ಸಾರಾಂಶ
ಕೆರೆಯಲ್ಲಿ ಮೀನುಗಳ ಸಾವಿಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಕೆರೆಗೆ ವಿಷ ಹಾಕಿರುವ ಶಂಕೆ ವ್ಯಕ್ತವಾಗಿದೆ. ಎಚ್‌ಎನ್ ವ್ಯಾಲಿ ನೀರು ಚಿಕ್ಕಬಳ್ಳಾಪುರದ ಬತ್ತಿದ ಕೆರೆಗಳಿಗೆ ಹರಿಸಿ ಅಂತರ್ಜಲ ಹೆಚ್ಚಿಸಲಾಗುತ್ತಿದೆ. ಆದರೆ ನೀರು ಕಲುಷಿತಗೊಂಡಿರುವ ಕಾರಣ ಮೀನುಗಳ ಸತ್ತಿರುವ ಶಂಕೆ ವ್ಯಕ್ತ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಗರ ಹೊರವಲಯದ ಅಮಾನಿ ಗೋಪಾಲಕೃಷ್ಣ ಕೆರೆಯಲ್ಲಿ ನೀರು ಕಲುಷಿತಗೊಂಡ ಹಿನ್ನೆಲೆ ಸಾವಿರಾರು ಮೀನುಗಳು ಸತ್ತಿವೆ.ಕೆರೆ ನೀರು ಕಲುಷಿತಗೊಂಡಿದ್ದೋ, ಅಥವಾ ಕಿಡಿಗೇಡಿಗಳು ಕೆರೆಗೆ ವಿಷ ಹಾಕಿದ್ದರಿಂದ ಮೀನುಗಳು ಸಾವನ್ನಪ್ಪಿಯೋ ಎಂಬುದು ಸ್ಪಷ್ಟವಿಲ್ಲ. ಆದರೆ, ಕೆರೆಯ ದಡದಲ್ಲಿ ಸಾವಿರಾರು ಮೀನುಗಳು ಸತ್ತು ತೇಲುತ್ತಿವೆ. ಇದರಿಂದಾಗಿ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಬೆಂಗಳೂರಿನ ಹೆಬ್ಬಾಳ-ನಾಗವಾರ ಕೆರೆಗಳ (ಎಚ್.ಎನ್.) ವ್ಯಾಲಿ ನೀರು ಎರಡು ಹಂತದಲ್ಲಿ ಶುದ್ಧೀಕರಿಸಿ ಹರಿಸಿರುವ ಅಮಾನಿ ಗೋಪಾಲಕೃಷ್ಣ ಕೆರೆಯಲ್ಲಿ ಸಾವಿರಾರು, ಮೀನುಗಳು ಸತ್ತು ರಾಶಿ ರಾಶಿಯಾಗಿ ನೀರಿನ ಕಾಲುವೆಗಳತ್ತ ತೇಲುತ್ತ ಸಾಗಿವೆ. ಇದರಿಂದ ಅಗಲಗುರ್ಕಿಯಿಂದ ಕೆರೆಯ ಕಡೆಗೆ ಹೋಗುವ ರಸ್ತೆಯಲ್ಲಿ ಗಬ್ಬುನಾರುತ್ತಿದೆ. ಕೆರೆಯಲ್ಲಿ ಮೀನುಗಳ ಸಾವಿಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ವೈಯಕ್ತಿಕ ದ್ವೇಷದ ಕಾರಣ ಕೆರೆಗೆ ವಿಷ ಹಾಕಿರುವ ಶಂಕೆ ವ್ಯಕ್ತವಾಗಿದೆ. ಎಚ್‌ಎನ್ ವ್ಯಾಲಿ ನೀರು ಚಿಕ್ಕಬಳ್ಳಾಪುರದ ಬತ್ತಿದ ಕೆರೆಗಳಿಗೆ ಹರಿಸಿ ಅಂತರ್ಜಲ ಹೆಚ್ಚಿಸಲಾಗುತ್ತಿದೆ. ಆದರೆ ನೀರು ಕಲುಷಿತಗೊಂಡಿರುವ ಕಾರಣ ಕೆರೆಗಳಲ್ಲಿ ವಾಸಿಸೋ ಅದೆಷ್ಟೋ ಜಲಚರಗಳು ಸಾವನ್ನಪ್ಪುತ್ತಿವೆ ಎನ್ನಲಾಗಿದೆ. ಕೆರೆಗಳ ಅಕ್ಕಪಕ್ಕದ ಗ್ರಾಮಗಳಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದೆ.ಸಣ್ಣ ನೀರಾವರಿ ಇಲಾಖೆ ನಿರ್ಲಕ್ಷ್ಯ
ನಗರಕ್ಕೆ ಅಂಟಿಕೊಂಡಿರುವ ಅಮಾನಿ ಗೋಪಾಲ ಕೃಷ್ಣ ಕೆರೆಯಲ್ಲಿ ಈ ಹಿಂದೆ ಒಮ್ಮೆ ಸಾವಿರಾರು ಮೀನುಗಳು ಸತ್ತು ಸುದ್ದಿಯಾಗಿತ್ತು. ಈಗ ಅಗಲಗುರ್ಕಿ ಕಡೆ ಲಕ್ಷಾಂತರ ಮೀನುಗಳು ಸತ್ತು ರಾಶಿ ರಾಶಿ ಗೊಚರಿಸುತ್ತಿವೆ ರಸ್ತೆಯಲ್ಲಿ ಓಡಾಡೋ ಜನರಂತೂ ಮೂಗು ಮುಚ್ಚಿಕೊಂಡೆ ಓಡಾಡುವಂತಾಗಿದೆ. ವಿಷಯ ತಿಳಿಸಿದರೂ ಸಣ್ಣ ನೀರಾವರಿ ಇಲಾಖಾ ಅಧಿಕಾರಿಗಳಾಗಲಿ, ಸಂಬಂಧಿಸಿದ ಇಲಾಖಾ ಅಧಿಕಾರಿಗಳಾಗಲಿ ಬರುತ್ತಿಲ್ಲ ನೋಡುತ್ತಿಲ್ಲ ನಮಗಂತೂ ನಿತ್ಯ ನರಕ ಅನುಭವಿಸುವಂತಾಗಿದೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.ಕೆರೆಗೆ ಚರಂಡಿ ನೀರು:ಕೆರೆಯಲ್ಲಿ ಚರಂಡಿ ನೀರಿನ ಒಳಹರಿವು ಕಂಡು ಬಂದಿದ್ದು, ಕೆರೆಗೆ ಕೊಳಚೆ ನೀರು ಬಿಡುತ್ತಿರುವುದೇ ಮೀನುಗಳ ಮಾರಣಹೋಮಕ್ಕೆ ಕಾರಣ ಎಂದು ಸ್ಥಳೀಯರು ಶಂಕಿಸಿದ್ದಾರೆ. ಚರಂಡಿ ನೀರನ್ನು ಕೆರೆ ಬಿಡುತ್ತಿರುವುದರಿಂದ ಕೆರೆಯಲ್ಲಿ ಸಾರಜನಕದ ಅಂಶ ಹೆಚ್ಚಾಗುತ್ತಿದ್ದು, ಇದು ಪಾಚಿಗೆ ಕಾರಣವಾಗುತ್ತಿದೆ. ಬೇಸಿಗೆಯಲ್ಲಿ ಬಿಸಿಲಿನ ಜಳ ಹೆಚ್ಚಾಗುವುದರಿಂದಲೂ ಸಹ ಕೆರೆಯಲ್ಲಿ ಆಮ್ಲಜನಕ ಕಡಿಮೆಯಾಗಿ ಮೀನುಗಳ ಸಾವಿಗೆ ಕಾರಣವಾಗುತ್ತಿದೆ ಎಂದು ಅಗಲಗುರ್ಕಿಯ ರೈತ ಚಂದ್ರಶೇಖರ್ ತಿಳಿಸಿದ್ದಾರೆ. ಪರಿಸರ ನಿಯಂತ್ರಣ ಮತ್ತು ಮಾಲಿನ್ಯ ಮಂಡಳಿ, ಕೆರೆ ಅಭಿವೃದ್ಧಿ ಪ್ರಾಧಿಕಾರ, ಸಣ್ಣ ನೀರಾವರಿ ಇಲಾಖೆ ಅಥವಾ ಮೀನುಗಾರಿಕೆ ಇಲಾಖೆ ಈ ಕುರಿತು ಪರಿಶೀಲನೆ ನಡೆಸಿ, ಕೆರೆ ಮಾಲೀನ್ಯಕ್ಕೆ ಕಾರಣವನ್ನು ಕಂಡು ಹಿಡಿದು ಸಮಸ್ಯೆ ಪರಿಹರಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ