ಸಾರಾಂಶ
ಶಿವಮೊಗ್ಗ: ಡಿಸಿಸಿ ಬ್ಯಾಂಕ್‌ನಿಂದ ಆನ್‍ಲೈನ್ ಸೇವೆಗಳು ಪ್ರಾರಂಭವಾಗಿವೆ. ಮುಂದಿನ ದಿನದಲ್ಲಿ ಫೋನ್ ಪೇ ಕೂಡ ಪ್ರಾರಂಭವಾಗಲಿದೆ. ಆಧುನಿಕ ಬ್ಯಾಂಕಿಂಗ್ ವ್ಯವಸ್ಥೆ ನೇರವಾಗಿ ನಬಾರ್ಡ್‍ಗೆ ಲಿಂಕ್ ಕಲ್ಪಿಸುವ ಸಾಫ್ಟ್‌ವೇರ್ ಕೂಡ ಅಳವಡಿಸಲಾಗುವುದು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ತಿಳಿಸಿದರು.
ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್‍ನ ಮೊದಲನೇ ಮಹಡಿಯಲ್ಲಿ ನಿರ್ಮಿಸಿರುವ ನವೀಕೃತ ಕಾರ್ಪೊರೇಟ್ ಕಚೇರಿಯನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.ಸೈಬರ್ ಕ್ರೈಂಗಳು ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಗ್ರಾಹಕರಿಗೆ ಸುಭದ್ರ ವ್ಯವಸ್ಥೆ ಕಲ್ಪಿಸುವುದು ನಮ್ಮ ಗುರಿಯಾಗಿದೆ. ಡಿಸಿಸಿ ಬ್ಯಾಂಕ್‌ನಲ್ಲಿ 3 ಲಕ್ಷ ಗ್ರಾಹಕರಿದ್ದು, ಅವರ ದಾಖಲೆಗಳು ಸುರಕ್ಷಿತವಾಗಿ ಇರಬೇಕು ಎನ್ನುವ ದೃಷ್ಟಿಯಿಂದ ಅತ್ಯಂತ ಭದ್ರತೆ ಇರುವ ಕಚೇರಿ ನಿರ್ಮಿಸಲಾಗಿದೆ. ಇದರಿಂದ ಗ್ರಾಹಕರಿಗೆ ಹೆಚ್ಚಿನ ಸುಲಲಿತ ಮತ್ತು ವೇಗದ ಸೇವೆ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದರು.ಠೇವಣಿದಾರರಿಗೆ ಭದ್ರತೆ ಕೊಡುವ ಕಾಯ್ದೆಯನ್ನು ಬರುವ ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿಗಳು ಮಂಡಿಸಲಿದ್ದಾರೆ. 15 ದಿನಗಳ ಒಳಗೆ ಡಿಸಿಸಿ ಬ್ಯಾಂಕ್‍ನ ಮೂರು ಹೊಸ ಶಾಖೆಗಳು ಕಾರ್ಯಾಚರಿಸಲಿದ್ದು, ಹೋಬಳಿ ಮಟ್ಟದಲ್ಲೂ ಇನ್ನೂ 19 ಶಾಖೆಗಳನ್ನು ತೆರೆಯಲು ಆರ್.ಬಿ.ಐ. ಅನುಮತಿ ಕೇಳಲಾಗಿದೆ ಎಂದು ತಿಳಿಸಿದರು.
ಕಾರ್ಪೋರೇಟ್ ಆಡಳಿತ ಮಾದರಿಯಲ್ಲಿ ಸಿಬ್ಬಂದಿಗಳು ಹೊಸ ವಾತಾವರಣದಲ್ಲಿ ಕೋ ಆಪರೇಟಿವ ಸೊಸೈಟಿಯಲ್ಲೂ ಕೂಡ ಉತ್ತಮ ಸೇವೆ ನೀಡಲಿ ಎಂಬ ಉದ್ದೇಶದಿಂದ ಈ ಸುಸಜ್ಜಿತ ಕಚೇರಿ ಲೋಕಾರ್ಪಣೆ ಮಾಡಲಾಗಿದೆ. ಸ್ಪರ್ಧಾತ್ಮಕ ಯುಗದಲ್ಲಿ ಸಹಕಾರಿ ವ್ಯವಸ್ಥೆ ಮುಂಚೂಣಿಗೆ ಬರಲು ಇದು ಸಹಕಾರಿಯಾಗುತ್ತದೆ ಎಂದರು.ಮುಂದಿನ ಎರಡು ವರ್ಷದಲ್ಲಿ ಡಿಸಿಸಿ ಬ್ಯಾಂಕ್ ಗೆ 75 ವರ್ಷ ತುಂಬಲಿದ್ದು, ಹೊಸ ಕಟ್ಟಡ ನಿರ್ಮಾಣ ಸೇರಿದಂತೆ ಅನೇಕ ಯೋಜನೆಗಳನ್ನು ರಾಜ್ಯದಲ್ಲೇ ಮಾದರಿಯಾಗಿ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
ವೇಗದ ಸೇವೆ ಜೊತೆಗೆ ಮನೆ ಬಾಗಿಲಿಗೆ ಬ್ಯಾಂಕಿಂಗ್ ವ್ಯವಸ್ಥೆ ಒದಗಿಸುತ್ತಿದ್ದು, ಸಿಬಿಲ್‌ನಿಂದ ರೈತರಿಗೆ ಸಮಸ್ಯೆಯಾಗಬಾರದು, ಸರ್ಕಾರದಿಂದ ಸಿಗುವ ಬಡ್ಡಿರಹಿತ ಸಾಲದಿಂದ ರೈತರು ವಂಚಿತರಾಗಬಾರದು ಎನ್ನುವ ಕಾರಣದಿಂದ ಆರ್.ಬಿ.ಐ. ಸೂಚನೆ ಇದ್ದರೂ ಕೂಡ ರೈತರ ಸಾಲಕ್ಕೆ ಸಿಬಿಲ್ ಅನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದರು.ಹಾಲು ಉತ್ಪಾದಕರಿಗೆ ಹೆಚ್ಚಿನ ಸೇವೆ ನೀಡುವ ದೃಷ್ಟಿಯಿಂದ ಶಿಮುಲ್ ಸಹಯೋಗದೊಂದಿಗೆ ಶೂನ್ಯ ಬ್ಯಾಲೆನ್ಸ್ ಖಾತೆಯನ್ನು ತೆರೆಯಲಾಗುವುದು. ಕೇಂದ್ರ ಸರ್ಕಾರದಿಂದ 1991ರ ಬಳಿಕ ಪುನರ್ ಧನ ಹಂತ ಹಂತವಾಗಿ ಕಡಿಮೆಯಾಗುತ್ತಾ ಬಂದಿದೆ. ಸಹಕಾರಿ ಸಂಸ್ಥೆಗಳು ಸ್ವಂತ ಕಾಲಲ್ಲಿ ನಿಲ್ಲಬೇಕೆಂಬ ಉದ್ದೇಶದಿಂದ ಸಬ್ಸಿಡಿ ನಿಲ್ಲಿಸುತ್ತಾ ಬಂದಿದ್ದಾರೆ. ಆದರೂ, ರಾಜ್ಯ ಸರ್ಕಾರ ಜಿಲ್ಲೆಗೆ 300 ಕೋಟಿ ರು. ಸಹಾಯಧನದ ಸಾಲ ನೀಡಿದೆ ಎಂದು ತಿಳಿಸಿದರು.ಕೆನರಾ ಬ್ಯಾಂಕ್ ನವರೂ ಕೂಡ ನಮ್ಮಲ್ಲಿ ಡೆಪಾಸಿಟ್ ಇಡುವ ಮಟ್ಟಿಗೆ ನಾವು ವಿಶ್ವಾಸ ಗಳಿಸಿದ್ದೇವೆ. ರಾಜ್ಯದಲ್ಲಿ ನಂಬರ್ ಒನ್ ಸ್ಥಾನ ಗಳಿಸಿದ್ದೇವೆ. ಕೃಷಿಯೇತರ ನರ್ಸಿಂಗ್ ಹೋಂ, ಆರೋಗ್ಯ, ಶಿಕ್ಷಣ ಸಂಸ್ಥೆಗಳಿಗೆ 3 ಕೋಟಿ ರು.ವರೆಗೆ ಸಾಲ ನೀಡುತ್ತೇವೆ ಎಂದು ವಿವರಿಸಿದರು.ಈ ವರ್ಷ ನಮ್ಮ ಬ್ಯಾಂಕಿನಲ್ಲಿ ಕೂಡ ಹೊಸ ಸಾಲ ನೀಡಿದ್ದೇವೆ. ಡಿಸೆಂಬರ್ ಅಂತ್ಯದ ವೇಳೆಗೆ ಸುಮಾರು 1.20 ಲಕ್ಷ ರೈತರಿಗೆ ಸಾಲ ನೀಡುವ ಯೋಜನೆ ಇದೆ. 7ನೇ ವೇತನ ಆಯೋಗದ ಶಿಫಾರಸಿನಂತೆ ನಮ್ಮ ಡಿಸಿಸಿ ಬ್ಯಾಂಕ್ ಸಿಬ್ಬಂದಿಗೂ ಕೂಡ ವೇತನ ನೀಡುತ್ತಿದ್ದೇವೆ ಎಂದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ, ನಿರ್ದೇಶಕರಾದ ಎಂ.ಎಂ.ಪರಮೇಶ್, ಜಿ.ಎನ್.ಸುಧೀರ್, ಕೆ.ಪಿ.ರುದ್ರೇಗೌಡ, ಟಿ.ಶಿವಶಂಕರಪ್ಪ, ಸಿ.ಹನುಮಂತಪ್ಪ, ಮಹಾಲಿಂಗಯ್ಯ ಶಾಸ್ತ್ರಿ, ಡಿ.ಎಲ್.ಬಸವರಾಜ್ , ಉಪ ನಿಬಂಧಕರಾದ ನಾಗಭೂಷಣ ಕಲ್ಮನೆ, ಸಿಇಒ ಅನ್ನಪೂರ್ಣ, ಎಚ್.ಎಸ್.ರವೀಂದ್ರ, ವೀರಮ್ಮ ಮತ್ತಿತರರಿದ್ದರು.