ಸಾರಾಂಶ
ಬೆಂಗಳೂರು : ಸಿಇಟಿ ಪರೀಕ್ಷೆಯಲ್ಲಿ ವಿದ್ಯಾರ್ಥಿಯ ಜನಿವಾರ ತೆಗೆಸಿದ್ದು ತಪ್ಪು. ಧಾರ್ಮಿಕ ಸಂಪ್ರದಾಯಗಳಿಗೆ ಧಕ್ಕೆ ತರಬಾರದು. ಇಂತಹ ಘಟನೆಗಳಿಗೆ ನಮ್ಮ ಸರ್ಕಾರ ಅವಕಾಶ ನೀಡುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಜನಿವಾರ, ಇಷ್ಟಲಿಂಗ ಕಟ್ಟಿಕೊಳ್ಳುವುದು, ಶಿವದಾರ, ಉಡುದಾರ, ಮಾಂಗಲ್ಯ ಸರ ಧರಿಸುವ ಪದ್ಧತಿಗಳಿವೆ. ಅವು ಅವರ ಧಾರ್ಮಿಕ ಪದ್ಧತಿಗಳು.
ಪೊಲೀಸ್ ಮತ್ತಿತರ ನೇಮಕಾತಿ ಸಂದರ್ಭದಲ್ಲಿ ಮಾತ್ರ ಅವುಗಳನ್ನು ಪರಿಶೀಲನೆ ನಡೆಸಲಾಗುತ್ತದೆ. ಉಳಿದಂತೆ ಶಾಲೆ-ಕಾಲೇಜುಗಳಲ್ಲಿ ಅವುಗಳನ್ನು ತೆಗೆಸುವ ಕೆಲಸವನ್ನು ಯಾರೂ ಮಾಡಬಾರದು ಎಂದರು.ಪರೀಕ್ಷೆ ವೇಳೆ ಕೆಲವರು ಪರೀಕ್ಷಾ ಅಕ್ರಮ ನಡೆಸಲು ಇಯರ್‌ಫೋನ್, ಬ್ಲೂಟೂತ್ ಮುಂತಾದ ಸಣ್ಣ ಡಿವೈಸ್‌ಗಳನ್ನು ಕಿವಿ ಮತ್ತಿತರ ಕಡೆ ಇಟ್ಟುಕೊಂಡಿರುತ್ತಾರೆ.
ಅದನ್ನು ಪರಿಶೀಲಿಸುವ ವೇಳೆ ಕರ್ತವ್ಯ ಭಯದಿಂದ ಕೆಲ ಸಿಬ್ಬಂದಿ ಈ ರೀತಿಯ ಕೆಲಸ ಮಾಡಿರಬಹುದು. ಇಂತಹ ಘಟನೆಗಳಿಗೆ ನಮ್ಮ ಸರ್ಕಾರ ಅವಕಾಶ ನೀಡುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.