ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಫೋನ್‌ಇನ್ ಕಾರ್ಯಕ್ರಮ

| Published : Mar 05 2024, 01:31 AM IST

ಸಾರಾಂಶ

ಪ್ರಶ್ನೆ ಕೇಳಿದ ಯಾವ ವಿದ್ಯಾರ್ಥಿಗಳು ಪರೀಕ್ಷಾ ಸಿದ್ದತೆ, ಪರೀಕ್ಷಾ ವಿಧಾನ, ಪ್ರಶ್ನೆಪತ್ರಿಕೆ ಮಾದರಿ, ಇದೇ ಮೊದಲ ಬಾರಿಗೆ ಇಲಾಖೆ ಮೂರು ಪರೀಕ್ಷೆಗಳನ್ನು ನಡೆಸುತ್ತಿದ್ದು ನಾವು ಎಲ್ಲಾ ಪರೀಕ್ಷೆ ತೆಗೆದುಕೊಳ್ಳಬಹುದೇ ಎಂಬುದರ ಜತೆಗೆ ವಿಷಯವಾರು ಗೊಂದಲ ಪರಿಹಾರಕ್ಕಾಗಿ ಪ್ರಶ್ನೆ ಕೇಳಿದರು

ಕನ್ನಡಪ್ರಭ ವಾರ್ತೆ ಕೋಲಾರ

ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸುತ್ತಿರುವ ಮಕ್ಕಳಲ್ಲಿನ ಗೊಂದಲ ನಿವಾರಣೆಗೆ ಇಲಾಖೆ ನಡೆಸಿದ ಫೋನ್ ಇನ್ ಕಾರ್ಯಕ್ರಮದಲ್ಲಿ ೭೯೦ ಫೋನ್ ಕರೆಗಳು ಬಂದಿದ್ದು, ೧೨೯೮ ಪ್ರಶ್ನೆಗಳಿಗೆ ಸಂಪನ್ಮೂಲ ವ್ಯಕ್ತಿಗಳು ಉತ್ತರ ನೀಡಿದ್ದಾರೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ ತಿಳಿಸಿದರು.

ನಗರದ ಡಿಡಿಪಿಐ ಕಚೇರಿ ಸಭಾಂಗಣದಲ್ಲಿ ಸೋಮವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿರುವ ಮಕ್ಕಳಲ್ಲಿನ ಗೊಂದಲ ನಿವಾರಣೆಗಾಗಿ ನಡೆಸಲಾದ ಫೋನ್ ಇನ್ ಕಾರ್ಯಕ್ರಮದಲ್ಲಿ ಕೆಲವು ಮಕ್ಕಳ ಪ್ರಶ್ನೆಗಳಿಗೆ ಅವರೇ ಸ್ವತಃ ಉತ್ತರ ನೀಡಿ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಅತಿ ಹೆಚ್ಚು ಫೋನ್ ಇನ್ ಕಾರ್ಯಕ್ರಮ ನಡೆಸಿದ್ದನ್ನು ಸ್ಮರಿಸಿದರು.

ಪ್ರಶ್ನೆ ಕೇಳಿದ ಯಾವ ವಿದ್ಯಾರ್ಥಿಗಳು ಪರೀಕ್ಷಾ ಸಿದ್ದತೆ, ಪರೀಕ್ಷಾ ವಿಧಾನ, ಪ್ರಶ್ನೆಪತ್ರಿಕೆ ಮಾದರಿ, ಇದೇ ಮೊದಲ ಬಾರಿಗೆ ಇಲಾಖೆ ಮೂರು ಪರೀಕ್ಷೆಗಳನ್ನು ನಡೆಸುತ್ತಿದ್ದು ನಾವು ಎಲ್ಲಾ ಪರೀಕ್ಷೆ ತೆಗೆದುಕೊಳ್ಳಬಹುದೇ ಎಂಬುದರ ಜತೆಗೆ ವಿಷಯವಾರು ಗೊಂದಲ ಪರಿಹಾರಕ್ಕಾಗಿ ಪ್ರಶ್ನೆ ಕೇಳಿದರು ಎಂದು ತಿಳಿಸಿದರು.

ಶೇ.೧೦೦ ಸಾಧನೆಗೆ ಶಿಕ್ಷಕರು ಹೇಳುವ ಪಾಠದ ಜತೆಗೆ ಪಠ್ಯಪುಸ್ತಕ ಓದುವ ಅಭ್ಯಾಸ ಮಾಡಿ ಅದರಿಂದ ಅನ್ವಯಿಕ ಪ್ರಶ್ನೆಗಳಿಗೆ ಸುಲಭವಾಗಿ ಉತ್ತರಿಸಬಹುದಾಗಿದ್ದು, ಆಗ ಶೇ.೧೦೦ ಸಾಧನೆ ಮಾಡಬಹುದು ಎಂದು ತಿಳಿಸಿದರು.ವಿಜ್ಞಾನ ವಿಷಯದ್ದೇ ಹೆಚ್ಚು ಪ್ರಶ್ನೆಪರೀಕ್ಷಾ ನೋಡಲ್ ಅಧಿಕಾರಿ ಕೃಷ್ಣಪ್ಪ ಮಾತನಾಡಿ, ಫೋನ್ ಇನ್ ಕಾರ್ಯಕ್ರಮದಲ್ಲಿ ಮಕ್ಕಳು ಕೇಳಿದ ಪ್ರಶ್ನೆಗಳ ಕುರಿತು ಮಾಹಿತಿ ನೀಡಿ, ಪರೀಕ್ಷಾ ವಿಧಾನಕ್ಕೆ ಸಂಬಂಧಿಸಿದಂತೆ ೫೦ಕ್ಕೂ ಹೆಚ್ಚು ಪ್ರಶ್ನೆಗಳು ಮಕ್ಕಳಿಂದ ಬಂತು ಆದರೆ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ೨೩೦ ಪ್ರಶ್ನೆಗಳನ್ನು ಮಕ್ಕಳು ಕೇಳಿದ್ದು ವಿಶೇಷವಾಗಿದೆ ಎಂದರು.

ಫೋನ್ ಇನ್ ಕಾರ್ಯಕ್ರಮದಲ್ಲಿ ಶಿಕ್ಷಣಾಧಿಕಾರಿಗಳಾದ ಸಗೀರಾ ಅಂಜುಂ, ಭಾಗ್ಯವತಮ್ಮ, ವಿಷಯ ಪರಿವೀಕ್ಷಕರಾದ ಗಾಯತ್ರಿ, ಶಶಿವಧನ, ಸಿರಾಜುದ್ದೀನ್, ಸಂಪನ್ಮೂಲ ಶಿಕ್ಷಕರಾದ ಬಿ.ಕೆ.ನಾಗರಾಜ್, ರಾಜಣ್ಣ, ಬಿ.ಎ.ಕವಿತಾ, ರಮಾ, ಕೃಷ್ಣಮೂರ್ತಿ, ಪ್ರಭಾ, ಬಸವರಾಜ್, ಶ್ರೀನಿವಾಸಗೌಡ ಪರಿಹರಿಸಿದರು.