ನೀರುಪಾಲಾಗಿದ್ದ ಇಬ್ಬರ ಮೃತದೇಹ ಪತ್ತೆ: ಇನ್ನೊಬ್ಬನಿಗೆ ಹುಡುಕಾಟ

| Published : Mar 05 2024, 01:31 AM IST

ನೀರುಪಾಲಾಗಿದ್ದ ಇಬ್ಬರ ಮೃತದೇಹ ಪತ್ತೆ: ಇನ್ನೊಬ್ಬನಿಗೆ ಹುಡುಕಾಟ
Share this Article
  • FB
  • TW
  • Linkdin
  • Email

ಸಾರಾಂಶ

ಸಮುದ್ರ ಪಾಲಾದವರ ಪೈಕಿ ಮಿಶೋ ಸಂಸ್ಥೆಯ ಡೆಲಿವರಿ ಕೆಲಸ ಮಾಡುತ್ತಿದ್ದ ಮಿಲನ್‌ (20), ಬೈಕಂಪಾಡಿಯ ಎಂಎಂಆರ್‌ ಕಂಪೆನಿಯ ಉದ್ಯೋಗಿ ನಾಗರಾಜ್‌ (24) ಎಂಬವರ ಮೃತದೇಹ ಪತ್ತೆಯಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ. ಕೈಕಂಬದ ಪಿಯು ವಿದ್ಯಾರ್ಥಿ ಲಿಖಿತ್‌ (18) ಮೃತದೇಹಕ್ಕೆ ಹುಡುಕಾಟ ಮುಂದುವರಿದಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಪಣಂಬೂರು ಬೀಚ್‌ನಲ್ಲಿ ಭಾನುವಾರ ಈಜಲು ಸಮುದ್ರಕ್ಕೆ ಇಳಿದು ನೀರುಪಾಲಾಗಿದ್ದ ಮೂವರು ಯುವಕರ ಪೈಕಿ ಇಬ್ಬರ ಮೃತದೇಹ ಸೋಮವಾರ ಪತ್ತೆಯಾಗಿದೆ.ಮಿಶೋ ಸಂಸ್ಥೆಯ ಡೆಲಿವರಿ ಕೆಲಸ ಮಾಡುತ್ತಿದ್ದ ಮಿಲನ್‌ (20), ಬೈಕಂಪಾಡಿಯ ಎಂಎಂಆರ್‌ ಕಂಪೆನಿಯ ಉದ್ಯೋಗಿ ನಾಗರಾಜ್‌ (24) ಎಂಬವರ ಮೃತದೇಹ ಪತ್ತೆಯಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ. ಕೈಕಂಬದ ಪಿಯು ವಿದ್ಯಾರ್ಥಿ ಲಿಖಿತ್‌ (18) ಮೃತದೇಹಕ್ಕೆ ಹುಡುಕಾಟ ಮುಂದುವರಿದಿದೆ.ಭಾನುವಾರ ಅಲೆಯ ತೀವ್ರತೆ ಹೆಚ್ಚಿದ್ದರಿಂದ ಪತ್ತೆ ಕಾರ್ಯ ಕಠಿಣವಾಗಿತ್ತು. ಸೋಮವಾರ ಪಣಂಬೂರು ಬೀಚ್‌ನ ಬ್ರೇಕ್‌ವಾಟರ್‌ ಬಳಿ ಮೃತದೇಹ ಪತ್ತೆಯಾಗಿದೆ. ಘಟನೆಯ ಬಳಿಕ ಪ್ರವಾಸಿಗರು ಬೀಚ್‌ ಬಳಿ ಸಮುದ್ರಕ್ಕೆ ಇಳಿಯದಂತೆ ಪೊಲೀಸ್‌ ಇಲಾಖೆ ಬ್ಯಾನರ್‌ ಅಳವಡಿಸಿದ್ದಾರೆ.ಪಣಂಬೂರು ಬೀಚ್‌ನಲ್ಲಿ ಈಜಲು ತೆರಳಿದ ಮೂವರು ಸಮುದ್ರಪಾಲುನಗರದ ಹೊರ ವಲಯದ ಪಣಂಬೂರು ಬೀಚ್‌ನಲ್ಲಿ ಭಾನುವಾರ ಸಂಜೆ ಮೂವರು ಸ್ಥಳೀಯ ಯುವಕರು ನೀರು ಪಾಲಾಗಿರುವ ದಾರುಣ ಘಟನೆ ಸಂಭವಿಸಿದೆ.

ಮಿಶೋ ಸಂಸ್ಥೆಯಲ್ಲಿ ಡೆಲಿವರಿ ಕೆಲಸ ಮಾಡುತ್ತಿದ್ದ ಮಿಲನ್ (20), ಕೈಕಂಬ ರೋಸಾ ಮಿಸ್ತಿಕಾ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಲಿಖಿತ್ (18) ಹಾಗೂ ಬೈಕಂಪಾಡಿ ಮುಂಗಾರು ಜಂಕ್ಷನ್‌ನಲ್ಲಿರುವ ಎಂಎಂಆರ್ ಕಂಪೆನಿಯಲ್ಲಿ ಮೇಲ್ವಿಚಾರಕ ನಾಗರಾಜ್ (24) ಸಮುದ್ರ ಪಾಲಾದವರು.ರಜಾ ದಿನವಾದ ಕಾರಣ ಭಾನುವಾರ ವಿಹಾರಕ್ಕಾಗಿ ಪಣಂಬೂರು ಬೀಚ್‌ಗೆ ಬಂದಿದ್ದರು. ಸಂಜೆ ವೇಳೆ ಯುವಕರು ನೀರಿನಲ್ಲಿ ಆಟವಾಡುತ್ತಿದ್ದಾಗ ಬೃಹತ್ ಗಾತ್ರದ ಅಲೆ ಬಂದು ಬಡಿದಿದೆ. ಈ ಸಂದರ್ಭ ನೀರಿನಲ್ಲಿ ಕೊಚ್ಚಿ ಹೋದ ಪರಿಣಾಮ ಮೂವರು ಸಮುದ್ರದಲ್ಲಿ ನಾಪತ್ತೆಯಾಗಿದ್ದಾರೆ.

ಸಂಜೆಯ ವೇಳೆ ಬೃಹತ್ ಅಲೆಗಳು ಬಡಿಯುತ್ತಿದ್ದುದರಿಂದ ನೀರಿನಿಂದ ಮೇಲೆ ಬರುವಂತೆ ಅಲ್ಲಿ ಕರ್ತವ್ಯದಲ್ಲಿದ್ದ ಲೈಫ್ ಗಾರ್ಡ್‌ಗಳು ಸೂಚನೆ ನೀಡಿದ್ದರು. ಆದರೂ ಅದನ್ನು ಅವರು ಲೆಕ್ಕಿಸದೆ ಮುಂದುವರಿದಿದ್ದರು. ಭಾನುವಾರವಾದ ಕಾರಣ ಬೀಚ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇದ್ದರು. ನಾಪತ್ತೆಯಾದವರನ್ನು ರಾತ್ರಿಯ ತನಕ ಹುಡುಕಾಟ ನಡೆಸಲಾಯಿತಾದರೂ ಅವರು ಪತ್ತೆಯಾಗಿಲ್ಲ. ಪಣಂಬೂರು ಪೊಲೀಸರು ಪ್ರಕರಣ ದಾಖಲಾಗಿದೆ. ವಾರದ ಹಿಂದೆ ಹಳೆಯಂಗಡಿ ಬಳಿ ನದಿಯಲ್ಲಿ ಸುರತ್ಕಲ್ ಶಾಲೆಯೊಂದರ ನಾಲ್ವರು ವಿದ್ಯಾರ್ಥಿಗಳು ನೀರು ಪಾಲಾದ ಘಟನೆ ಮಾಸುವ ಮುನ್ನವೇ ಮತ್ತೆ ಅಂಥದ್ದೇ ಘಟನೆ ನಡೆದಿರುವುದು ಜನರನ್ನು ಬೆಚ್ಚಿ ಬೀಳಿಸಿದೆ.--

ಬೈಕ್ ಡಿಕ್ಕಿ: ಪಾದಾಚಾರಿ ಮಹಿಳೆ ಸಾವು

ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಬಿಲ್ಲವ ಸಂಘದ ಬಳಿ ಬೈಕ್ ಡಿಕ್ಕಿಯಾಗಿ ಪಾದಾಚಾರಿ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ.ಹಳೆಯಂಗಡಿ ಕಲ್ಲಾಪು ಬಳಿಯ ನಿವಾಸಿ ವಾರಿಜಾ ಶೆಟ್ಟಿಗಾರ್‌ (55) ಮೃತರು. ಅವರು ಪೂನಾದಲ್ಲಿ ಪುತ್ರನೊಂದಿಗೆ ನೆಲೆಸಿದ್ದು, ಪಡುಪಣಂಬೂರು ಕಲ್ಲಾಪು ಜಾತ್ರೆಗೆ ಬಂದಿದ್ದರು. ತುರ್ತು ಕೆಲಸ ನಿಮಿತ್ತ ಮನೆಯಿಂದ ಹಳೆಯಂಗಡಿ ಪೇಟೆಗೆ ತೆರಳುತ್ತಿದ್ದ ವೇಳೆ ಹೆದ್ದಾರಿ ರಸ್ತೆ ದಾಟುತ್ತಿದ್ದಾಗ ಉಡುಪಿ ಕಡೆ ಮಂಗಳೂರು ಕಡೆಗೆ ಹೋಗುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದೆ. ಅಪಘಾತದಿಂದ ಮಹಿಳೆ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರು ಪತಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಬೈಕ್ ಸವಾರನ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.