ಸಾರಾಂಶ
ಕನ್ನಡಪ್ರಭ ವಾರ್ತೆ ಭಾಲ್ಕಿ
ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಅಂಗಡಿ ಮುಗ್ಗಟ್ಟು ಮತ್ತು ಸರ್ಕಾರಿ ಕಚೇರಿಗಳಲ್ಲಿ ನಾಮಫಲಕಗಳಿಗೆ ಶೇ.60 ಕನ್ನಡ ಸ್ಥಳ ಕಡ್ಡಾಯಗೊಳಿಸಲು ಫೆ.29 ಕೊನೆಯ ದಿನವಾಗಿದೆ. ಎಲ್ಲರೂ ತಕ್ಷಣವೇ ತಮ್ಮ ನಾಮ ಫಲಕಗಳಲ್ಲಿ ಪ್ರಥಮಾದ್ಯತೆ ನೀಡಬೇಕೆಂದು ತಹಸೀಲ್ದಾರ್ ಶ್ರೀಯಾಂಕಾ ಧನಾಶ್ರಿ ಹೇಳಿದರು.ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಸೋಮವಾರ ವಿವಿಧ ಇಲಾಖೆ ಅಧಿಕಾರಿಗಳ ಮತ್ತು ಅಂಗಡಿ ಮಾಲೀಕರ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಈಗಾಗಲೇ ಎಲ್ಲಾ ಅಂಗಡಿ ಮಾಲೀಕರಿಗೆ ಸೂಚನೆ ನೀಡಲಾಗಿದೆ. ತಮ್ಮ ಅಂಗಡಿಗಳಲ್ಲಿ ಕನ್ನಡ ನಾಮಫಲಕಕ್ಕೆ ಪ್ರಥಮಾದ್ಯತೆ ನೀಡಬೇಕು. ಗಡಿ ತಾಲೂಕು ಭಾಲ್ಕಿಯಲ್ಲಿ ಎಲ್ಲಾ ಭಾಷೆಗಳ ನಾಮಫಲಕಗಳಿವೆ. ಅವುಗಳಲ್ಲಿ ಕನ್ನಡ ಭಾಷೆಗೆ ಶೇ.60ರಷ್ಟು ಸ್ಥಳಾವಕಾಶ ಮಾಡಿಕೊಟ್ಟು, ಉಳಿದ ಶೇ.40 ಸ್ಥಳದಲ್ಲಿ ಇತರೆ ಭಾಷೆಯಲ್ಲಿ ಬರೆಯಬಹುದು ಎಂದಿದ್ದಾರೆ.
ಈ ರೀತಿಯ ನಾಮಫಲಕ ಅಳವಡಿಸಲು ಇದೇ ಫೆ.29 ಕೊನೆಯ ದಿನವಾಗಿದೆ. ಯಾವುದೇ ಕಾನೂನು ಕ್ರಮಕ್ಕೆ ಅವಕಾಶ ಕೊಡದೆ, ತಕ್ಷಣವೇ ತಮ್ಮ ಅಂಗಡಿಗಳ ನಾಮಫಲಕ ಬದಲಾಯಿಸಿಕೊಳ್ಳಿ ಎಂದು ಸಲಹೆ ನೀಡಿದರು. ಯಾವುದೇ ತರಹದ ಘರ್ಷಣೆಗೆ ಅವಕಾಶ ಕೊಡದೇ, ಕನ್ನಡಕ್ಕೆ ಪ್ರಥಮಾದ್ಯತೆ ನೀಡಬೇಕು ಎಂದು ಹೇಳಿದರು.ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಕಾರಬಾರಿ ಮಾತನಾಡಿ, ಈಗಾಗಲೇ ಪಟ್ಟಣದ ಎಲ್ಲಾ ಬಡಾವಣೆಗಳಲ್ಲಿಯೂ ಇರುವ ಅಂಗಡಿ ಮಾಲೀಕರಿಗೆ ಸೂಚನೆ ನೀಡಲಾಗಿದೆ. ಇದಕ್ಕೂ ಮೀರಿ ಅನ್ಯ ಬಾಷೆಗೆ ಆಧ್ಯತೆ ನೀಡಿದರೆ ಸರ್ಕಾರ ಆದೇಶದ ಮೇರೆಗೆ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಕರವೇ ತಾಲೂಕು ಅಧ್ಯಕ್ಷ ಗಣೇಶ ಪಾಟೀಲ್ ಮಾತನಾಡಿ, ಬಹುದಿನದ ಹೋರಾಟಗಳ ಫಲವಾಗಿ ಇಂದು ಸದನದಲ್ಲಿ ಕನ್ನಡಭಾಷೆಗೆ ಪ್ರಥಮಾದ್ಯತೆ ನೀಡಲು ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರಿ ಆದೇಶಕ್ಕೆ ಸಾರ್ವಜನಿಕರು ಗೌರವಿಸಬೇಕು. ತಾಲೂಕಿನ ಗ್ರಾಮೀಣ ಭಾಗ ಮತ್ತು ಪಟ್ಟಣ ಪ್ರದೇಶದಲ್ಲಿ ಅಂಗಡಿ ಮುಗಟ್ಟುಗಳ, ಆಸ್ಪತ್ರೆ, ಹೋಟೆಲ್, ಶಾಲಾ ಕಾಲೇಜುಗಳ ಮೇಲೆ ಕಡ್ಡಾಯವಾಗಿ ಶೇ.60ರಷ್ಟು ಅಳತೆಯಲ್ಲಿ ಕನ್ನಡ ನಾಮ ಫಲಕ ಕಡ್ಡಾಯವಾಗಿರಬೇಕು ಎಂದು ಹೇಳಿದರು.ಖಾಸಗಿ ಶಾಲೆಗಳು ಮತ್ತು ಅಂಗಡಿ ಮುಂಗಟ್ಟುಗಳಲ್ಲಿ ಇದುವರೆಗೆ ಅನ್ಯ ಭಾಷೆಯ ನಾಮಫಲಕಗಳೇ ಕಾಣುತ್ತಿವೆ. ಫೆ.29ರ ನಂತರ ಹೀಗೆ ಮುಂದುವರೆದರೆ ಬೆಂಗಳೂರು ಮಾದರಿಯಲ್ಲಿ ಭಾಲ್ಕಿಯಲ್ಲಿಯೂ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯಕಾಂತ ಬಿರಾದಾರ ಮಾತನಾಡಿ, ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಕನ್ನಡ ಭಾಷೆಯ ನಾಮಫಲಕಕ್ಕೆ ಪ್ರಥಮಾದ್ಯತೆ ನೀಡಲು ಆದೇಶಿಸಲಾಗಿದೆ. ತಪ್ಪಿದಲ್ಲಿ ಸೂಕ್ತ ಕ್ರಮ ಕೈಗೊಂಡು ಕಾನೂನು ರೀತಿ ದಂಡ ವಿಧಿಸಲಾಗುವುದು ಎಂದು ಹೇಳಿದರು.ಪಿಎಸ್‌ಐ ಯಶೋಧಾ ಕಟಕಿ ಕರಾಟೆ, ಕ್ಷೇತ್ರ ಸಮನ್ವಯಾಧಿಕಾರಿ ಮನೋಹರ ಹೊಳಕರ, ಪುರಸಭೆ ಸದಸ್ಯರಾದ ಪಾಂಡುರಂಗ ಕನಸೆ, ಓಂಕಾರ ಮೋರೆ, ಎಪಿಎಂಸಿ ಅಧಿಕಾರಿಗಳಾದ ಬೀರಲಿಂಗ ಹಿರಿಯರಕರ್, ಸೂಭಾಷ, ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಜಯರಾಜ ದಾಬಶೆಟ್ಟಿ ಉಪಸ್ಥಿತರಿದ್ದರು.