ಕನ್ನಡಪ್ರಭ ವಾರ್ತೆ ಬಾಗಲಕೋಟೆಜಿಲ್ಲೆಯ ಸಕ್ಕರೆ ಕಾರ್ಖಾನೆಗಳಿಗೆ ರೈತರು ಪೂರೈಸಿದ ಕಬ್ಬಿನ ಬಾಕಿ ಪಾವತಿಗೆ ಗುಡುವು ನೀಡಿ, ತುರ್ತಾಗಿ ಪಾವತಿಗೆ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸಂಗಪ್ಪ ಅವರು ಸಕ್ಕರೆ ಕಾರ್ಖಾನೆ ಮಾಲಿಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಿಗೆ ರೈತರು ಪೂರೈಸಿದ ಕಬ್ಬಿನ ಬಾಕಿ ಪಾವತಿಗೆ ಗುಡುವು ನೀಡಿ, ತುರ್ತಾಗಿ ಪಾವತಿಗೆ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸಂಗಪ್ಪ ಅವರು ಸಕ್ಕರೆ ಕಾರ್ಖಾನೆ ಮಾಲಿಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ಜಿಲ್ಲಾ ಪಂಚಾಯತ ನೂತನ ಸಭಾಭವನದಲ್ಲಿ ಶನಿವಾರ ಸಕ್ಕರೆಕಾರ್ಖಾನೆ ಹಾಗೂ ರೈತರೊಂದಿಗೆ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ ಸಾಲಿಗೆ ಸಂಬಂಧಿಸಿದಂತೆ ಜಮಖಂಡಿ ಶುಗರ್ಸನವರು ₹ 81 ಲಕ್ಷ ಹಾಗೂ ಕಾರ್ಖಾನೆಯಿಂದ ನೀಡಬೇಕಾದ ಪ್ರತಿ ಮೆಟ್ರಿಕ್ ಟನ್ ಗೆ ನೀಡಬೇಕಾದ ಬಾಕಿ ₹ 4.34 ಕೋಟಿ .ಗಳ ಬಾಕಿ ಇರುವ ಮೊತ್ತವನ್ನು ಸಂಪೂರ್ಣವಾಗಿ ಪಾವತಿಸುವ ಕುರಿತು ಚರ್ಚಿಸಿದರು. ಇದಕ್ಕೆ ಪ್ರತಿಯಾಗಿ ಕಾರ್ಖಾನೆಯ ಪ್ರತಿನಿಧಿಗಳು ಸೆ.15ರೊಳಗಾಗಿ ಸಂಪೂರ್ಣವಾಗಿ ಬಾಕಿ ಪಾವತಿಸುವುದಾಗಿ ತಿಳಿಸಿದಾಗ ಇದಕ್ಕೆ ರೈತರು ಸಮ್ಮತಿ ನೀಡಿದರು.ಕಬ್ಬು ಬೆಳೆಗಾರರು ಮೊದಲ ಕಂತು ಪ್ರತಿ ಟನ್ ಗೆ ₹ 3,300 ಆದರೆ, 2ನೇ ಕಂತಾಗಿ ₹ 300 ಪಾವತಿಸಬೇಕು ಎಂದು ಬೇಡಿಕೆ ಸಲ್ಲಿಸಿದರು. ಇದಕ್ಕೆ ಕಾರ್ಖಾನೆಗಳ ಪ್ರತಿನಿಧಿಗಳು ಮೊದಲ ಕಂತಿನಲ್ಲಿ ಪ್ರತಿ ಮೆಟ್ರಿಕ್ ಟನ್ ಗೆ ₹ 3,200 ಪಾವತಿಸಲಾಗಿದ್ದು, 2ನೇ ಕಂತಿನಲ್ಲಿ ಸರ್ಕಾರದಿಂದ ₹ 50 ಹಾಗೂ ಕಾರ್ಖಾನೆಯಿಂದ ₹ 50 ಸೇರಿ ಒಟ್ಟು ₹ 100 ಗಳ ಪಾವತಿಸಲಾಗಿದೆ ಎಂದು ತಿಳಿಸಿದರು. ರೈತರು ಒತ್ತಾಯಿಸಿರುವ ₹ 300 2ನೇ ಕಂತಿನ ಬೇಡಿಕೆಯನ್ನು ಆಡಳಿತ ಮಂಡಳಿಯ ಗಮನಕ್ಕೆ ತರಲಾಗುವುದೆಂದು ಕಾರ್ಖಾನೆಗಳ ಪ್ರತಿನಿಧಿಗಳು ತಿಳಿಸಿದರು.
ರೈತ ಮುಖಂಡ ಸುಭಾಷ ಶಿರಬೂರ ಮಾತನಾಡಿ, ಕಬ್ಬು ಬೆಳೆಯಲು ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನಾ ವೆಚ್ಚವಾಗುತ್ತಿದೆ. ಮಳೆ ಕೊರತೆಯಿಂದ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಬೆಳೆಗಳು ಒಣಗುತ್ತಿದ್ದು, ಪರಿಸ್ಥಿತಿ ಗಂಭೀರವಾಗಿದೆ. ಈಗಾಗಲೇ ಬರಪೀಡಿತ ತಾಲೂಕುಗಳನ್ನು ಘೋಷಿಸಿರುವುದರ ಜೊತೆಗೆ ಉಳಿದ ತಾಲೂಕುಗಳನ್ನೂ ಬರಪೀಡಿತ ಎಂದು ಘೋಷಿಸಬೇಕು ಎಂದು ಒತ್ತಾಯಿಸಿದರು. ಇದೇ ವೇಳೆ ರೈತರಿಗೆ ಬೆಳೆ ವಿಮೆ ಯೋಜನೆಯ ಕುರಿತು ಸಮರ್ಪಕ ಮಾಹಿತಿ ಹಾಗೂ ಜಾಗೃತಿ ಮೂಡಿಸುವ ಕಾರ್ಯವನ್ನು ಸಂಬಂಧಿಸಿದ ಇಲಾಖೆಗಳು ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು.ಸಭೆಯಲ್ಲಿ ಉಪಸ್ಥಿತರಿದ್ದ ಬೆಳಗಾವಿಯ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ನಿರ್ದೇಶಕರಾದ ರಾಜಗೋಪಾಲ ಹಾಗೂ ಸಿ.ಬಿ.ಪಾಟೀಲ ಅವರು ಕೇಂದ್ರ ಸರ್ಕಾರ ನಿಗದಿಪಡಿಸುತ್ತಿರುವ ಎಫ್ ಆರ್‌ಪಿ ದರವನ್ನು ಯಾವ ಮಾನದಂಡಗಳ ಆಧಾರದ ಮೇಲೆ ಲೆಕ್ಕಾಚಾರ ಮಾಡಲಾಗುತ್ತದೆ ಎಂಬುದರ ಕುರಿತು ಸಭೆಗೆ ಮಾಹಿತಿ ನೀಡಿದರು.ಸಭೆಯಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಜಾನನ ಬಾಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಜಂಟಿ ಕೃಷಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.ಅದೇ ರೀತಿ ಜಿಲ್ಲೆಯ ನಿರಾಣಿ ಶುಗರ್ಸ್, ಬಾದಾಮಿ ಶುಗರ್ಸ್, ಕೇದಾರಾಥ ಸುಗರ್ಸ್, ಸಾಯಿಪ್ರಿಯಾ ಶುಗರ್ಸ್, ಎಂ.ಆರ್.ಎನ್ ಕೇನ್ ಫಾವರ್ ಸೇರಿದಂತೆ ಒಟ್ಟು ಐದು ಸಕ್ಕರೆ ಕಾರ್ಖಾನೆಗಳಿಂದ ಕಬ್ಬು ಬೆಳೆಗಾರರಿಗೆ ಪಾವತಿಸಬೇಕಿರುವ ಅಂದಾಜು ₹ 28 ಕೋಟಿ ಗಳ ಬಾಕಿ ಮೊತ್ತವನ್ನು ಸೆ.15 ರಿಂದ 20 ರೊಳಗಾಗಿ ಪಾವತಿಸುವುದಾಗಿ ಕಾರ್ಖಾನೆಗಳ ಪ್ರತಿನಿಧಿಗಳು ಒಪ್ಪಿಗೆ ಸಹ ನೀಡಿದವು.