ಅಯೋಗ್ಯ ಗೌರ್ನರ್‌: ಕೈ ಕಾರ್ಯಕರ್ತರ ಕಿಡಿ

| Published : Aug 20 2024, 12:52 AM IST

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ಖಂಡಿಸಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ಕಾಂಗ್ರೆಸ್‌ ಪಕ್ಷ ಬೃಹತ್ ಪ್ರತಿಭಟನೆ ನಡೆಸಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ಖಂಡಿಸಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ಕಾಂಗ್ರೆಸ್‌ ಪಕ್ಷ ಬೃಹತ್ ಪ್ರತಿಭಟನೆ ನಡೆಸಿತು.

ಬೆಂಗಳೂರು ನಗರ ವ್ಯಾಪ್ತಿಯ ಐದೂ ಜಿಲ್ಲಾ ಕಾಂಗ್ರೆಸ್‌ ಸಮಿತಿಗಳ ವತಿಯಿಂದ ಒಟ್ಟಾಗಿ ನಡೆಸಿದ ಪ್ರತಿಭಟನೆಯಲ್ಲಿ ಕೆಪಿಸಿಸಿ ಪದಾಧಿಕಾರಿಗಳು, ಸಚಿವರು, ಶಾಸಕರು ಸೇರಿ ಸಾವಿರಾರು ಮಂದಿ ಕಾರ್ಯಕರ್ತರು ಭಾಗವಹಿಸಿ ಕೇಂದ್ರ ಸರ್ಕಾರ ಹಾಗೂ ರಾಜ್ಯಪಾಲರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯಪಾಲರು ತಮ್ಮ ಸ್ಥಾನದ ಘನತೆ ಹಾಳು ಮಾಡುತ್ತಿದ್ದಾರೆ. ಇವರು ಘನತವೆತ್ತ ರಾಜ್ಯಪಾಲರಲ್ಲ ಬದಲಿಗೆ ಅಯೋಗ್ಯ, 420, ನಾಲಾಯಕ್‌ ರಾಜ್ಯಪಾಲರು ಎಂದು ಸಚಿವರು ಹಾಗೂ ಪದಾಧಿಕಾರಿಗಳು ತಮ್ಮ ಭಾಷಣದ ಉದ್ದಕ್ಕೂ ರಾಜ್ಯಪಾಲರ ವಿರುದ್ಧ ಕಿಡಿ ಕಾರಿದರು.

ಬಳಿಕ ಬಳಿಕ ವಿಧಾನಪರಿಷತ್‌ ಮುಖ್ಯಸಚೇತಕ ಸಲೀಂ ಅಹಮದ್‌ ಹಾಗೂ ಕೆಪಿಸಿಸ ಮಹಿಳಾ ಘಟಕದ ಅಧ್ಯಕ್ಷರ ನೇತೃತ್ವದಲ್ಲಿ ನಗರ ಜಿಲ್ಲಾಧಿಕಾರಿ ಕೆ. ದಯಾನಂದ್‌ ಅವರನ್ನು ಭೇಟಿ ಮಾಡಿ, ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್‌ ಅನುಮತಿ ಹಿಂಪಡೆಯುವಂತೆ ಸೂಚಿಸಲು ರಾಷ್ಟ್ರಪತಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.

ಅಯೋಗ್ಯ, ಬೇಜವಾಬ್ದಾರಿ ರಾಜ್ಯಪಾಲ: ಸಲೀಂ ಅಹಮದ್‌

ವಿಧಾನಪರಿಷತ್‌ನ ಸರ್ಕಾರದ ಮುಖ್ಯಸಚೇತಕ ಸಲೀಂ ಅಹಮದ್‌ ಮಾತನಾಡಿ, ಮುಖ್ಯಮಂತ್ರಿಗಳ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ಥಾವರ್‌ಚಂದ್‌ ಗೆಹಲೋತ್‌ ಅವರು ಅಯೋಗ್ಯ ಹಾಗೂ ಬೇಜಾವಾಬ್ದಾರಿ ರಾಜ್ಯಪಾಲರು. ಸರ್ಕಾರದ ಜನಪ್ರಿಯತೆ ಸಹಿಸದೆ ಷಡ್ಯಂತ್ರ ನಡೆಸಿದ್ದಾರೆ. ಅಮಿತ್ ಶಾ ಒತ್ತಡಕ್ಕೆ ಮಣಿದು ಯಾವುದೇ ದಾಖಲೆ ಪರಿಶೀಲಿಸದೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ ಎಂದು ಕಿಡಿ ಕಾರಿದರು.ರಾಜಭವನ ಬಿಜೆಪಿಯ ಗುಮಾಸ್ತರ ಕಚೇರಿ ಆಗಿದೆ: ರಾಮಲಿಂಗಾರೆಡ್ಡಿ

ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಕೇಂದ್ರ ಸರ್ಕಾರ ರಾಜ್ಯಪಾಲರ ಕಚೇರಿಯನ್ನು ಗುಮಾಸ್ತರ ಕಚೇರಿ ಮಾಡಿಕೊಂಡಿದೆ. ರಾಜ್ಯಪಾಲರಿಗೆ ಕೊಡಬೇಕಾದ ಗೌರವವನ್ನು ಕೇಂದ್ರ ಸರ್ಕಾರ ನೀಡುತ್ತಿಲ್ಲ. ರಾಜ್ಯಪಾಲರನ್ನು ಗುಮಾಸ್ತರ ರೀತಿಯಲ್ಲಿ ನಡೆಸಿಕೊಳ್ಳುತ್ತಿದ್ದಾರೆ. ರಾಜ್ಯಪಾಲರು ಕೂಡಲೇ ಅನುಮತಿ ಹಿಂಪಡೆಯಬೇಕು. ಇಲ್ಲದಿದ್ದರೆ ಬಿಜೆಪಿ ಕೈಗೊಂಬೆಯಾಗಿರುವ ಗೆಹಲೋತ್‌ ಅವರು ರಾಜ್ಯಪಾಲ ಹುದ್ದೆಯಲ್ಲಿ ಇರಲು ಲಾಯಕ್ಕಿಲ್ಲ ಎಂದು ಟೀಕಿಸಿದರು.ಕೃಷ್ಣಬೈರೇಗೌಡ ಮಾತನಾಡಿ, ರಾಜ್ಯಪಾಲರು ದೆಹಲಿ ಬಿಜೆಪಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಗುಲಾಮರಾಗಿ ಕೆಲಸ ಮಾಡುವವರು ಕೇಂದ್ರಕ್ಕೆ ಬೇಕು. ರಾಜ್ಯಪಾಲರನ್ನು ಬಳಸಿಕೊಂಡು ಸರ್ಕಾರ ಬುಡ ಮೇಲು ಮಾಡಲು ಹೊರಟಿದ್ದಾರೆ ಎಂದು ದೂರಿದರು.ರಾಜ್ಯಪಾಲರನ್ನು 420 ಎಂದು ಕರೆಯಬೇಕೆ?: ದಿನೇಶ್ ಗುಂಡೂರಾವ್‌

ದಿನೇಶ್ ಗುಂಡೂರಾವ್‌ ಮಾತನಾಡಿ, ಕುಮಾರಸ್ವಾಮಿ ವಿರುದ್ಧ ಲೋಕಾಯುಕ್ತರು ವರದಿ ನೀಡಿ ಪ್ರಾಸಿಕ್ಯೂಷನ್‌ಗೆ ಮನವಿ ಮಾಡಿ 10 ತಿಂಗಳಾದರೂ ರಾಜ್ಯಪಾಲರು ಕ್ರಮ ಕೈಗೊಂಡಿಲ್ಲ. ಸಿದ್ದರಾಮಯ್ಯ ವಿರುದ್ಧ ಏಕಾಏಕಿ ಅನುಮತಿ ನೀಡಿದ್ದಾರೆ. ಇಂತಹ ನೀಚ ಮಟ್ಟದ ಕೆಲಸ ಮಾಡುತ್ತಿರುವ ರಾಜ್ಯಪಾಲರನ್ನ ಏನೆಂದು ಕರೆಯಬೇಕು? ಬಿಜೆಪಿ ಏಜೆಂಟ್, 420, ಮೋಸಗಾರ‌ ಇನ್ನೂ ಏನೆಂದು ಕರೆಯಬೇಕು? ಎಂದು ಪ್ರಶ್ನಿಸಿದರು.ಸಚಿವರಾದ ಕೆ.ಜೆ. ಜಾರ್ಜ್, ಜಮೀರ್‌ ಅಹಮದ್‌ ಸೇರಿದಂತೆ ಹಲವರು ಭಾಗವಹಿಸಿದ್ದರು. ಕೋಟ್‌...

ರಾಜ್ಯಪಾಲರ ನಿರ್ಣಯ ಖಂಡಿಸಿ ಪ್ರತಿಭಟನೆ ನಡೆಸುವಾಗ ಬಾಗಲಕೋಟೆಯಲ್ಲಿ ಪಕ್ಷದ ಕಾರ್ಯಕರ್ತ ದ್ಯಾಮಪ್ಪ ಎಂಬ ಅಭಿಮಾನಿಯೊಬ್ಬರು ಗಾಯಗೊಂಡಿದ್ದಾರೆ. ಪ್ರಜಾಪ್ರಭುತ್ವದ ಉಳಿವಿಗಾಗಿ ನನ್ನ ಮತ್ತು ನಮ್ಮ ಪಕ್ಷದ ಪರವಾಗಿ ಹೋರಾಟ ನಡೆಸುತ್ತಿರುವ ಆತ್ಮೀಯ ಬಂಧುಗಳು ಪ್ರತಿಭಟನೆಯ ವೇಳೆ ದಯವಿಟ್ಟು ಎಚ್ಚರಿಕೆಯಿಂದಿರಿ. ನಿಮ್ಮ ಕಾಳಜಿ, ಆಕ್ರೋಶವನ್ನು ನಾನು ಅರ್ಥೈಸಿಕೊಳ್ಳಬಲ್ಲೆ. ಆದರೆ ನನಗೆ ನಿಮ್ಮೆಲ್ಲರ ಆರೋಗ್ಯ, ಜೀವವೂ ಮುಖ್ಯ.

- ಸಿದ್ದರಾಮಯ್ಯ, ಮುಖ್ಯಮಂತ್ರಿ