ಸಾರಾಂಶ
ಕೋಲಾರ : ಹಿಜಾಬ್ ವಿವಾದ ಎದುರಾದಾಗ ಬಾಯಿ ಹರಿದುಕೊಂಡು ಮಾತನಾಡಿದ್ದ ಕಾಂಗ್ರೆಸ್ ನಾಯಕರು ಈಗ ಜನಿವಾರ ವಿವಾದದ ಕುರಿತು ತುಟಿ ಬಿಚ್ಚುತ್ತಿಲ್ಲ, ಇವರ ಬ್ರದರ್ಸ್ ಪೊಲೀಸ್ ಠಾಣೆಗೆ ಬೆಂಕಿಯಿಟ್ಟರೂ ಅವರಿಗೆ ರಿಯಾಯಿತಿ ನೀಡುತ್ತಾರೆ, ಹಿಂದೂಗಳೆಂದರೆ ಇವರಿಗೆ ಅಸಡ್ಡೆ ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ಆರೋಪಿಸಿದರು.
ಸಿಇಟಿ ಪರೀಕ್ಷೆಗೆ ಜನಿವಾರ ಹಾಕಿದ ವಿದ್ಯಾರ್ಥಿಗಳಿಗೆ ನಿಷೇಧ ಹೇರಿದ ಕ್ರಮದ ಕುರಿತು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಜಾಬ್ ಹಾಕಿ ಪರೀಕ್ಷೆಗೆ ಹೋದರೆ ಏನೆಲ್ಲಾ ಅವಾಂತರ ನಡೆಯಬಹುದು, ಆದರೆ ಜನಿವಾರ ಹಾಕಿ ಪರೀಕ್ಷೆಗೆ ಹೋದರೆ ಏನು ತೊಂದರೆ ಎಂದು ಪ್ರಶ್ನಿಸಿದರು.ಎಲ್ಲರಿಗೂ ಕಾನೂನು ಒಂದೇ
ಸಿದ್ದರಾಮಯ್ಯ ಸರ್ಕಾರದಲ್ಲಿ ಹಿಂದುಗಳಿಗೆ ರಕ್ಷಣೆ ಇಲ್ಲ, ಒಂದು ಕೋಮಿನ ತುಷ್ಟೀಕರಣ ಮಿತಿಮೀರಿದೆ, ಇದು ಮುಂದೊಂದು ದಿನ ಅವರಿಗೆ ತಕ್ಕ ಪಾಠವಾಗಲಿದೆ. ಈ ದೇಶದಲ್ಲಿ ಹಿಂದುವಾಗಿರಲಿ, ಮುಸ್ಲೀಮರಾಗಿರಲಿ, ಕ್ರೈಸ್ತರಾಗಿರಲಿ ಎಲ್ಲರಿಗೂ ಒಂದೇ ಕಾನೂನು. ಆದರೆ ಒಂದು ಕೋಮಿನ ಕುರಿತು ಇಷ್ಟೊಂದುಕಾಳಜಿ ಏಕೆ ಎಂದು ಪ್ರಶ್ನಿಸಿದರು.ಹಿಂದುಗಳಿಗೆ ಜನಿವಾರ ಪವಿತ್ರ
ಜನಿವಾರ ಹಿಂದುಗಳಿಗೆ ಪವಿತ್ರ ಆಚರಣೆ, ಅದು ಬ್ರಾಹ್ಮಣರಿಗೆ ಮಾತ್ರ ಸೀಮಿತವಲ್ಲ, ಹಿಂದುಳಿದ ವಿಶ್ವಕರ್ಮ, ತಿಗಳ,ಪದ್ಮಶಾಲಿಗಳು ಹಾಕುತ್ತಾರೆ, ಶಿವಲಿಂಗದೊಂದಿಗೆ ಲಿಂಗಾಯತರು ಧರಿಸುತ್ತಾರೆ ಹೀಗಿರುವಾಗ ಈ ಪವಿತ್ರ ದಾರದಿಂದ ಪರೀಕ್ಷೆಯಲ್ಲಿ ನಕಲು ಮಾಡಲು ಸಾಧ್ಯವೇ ಎಂಬ ಸಾಮಾನ್ಯ ಜ್ಞಾನವೂ ಈ ಸರ್ಕಾರಕ್ಕಿಲ್ಲ ಎಂದು ಲೇವಡಿ ಮಾಡಿದರು.
ರಾಜ್ಯದಲ್ಲಿನ ಹಿಂದೂಗಳೂ ನಿಮಗೆ ಮತ ನೀಡಿದ್ದಾರೆ ಎಂಬುದನ್ನು ಮರೆಯದಿರಿ, ನಿಮ್ಮ ಈ ಆಟ ಹೆಚ್ಚು ದಿನ ನಡೆಯಲ್ಲ, ಜನತೆ ತಿರುಗಿ ಬಿದ್ದರೆ ಎಂತಹ ಸರ್ಕಾರವೂ ಇರೋದಿಲ್ಲ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಸಿದರು.