ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಅಂಧ ವಿದ್ಯಾರ್ಥಿನಿ ಕೆಲಸ, ಬಿಡಿಎ ಫ್ಲಾಟ್, ಬಡವರ ಜಾಗ ರಕ್ಷಣೆಗೆ ಅಧಿಕಾರಿಗಳಿಗೆ ತಾಕೀತು, ದಾಖಲೆಗಳು ಸರಿ ಇದ್ದರೂ ಖಾತೆ ಮಾಡಿಕೊಡದ ಅಧಿಕಾರಿಗಳ ತರಾಟೆ, ದಯಾಮರಣ ಕೋರಿ ಬಂದ ಮಹಿಳೆಗೆ ಸಾಂತ್ವನ...ಹೀಗೆ, ಅನೇಕ ಭಾವುಕ ಕ್ಷಣಗಳಿಗೆ ಯಲಹಂಕದ ನ್ಯೂ ಟೌನ್‌ನ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ನಡೆದ 2ನೇ ದಿನದ ‘ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮ ಸಾಕ್ಷಿಯಾಯಿತು.
ಸುಮಾರು 3 ಸಾವಿರ ಅಹವಾಲುಗಳನ್ನು ಸ್ವೀಕರಿಸಿದ ಅವರು, ಸರಿಯಾದ ದಾಖಲೆಗಳಿದ್ದರೂ ಖಾತಾ ಮಾಡಿಕೊಡುತ್ತಿಲ್ಲ ಎಂದು ಮಹಿಳೆಯೊಬ್ಬರು ದೂರು ನೀಡಿ ಆಸ್ತಿ ರಕ್ಷಣೆ ಮಾಡಿಕೊಡುವಂತೆ ಕಣ್ಣೀರಿಟ್ಟರು. ಅದಕ್ಕೆ ಸ್ಪಂದಿಸಿದ ಶಿವಕುಮಾರ್, ಅಳಬೇಡಮ್ಮ ನಮ್ಮ ಸರ್ಕಾರವಿದೆ, ನಾನಿದ್ದೇನೆ, ನಿನ್ನ ಜಾಗದಲ್ಲೇ ಇರು ಎಂದು ಧೈರ್ಯ ತುಂಬಿದರು. ಜತೆಗೆ ಎಂಜಿನಿಯರ್‌ಗೆ ಒಂದು ವಾರದಲ್ಲಿ ಸಮಸ್ಯೆ ಬಗೆಹರಿಯಬೇಕು ಎಂಬ ತಾಕೀತು ಮಾಡಿದರು.ಅಲ್ಲದೇ, ಈ ಭಾಗದಲ್ಲಿ ಇಷ್ಟೊಂದು ಭೂಮಿಯ ಸಮಸ್ಯೆ ಇದೆ. ಎಲ್ಲಾ ದಾಖಲೆಗಳು ಸರಿ ಇದ್ದರೂ ಖಾತೆ ಮಾಡಿಕೊಡಲು ಏನಾಗಿದೆ ನಿಮಗೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಅಂಧ ವಿದ್ಯಾರ್ಥಿನಿಗೆ ಬಿಬಿಎಂಪಿ ಕೆಲಸ:ದೋಷವಿದ್ದರೂ ಬಿಎ ಪದವಿ ಪೂರ್ಣ ಮಾಡಿದ್ದೇನೆ. ಮನೆ ಮತ್ತು ಕೆಲಸ ಬೇಕು ಎಂದು ದಾಸರಹಳ್ಳಿಯ ಹಿವ್ಯಾಂಜಲಿ ಮನವಿ ಸಲ್ಲಿಸಿದಾಗ, ಬಿಡಿಎ ಆಯುಕ್ತ ಜಯರಾಮ್ ಅವರಿಗೆ ಅಂಗವಿಲರ ಕೋಟಾದ ಅಡಿಯಲ್ಲಿ ಫ್ಲಾಟ್ ನೀಡುವಂತೆ ಸೂಚಿಸಿದರು. ಜತೆಗೆ ಪಾಲಿಕೆಯಲ್ಲಿ ಕೆಲಸ ಕೊಡುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್‌ಗೆ ನಿರ್ದೇಶಿಸಿದರು.ದಯಾಮರಣ ಇಲ್ಲ, ಸಮಸ್ಯೆ ಪರಿಹಾರ ಅಷ್ಟೇ
ಬಿಪಿಎಲ್ ಕಾರ್ಡ್ ಇಲ್ಲ, ಕಿಡ್ನಿ ಸಮಸ್ಯೆ ಇದೆ. ಜೀವನ ನಡೆಸುವುದು ಕಷ್ಟವಾಗಿದೆ. ಹೀಗಾಗಿ, ದಯಾಮರಣ ಕೊಡಿ ಎಂದು ಕಣ್ಣೀರಿಟ್ಟ ದಾಸರಹಳ್ಳಿಯ ರಾಧಮ್ಮ. ಕೂಡಲೇ ಉಪ ಮುಖ್ಯಮಂತ್ರಿ ತಮ್ಮ ಜೇಬಿನಿಂದ ಸಿಕ್ಕಷ್ಟು ಹಣ ತೆಗೆದು ಕೊಟ್ಟು ಅಳಬೇಡಮ್ಮ ಎಂದು ಸಮಾಧಾನ ಪಡಿಸಿದರು. ದಯಾಮರಣ ಕೊಡಲು ಬಂದಿಲ್ಲ. ನಿಮ್ಮ ಯಾವುದೇ ಸಮಸ್ಯೆ ಇದ್ದರೂ ಪರಿಹಾರ ಮಾಡುತ್ತೇನೆ ಎಂದು ಭರವಸೆ ನೀಡಿದರು.ಇನ್ನು ನೀರು ಬರುವುದಿಲ್ಲ. ಆದರೆ, ಜಲಮಂಡಳಿಯ ಮೀಟರ್ ಓಡುತ್ತದೆ ಎಂದು ಗಂಗೇಗೌಡ ಅವರ ಮನವಿಗೆ ಸ್ಪಂದಿಸಿದ ಡಿಸಿಎಂ, ಜಲಮಂಡಳಿ ಎಂಜಿನಿಯರ್ ಒಂದು ವಾರದೊಳಗೆ ಇವರ ಮನೆ ನೀರಿನ ಸಮಸ್ಯೆ ಬಗೆಹರಿಯಬೇಕು ಎಂದು ಗಡುವು ನೀಡಿದರು. ವಿದ್ಯಾರಣ್ಯಪುರದ ಬೀದಿ ಬದಿ ಪಡ್ಡು ವ್ಯಾಪಾರಿ ವಲ್ಲಿಮಾ ಅವರು ರಸ್ತೆ ಬದಿ ವ್ಯಾಪಾರ ಮಾಡಲು ಅವಕಾಶ ನೀಡುವಂತೆ ಮನವಿಗೆ ಸ್ಪಂದಿಸಿ ‘ತಳ್ಳುವ ಗಾಡಿ ಕೊಡಿಸುವುದಾಗಿ ಭರವಸೆ ನೀಡಲಾಗಿದೆ.
ಹೀಗೆ ನಿವೃತ್ತ ಸೈನಿಕರ ನಿವೇಶನ ತೊಂದರೆ, ರಾಜಕಾಲುವೆ ಒತ್ತುವರಿ, ಶಿವರಾಮ ಕಾರಂತ ಬಡಾವಣೆ ಸಮಸ್ಯೆ, ಎನ್ಇಎಸ್ ಮೇಲ್ಸೇತುವೆ ಕಾಮಗಾರಿ, ಅಂಗನವಾಡಿ ಸಮಸ್ಯೆ, ಮಾಶಾಸನ, ಬಿಪಿಎಲ್ ಕಾರ್ಡ್ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡಲಾಯಿತು.ಪುರುಷರಿಗೂ ಬಸ್ಉಚಿತ ಮಾಡಿ!
ಯಲಹಂಕ ಹಿರಿಯ ನಾಗರಿಕರ ವೇದಿಕೆಯ ಸದಸ್ಯರು, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡಿದಂತೆ ಪುರುಷರಿಗೂ ನೀಡುವಂತೆ ಮನವಿ ಮಾಡಿದರು. ಪುರುಷರಿಗೆ ಉಚಿತ ಬಸ್ ಸೇವೆ ನೀಡುವುದಕ್ಕೆ ಸಾಧ್ಯವಿಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.