ಸಾರಾಂಶ
100 ಬೆಡ್ ಗಳ ಡಯಾಲಿಸಿಸ್‌ವಿಭಾಗ ನಿರ್ಮಾಣಕ್ಕೂ ಬೇಡಿಕೆಯಿಟ್ಟಿದ್ದೇವೆ
ಕನ್ನಡಪ್ರಭ ವಾರ್ತೆ ಮೈಸೂರು
ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೊರ ರೋಗಿ ವಿಭಾಗ ನಿರ್ಮಾಣದ ಬೇಡಿಕೆಗೆ ಸರ್ಕಾರ ಸ್ಪಂದಿಸಿದೆ ಎಂದು ಮೈಸೂರು ವೈದ್ಯಕೀಯ ಕಾಲೇಜಿನ ಡೀನ್ ಮತ್ತು ನಿರ್ದೇಶಕಿ ಡಾ.ಕೆ.ಆರ್. ದಾಕ್ಷಾಯಿಣಿ ತಿಳಿಸಿದರು.ಮೈಸೂರು ವೈದ್ಯಕೀಯ ಕಾಲೇಜಿನ ಮೂತ್ರಪಿಂಡ (ನೆಫ್ರಾಲಜಿ) ವಿಭಾಗವು ಶುಕ್ರವಾರ ಆಯೋಜಿಸಿದ್ದ ಕ್ರಿಟಿಕಲ್‌ಕೇರ್ ನೆಫ್ರಾಲಜಿ ಕುರಿತು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇದರೊಂದಿಗೆ 100 ಬೆಡ್ ಗಳ ಡಯಾಲಿಸಿಸ್‌ವಿಭಾಗ ನಿರ್ಮಾಣಕ್ಕೂ ಬೇಡಿಕೆಯಿಟ್ಟಿದ್ದೇವೆ ಎಂದರು.
ಕಾಲೇಜಿನ ಶತಮಾನೋತ್ಸವದ ಹಿನ್ನೆಲೆಯಲ್ಲಿ ವಿವಿಧ ವಿಭಾಗಗಳು ನವೀಕರಣ ಕಾರ್ಯಕ್ರಮ ನಡೆಯುತ್ತಿದೆ. ಇದರಿಂದ ಕಾಲೇಜಿನ ಅನೇಕ ಸಾಧಕ ಹಿರಿಯ ವಿದ್ಯಾರ್ಥಿಗಳ ಬಗ್ಗೆ ಪರಿಚಯವಾಗುತ್ತಿದೆ. ಶತಮಾನದಲ್ಲಿ ಕಾಲೇಜು ಸಮಾಜಕ್ಕೆ ನೀಡಿದ ಕೊಡುಗೆ ಅಪಾರ. ಸೆಪ್ಟೆಂಬರ್27 ರಿಂದ 29 ರವರೆಗೆ ಶತಮಾನೋತ್ಸವ ಕಾರ್ಯಕ್ರಮ ನಡೆಯಲಿದೆ. ಸೆ.28 ರಂದು ಮುಖ್ಯ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಅವರು ಹೇಳಿದರು.ಹಿರಿಯ ವೈದ್ಯ ಡಾ. ಜಾವೇದ್‌ನಯೀಂ ಮಾತನಾಡಿ, ಮೈಸೂರು ವೈದ್ಯಕೀಯ ಕಾಲೇಜು ಇರುವ ಜಾಗದಲ್ಲಿ ಹಿಂದೆ ವಸ್ತುಪ್ರದರ್ಶನ ನಡೆಯುತ್ತಿತ್ತು. ಈಗ ವಿದ್ಯಾ ದೇಗುಲವಾಗಿ ಬದಲಾಗಿರುವುದು ವಿಶೇಷ. ನೆಫ್ರಾಲಜಿ ವಿಭಾಗದಲ್ಲೂ ಗಮನಾರ್ಹ ಬದಲಾವಣೆಗಳಾಗಿವೆ ಎಂದರು.
ನೆಫ್ರಾಲಜಿ ವಿಭಾಗ ಮುಖ್ಯಸ್ಥೆ ಡಾ. ಹಿಮಾಮನಿ ಮಾತನಾಡಿ, 2023ರಲ್ಲಿ 9 ಸಾವಿರಕ್ಕಿಂತ ಅಧಿಕ ಜನರಿಗೆ ಡಯಾಲಿಸಿಸ್‌ಸೇವೆ ಒದಗಿಸಿದ್ದೇವೆ. ಮುಂದೆಯೂ ವಿಭಾಗದ ಮೂಲಕ ವಿವಿಧ ಸೇವೆಗಳನ್ನು ಆರಂಭಿಸಲು ಉತ್ಸುಕರಾಗಿದ್ದೇವೆ ಎಂದು ಹೇಳಿದರು.ಚೆಲುವಾಂಬ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರಾಜೇಂದ್ರಕುಮಾರ್, ಪಿಕೆಟಿಬಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಸಿ. ಪ್ರಶಾಂತ್, ಕೆ.ಆರ್. ಆಸ್ಪತ್ರೆಯ ಆರ್‌ಎಂಒ ಡಾ. ನಯಾಜ್‌ಪಾಷಾ, ಸಹಾಯಕ ಪ್ರಾಧ್ಯಾಪಕ ಡಾ.ಎಂ.ಆರ್. ನಿರಂಜನ, ಡಾ. ಭರತ್ ಮೊದಲಾದವರು ಇದ್ದರು.