ್ವಳ ಲಾಭ ಗಳಿಸಿದೆ. ₹138.98 ಕೋಟಿ ಷೇರು ಬಂಡವಾಳ ಹೊಂದಿದ್ದಲ್ಲದೆ, ₹67.46 ಕೋಟಿ ನಿಧಿಗಳನ್ನು ಹೊಂದಿದೆ. ₹2,332.29 ಕೋಟಿ ರು.ದುಡಿಯುವ ಬಂಡವಾಳ ಹೊಂದಿದ್ದು, ₹1,462.78 ಕೋಟಿ ಠೇವಣಿ ಸಂಗ್ರಹಿಸಲಾಗಿದೆ ಎಂದರು.ಜಿಲ್ಲೆಯಲ್ಲಿ 2023-24ನೇ ಸಾಲಿನಲ್ಲಿ 50,383 ರೈತರಿಂದ ₹22.60 ಕೋಟಿ ವಿಮಾ ಪ್ರೀಮಿಯಂ ಪಾವತಿಯಾಗಿದ್ದು, ಇದರಲ್ಲಿ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಒಂದರಿಂದಲೇ 23,094 ರೈತರಿಂದ ₹10.12 ಕೋಟಿ ಜಮಾ ಮಾಡಲಾಗಿದೆ. ಬೆಳೆ ವಿಮೆ ಯೋಜನೆಯಡಿ 62,887 ರೈತರಿಂದ ₹26.73 ಕೋಟಿ ವಿಮಾ ಪ್ರೀಮಿಯಂ ಪಾವತಿಯಾಗಿದೆ. ಇದರಲ್ಲಿ ತಮ್ಮ ಬ್ಯಾಂಕಿನ ಮೂಲಕವೇ 24,822 ರೈತರಿಂದ ₹10.83 ಕೋಟಿ ರು. ಜಮಾ ಮಾಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ನಬಾರ್ಡ್ ಪುನರ್ಧನ ಸೌಲಭ್ಯ ಕಡಿತಗೊಂಡಿದ್ದರೂ ಸಹಿತ 2024-25ನೇ ಸಾಲಿನಲ್ಲಿ ಶೂನ್ಯ ಬಡ್ಡಿ ದರದಲ್ಲಿ 1,20,000 ರೈತರಿಗೆ ₹1,200 ಕೋಟಿ ಅಲ್ಪಾವಧಿ ಕೃಷಿ ಬೆಳೆ ಸಾಲದ ಗುರಿ ಹೊಂದಿದ್ದು, ಪ್ರಸ್ತುತ 1,05,640 ರೈತರಿಗೆ ₹1180.12 ಕೋಟಿಸಾಲ ನೀಡಲಾಗಿದೆ. ಸಾಲ ವಸೂಲಾತಿ ಪ್ರಮಾಣ ಶೇ.99.07ರಷ್ಟಿದೆ ಎಂದರು.ಬೆಳೆ ವಿಮೆ ಪದ್ಧತಿ ಸಂಪೂರ್ಣ ಅವೈಜ್ಞಾನಿಕವಾಗಿದ್ದು, ವಿಮೆ ಮಾಡಿಕೊಳ್ಳುವ ಕಂಪನಿಯವರು ಎಲ್ಲಿದ್ದಾರೆ ಎಂಬುವುದೇ ಇನ್ನೂವರೆಗೂ ತಿಳಿದಿಲ್ಲ. ಬೆಳೆ ವಿಮೆ ಯೋಜನೆ ಆರಂಭವಾಗಿ ಸುಮಾರು 25 ವರ್ಷಗಳೇ ಕಳೆದರೂ ವಿಮೆ ಕಂಪನಿಗಳು ಶಿವಮೊಗ್ಗ ಜಿಲ್ಲೆಯಲ್ಲಿ ಶಾಖೆಯನ್ನೇ ತೆರೆದಿಲ್ಲ. ವಿಮೆ ಕುರಿತು, ಯಾರಿಗೆ ಕೇಳಬೇಕು ಎಂಬುವುದೇ ಯಕ್ಷ ಪ್ರಶ್ನೆಯಾಗಿ ಉಳಿದಿದೆ. ಇದರಿಂದ ರೈತರು ಇನ್ನಿಲ್ಲದ ಅನ್ಯಾಯವನ್ನು ಅನುಭವಿಸುವಂತಾಗಿದೆ ಎಂದು ವಿಮಾ ಕಂಪನಿಯ ವ್ಯವಹಾರದ ಕುರಿತು ಅಸಮಧಾನ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ 19,358 ರೈತರಿಗೆ ₹45 ಕೋಟಿ ಬೆಳೆ ವಿಮಾ ಪರಿಹಾರ ಬಿಡುಗಡೆಯಾಗಿದ್ದು, ಈ ಪೈಕಿ ಬ್ಯಾಂಕಿನಿಂದ 8,873 ರೈತರಿಗೆ ₹19.17ಕೋಟಿ ವಿಮೆ ಪರಿಹಾರವನ್ನು ನೇರವಾಗಿ ಖಾತೆದಾರರ ಉಳಿತಾಯ ಖಾತೆಗೆ ಬಿಡುಗಡೆ ಮಾಡಲಾಗಿದೆ ಎಂದರು. ನಬಾರ್ಡ್ ರೈತರ ಪರ ಅಭಿವೃದ್ಧಿ ಉದ್ದೇಶದಿಂದ ಸ್ಥಾಪಿತವಾಗಿದ್ದು, ಈಗ ಆ ಉದ್ದೇಶವನ್ನೇ ಮರೆತಿದೆ. ಅಲ್ಲದೆ ಸಹಕಾರಿ ಸಂಘಗಳ ಮೇಲೆ ನಬಾರ್ಡ್ ವ್ಯವಸ್ಥಿತ ಗದಪ್ರಹಾರ ಮಾಡುತ್ತಿದೆ ಎಂದು ಆಪಾಧಿಸಿದರು.2024-25ನೇ ಸಾಲಿನಲ್ಲಿ ₹1,600 ಕೋಟಿ ಠೇವಣಿ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಈ ಹಣಕಾಸಿನ ವರ್ಷಾಂತ್ಯಕ್ಕೆ ₹25 ಕೋಟಿ ರು. ನಿವ್ವಳ ಲಾಭಗಳಿಸುವ ಯೋಜನೆ ಹೊಂದಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವ್ಯವಸ್ಥಾಪಕ ನಿರ್ದೇಶಕ ಅನ್ನಪೂರ್ಣಮ್ಮ, ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ, ನಿರ್ದೇಶಕರಾದ ಮಹಾಲಿಂಗಶಾಸ್ತ್ರಿ, ಸುಧೀರ್, ದುಗ್ಗಪ್ಪಗೌಡ, ಹನುಮಂತ ಮತ್ತಿತರರು ಇದ್ದರು.