ಸಾರಾಂಶ
ಬಳ್ಳಾರಿ: ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಅವರು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಗುರುವಾರ ಭೇಟಿ ನೀಡಿ ಕೇಂದ್ರ ಸರ್ಕಾರದ ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ಗ್ರಂಥಾಲಯ ಹಾಗೂ ಬೋಧನಾ ಕಟ್ಟಡದ ಕಾಮಗಾರಿಯನ್ನು ಪರಿಶೀಲಿಸಿದರು.
ಹೊಸ ಕಟ್ಟಡದಲ್ಲಿ ನಿರ್ಮಾಣವಾಗಿರುವ ಆಪರೇಷನ್ ಥಿಯೇಟರ್, ಐಸಿಯು ವಾರ್ಡ್, ಮಕ್ಕಳ ವಾರ್ಡ್, ಎಮರ್ಜೆನ್ಸಿ ವಾರ್ಡ್, ಎಂಆರ್‌ಐ ಮತ್ತು ಸಿಟಿ ಸ್ಕ್ಯಾನಿಂಗ್ ಸೆಂಟರ್, ಔಷಧಿ ವಿತರಣಾ ಕೇಂದ್ರಕ್ಕೆ ಭೇಟಿ ನೀಡಿದ ಶಾಸಕರು, ಆಸ್ಪತ್ರೆಯ ಒಳ ಮತ್ತು ಹೊರಭಾಗದಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡಿಕೊಳ್ಳುವ ಕುರಿತು ಅಧಿಕಾರಿಗಳ ಜತೆ ಚರ್ಚೆ ನಡೆಸಿದರು.
ವಿಮ್ಸ್ ನಿರ್ದೇಶಕ ಡಾ. ಬಿ. ಗಂಗಾಧರಗೌಡ ಮತ್ತು ಮುಖ್ಯ ಆಡಳಿತಾಧಿಕಾರಿ ಸಿದ್ದರಾಮೇಶ್ವರ ಅವರು, ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಅವರಿಗೆ ಟ್ರಾಮಾಕೇರ್ ಆಸ್ಪತ್ರೆಯಲ್ಲಿ ಕಿದ್ವಾಯಿ ಸಂಸ್ಥೆಯ ಸಹಯೋಗದಲ್ಲಿ ನಿರ್ಮಾಣವಾಗುತ್ತಿರುವ 200 ಹಾಸಿಗೆಗಳ ಪ್ರತ್ಯೇಕ ಕ್ಯಾನ್ಸರ್ ವಾರ್ಡ್, ಜಿಂದಾಲ್ ಕಂಪನಿಯ ಆರ್ಥಿಕ ನೆರವಿನಲ್ಲಿ ನಿರ್ಮಾಣವಾಗುತ್ತಿರುವ 500 ಹಾಸಿಗೆಗಳ ತಾಯಿ- ಮಕ್ಕಳ ಆಸ್ಪತ್ರೆಯ ಕಾಮಗಾರಿಗಳ ಕುರಿತು ವಿವರಿಸಿದರಲ್ಲದೆ, ಈ ವಾರ್ಡ್ ಗಳು ಜನಸೇವೆಗೆ ಅರ್ಪಣೆ ಆದಲ್ಲಿ ಈಭಾಗದ ಜನರಿಗೆ ಹೆಚ್ಚಿನ ವೈದ್ಯಕೀಯ ಸೌಕರ್ಯ ಕಲ್ಪಿಸಲು ಅನುಕೂಲವಾಗಲಿದೆ ಎಂದರು.
ಇದೇ ವೇಳೆ ಪತ್ರಕರ್ತರ ಜತೆ ಮಾತನಾಡಿದ ಶಾಸಕ ವೈ.ಎಂ. ಸತೀಶ್ ಅವರು, ವಿಮ್ಸ್ ಆಸ್ಪತ್ರೆಯಲ್ಲಿ ಕೇಂದ್ರ ಸರ್ಕಾರದ ಅನುದಾನದ ಅಡಿಯಲ್ಲಿ ಸಾಕಷ್ಟು ಕಾಮಗಾರಿಗಳು ನಡೆದಿವೆ. ಅಲ್ಲದೇ, ಜಿಂದಾಲ್ ಮತ್ತು ಕಿದ್ವಾಯಿ ಆಸ್ಪತ್ರೆಯ ಸಹಕಾರಲ್ಲಿ ವಿಶೇಷ ವಾರ್ಡ್‌ಗಳ ನಿರ್ಮಾಣ ಕಾರ್ಯ ನಡೆದಿದೆ. ಕಾಮಗಾರಿಗಳನ್ನು ಪರಿಶೀಲಿಸಿ ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಲು ತಿಳಿಸಲಾಗಿದೆ ಎಂದರು. ವಿಮ್ಸ್ ಆಸ್ಪತ್ರೆಯ ಅಧೀಕ್ಷಕ ಡಾ. ಕಾಸ ಸೋಮಶೇಖರ್ ಹಾಗೂ ವೈದ್ಯರಾದ ಡಾ. ದಿವಾಕರ್ ಗಡ್ಡಿ ಮತ್ತಿತರರಿದ್ದರು.