ಹಕ್ಕಿಜ್ವರ ಕಾರಣದಿಂದಲೇ 15 ಸಾವಿರ ಕೋಳಿಗಳ ಸಾವು ; ಪ್ರಯೋಗಾಲಯದ ವರದಿಯಲ್ಲಿ ದೃಢ

| N/A | Published : Mar 06 2025, 12:34 AM IST / Updated: Mar 06 2025, 12:08 PM IST

ಹಕ್ಕಿಜ್ವರ ಕಾರಣದಿಂದಲೇ 15 ಸಾವಿರ ಕೋಳಿಗಳ ಸಾವು ; ಪ್ರಯೋಗಾಲಯದ ವರದಿಯಲ್ಲಿ ದೃಢ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಕಪ್ಪಗಲ್ಲು ಗ್ರಾಮದಲ್ಲಿ ಮೃತಪಟ್ಟಿರುವ 15 ಸಾವಿರ ಕೋಳಿಗಳ ಸಾವಿಗೆ ಶೀತಜ್ವರವೇ (ಹಕ್ಕಿಜ್ವರ) ಕಾರಣ ಎಂದು ಪ್ರಯೋಗಾಲಯದ ವರದಿಯಲ್ಲಿ ದೃಢಪಟ್ಟಿದೆ.

 ಬಳ್ಳಾರಿ : ತಾಲೂಕಿನ ಕಪ್ಪಗಲ್ಲು ಗ್ರಾಮದಲ್ಲಿ ಮೃತಪಟ್ಟಿರುವ 15 ಸಾವಿರ ಕೋಳಿಗಳ ಸಾವಿಗೆ ಶೀತಜ್ವರವೇ (ಹಕ್ಕಿಜ್ವರ) ಕಾರಣ ಎಂದು ಪ್ರಯೋಗಾಲಯದ ವರದಿಯಲ್ಲಿ ದೃಢಪಟ್ಟಿದೆ.

ಸಂಡೂರು ತಾಲೂಕಿನ ಕುರೇಕುಪ್ಪ ಗ್ರಾಮ ಹೊರ ವಲಯದಲ್ಲಿ 2 ಸಾವಿರ ಕೋಳಿಗಳು ಶೀತಜ್ವರದಿಂದ ಮೃತಪಟ್ಟಿರುವ ಬೆನ್ನಲ್ಲೇ ಕಪ್ಪಗಲ್ಲು ಗ್ರಾಮದಲ್ಲಿ ಸಾವಿರಾರು ಕೋಳಿಗಳು ಸಾವಿಗೀಡಾಗಿದ್ದವು. ಕೋಳಿ ಸಾವು ಶೀತಜ್ವರದಿಂದಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಭೂಪಾಲ್‌ ನ ಪ್ರಾಯೋಗಾಲಯಕ್ಕೆ ಶಾಂಪಲ್ ಕಳಿಸಿಕೊಡಲಾಗಿತ್ತು. ಮಂಗಳವಾರ ರಾತ್ರಿ ಪ್ರಯೋಗಾಲಯದಿಂದ ವರದಿ ಬಂದಿದ್ದು, ಶೀತಜ್ವರದಿಂದ ಕೋಳಿಗಳು ಸಾವಿಗೀಡಾಗಿವೆ ಎಂದು ಆ ವರದಿ ದೃಢಪಡಿಸಿದೆ ಎಂದು ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಡಾ. ಹನುಮಂತ ನಾಯ್ಕ ಕಾರಬಾರಿ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ಶೀತಜ್ವರದಿಂದ ಕೋಳಿಗಳು ಮೃತಪಟ್ಟಿರುವ ಹಿನ್ನೆಲೆ ಕಪ್ಪಗಲ್ಲು ಗ್ರಾಮದ ಸುತ್ತ 10 ಕಿಮೀ ವ್ಯಾಪ್ತಿಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಕೋಳಿ ಫಾರಂನಲ್ಲಿದ್ದ 15 ಸಾವಿರ ಕೋಳಿಗಳನ್ನು ನಾಶ ಮಾಡಲಾಗಿದೆ.

6 ತಪಾಸಣೆ ಕೇಂದ್ರ ಸ್ಥಾಪನೆ:

ಜಿಲ್ಲೆಯಲ್ಲಿ ಹಕ್ಕಿಜ್ವರ ಕಂಡುಬಂದ ಹಿನ್ನೆಲೆ ಅಂತರ್‌ರಾಜ್ಯದಿಂದ ಬರುವ ಕೋಳಿಗಳ ಆರೋಗ್ಯ ತಪಾಸಣೆಗಾಗಿ ಬಳ್ಳಾರಿ ಹಾಗೂ ಸಿರುಗುಪ್ಪ ತಾಲೂಕು ಭಾಗದ 6 ಸ್ಥಳಗಳಲ್ಲಿ ಅಂತರ್‌ರಾಜ್ಯ ತಪಾಸಣಾ ಕೇಂದ್ರ ಸ್ಥಾಪಿಸಲಾಗಿದೆ.

ಬಳ್ಳಾರಿ ತಾಲೂಕಿನ ಎತ್ತಿನ ಬೂದಿಹಾಳ್ ಕ್ರಾಸ್, ಸಿಂಧುವಾಳ ಕ್ರಾಸ್ ಮತ್ತು ಪರಮದೇವನಹಳ್ಳಿ, ಸಿರುಗುಪ್ಪ ತಾಲೂಕಿನ ಮಾಟಸೂಗೂರು, ವಟ್ಟು ಮುರುವಾಣಿ ಮತ್ತು ಇಟಗಿನಹಾಳ್ ಬಳಿ ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಹೊರ ರಾಜ್ಯಗಳಿಂದ ಕೋಳಿಗಳು ಜಿಲ್ಲೆಗೆ ಪ್ರವೇಶವಾಗದಂತೆ ಕಟ್ಚೆಚ್ಚರ ವಹಿಸಲಾಗಿದೆ.

ಸ್ಥಳಕ್ಕೆ ಜಿಪಂ ಸಿಇಒ ಭೇಟಿ:

ತಾಲೂಕಿನ ಕಪ್ಪಗಲ್ಲು ಗ್ರಾಮದಲ್ಲಿ ಇತ್ತೀಚೆಗೆ ಕೋಳಿ ಸಾಕಾಣಿಕೆ ಮಾಡುವ ಕೇಂದ್ರದಲ್ಲಿ ಅಸಹಜವಾಗಿ ಕೋಳಿ ಸಾವನ್ನಪ್ಪಿದ್ದ ಹಿನ್ನೆಲೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್ ಬುಧವಾರ ಕೋಳಿ ಸಾಕಾಣಿಕೆ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಾಕಾಣಿಕೆ ಕೇಂದ್ರ (ಕೋಳಿ ಫಾರಂ)ದ ಸುತ್ತಲೂ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದು ಮಾಲೀಕರಿಗೆ ನಿರ್ದೇಶನ ನೀಡಿದರು.

ಕೋಳಿ ಶೀತ (ಹಕ್ಕಿಜ್ವರ) ಜ್ವರವು ಸಾಂಕ್ರಾಮಿಕ ರೋಗವಲ್ಲ. ಜನರು ಯಾವುದೇ ರೀತಿಯಲ್ಲಿ ಆತಂಕ ಪಡುವ ಅಗತ್ಯವಿಲ್ಲ. ಸಾರ್ವಜನಿಕರು ಕೋಳಿ ಮಾಂಸ ಮತ್ತು ಮೊಟ್ಟೆಯನ್ನು ಚೆನ್ನಾಗಿ ಬೇಯಿಸಿ ಸೇವಿಸಬೇಕು ಎಂದು ಮನವಿ ಮಾಡಿದರು.

ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ. ಹನುಮಂತ ನಾಯ್ಕ ಕಾರಬಾರಿ, ಬಳ್ಳಾರಿ ತಾಲೂಕು ಪಂಚಾಯಿತಿಯ ಇಒ ಮಡಗಿನ ಬಸಪ್ಪ, ಕಪ್ಪಗಲ್ಲು ಗ್ರಾಮದ ಪಿಡಿಒ ಮಂಜುಳಾ ಹಾಗೂ ಸಾರ್ವಜನಿಕರಿದ್ದರು.