ಲೈನ್‌ಮೆನ್ ಸಾವು: ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ

| Published : May 04 2024, 12:33 AM IST

ಸಾರಾಂಶ

ಬಾಳೆಹೊನ್ನೂರು, ಕಳೆದ ಏ.23ರಂದು ಬಾಳೆಹೊನ್ನೂರು ಮೆಸ್ಕಾಂ ವ್ಯಾಪ್ತಿಯ ಸೀಗೋಡು ಕೆಫೆ ಬಳಿ ಆಕಸ್ಮಿಕ ವಿದ್ಯುತ್ ಸ್ಪರ್ಶದಿಂದ ಲೈನ್‌ಮೆನ್ ಮಹಾದೇವಪ್ಪ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಂಡು ಕೂಡಲೇ ಅವರನ್ನು ಕರ್ತವ್ಯದಿಂದ ವಜಾಗೊಳಿಸಬೇಕು ಎಂದು ಮೃತನ ತಂದೆ ಹೊಳೆನರಸೀಪುರ ಟಿ.ಪಿ.ಸೋಮಶೇಖರ್ ಒತ್ತಾಯಿಸಿದರು.

ಕರ್ತವ್ಯದಿಂದ ವಜಾಗೊಳಿಸಲು ಮೃತನ ತಂದೆ ಹೊಳೆನರಸೀಪುರ ಟಿ.ಪಿ.ಸೋಮಶೇಖರ್‌ ಆಗ್ರಹ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಕಳೆದ ಏ.23ರಂದು ಬಾಳೆಹೊನ್ನೂರು ಮೆಸ್ಕಾಂ ವ್ಯಾಪ್ತಿಯ ಸೀಗೋಡು ಕೆಫೆ ಬಳಿ ಆಕಸ್ಮಿಕ ವಿದ್ಯುತ್ ಸ್ಪರ್ಶದಿಂದ ಲೈನ್‌ಮೆನ್ ಮಹಾದೇವಪ್ಪ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಂಡು ಕೂಡಲೇ ಅವರನ್ನು ಕರ್ತವ್ಯದಿಂದ ವಜಾಗೊಳಿಸಬೇಕು ಎಂದು ಮೃತನ ತಂದೆ ಹೊಳೆನರಸೀಪುರ ಟಿ.ಪಿ.ಸೋಮಶೇಖರ್ ಒತ್ತಾಯಿಸಿದರು.

ಪಟ್ಟಣದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ.23ರ ಮಧ್ಯಾಹ್ನ ಸೀಗೋಡು ಕೆಫೆ ಬಳಿ ನನ್ನ ಮಗನಾದ ಲೈನ್‌ಮೆನ್ ಟಿ.ಎಸ್.ಮಹಾದೇವಪ್ಪ ವಿದ್ಯುತ್ ಲೈನ್ ದುರಸ್ಥಿಪಡಿಸುತ್ತಿದ್ದ ವೇಳೆ ಲೈನ್‌ನಲ್ಲಿ ದಿಢೀರ್ ಆಗಿ ವಿದ್ಯುತ್ ಪ್ರವಹಿಸಿ ವಿದ್ಯುತ್ ಶಾಕ್‌ಗೆ ಒಳಗಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.ನನ್ನ ಮಗ ಕರ್ತವ್ಯದಲ್ಲಿದ್ದಾಗ ಮೃತಪಡಲು ಮೆಸ್ಕಾಂ ಹಾಗೂ ಕೆಪಿಟಿಸಿಎಲ್ ಅಧಿಕಾರಿಗಳೇ ಕಾರಣರಾಗಿದ್ದಾರೆ. ಸೂಕ್ತ ಮುಂಜಾಗರೂಕ ಕ್ರಮಗಳನ್ನು ಕೈಗೊಳ್ಳದೆ ಉದ್ದೇಶಪೂರ್ವಕವಾಗಿ ವಿದ್ಯುತ್ ಸಂಪರ್ಕ ನೀಡಿರುವುದರಿಂದಲೇ ವಿದ್ಯುತ್ ಶಾಕ್‌ಗೆ ಒಳಗಾಗಿ ನನ್ನ ಮಗ ಮೃತಪಟ್ಟಿದ್ದಾನೆ. ಈ ಬಗ್ಗೆ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಮೆಸ್ಕಾಂ ಹಾಗೂ ಕೆಪಿಟಿಸಿಎಲ್‌ನ ಆರು ಜನ ಅಧಿಕಾರಿಗಳ ವಿರುದ್ಧ ಅದೇ ದಿನ ಪ್ರಕರಣವನ್ನು ಸಹ ದಾಖಲಿಸಲಾಗಿದೆ.ನನ್ನ ಮಗ ಮೃತಪಟ್ಟ ದಿನ ಸ್ಥಳಕ್ಕೆ ಆಗಮಿಸಿದ ಮೆಸ್ಕಾಂ ಎಸ್.ಇ ಲೋಕೇಶ್ ಹಾಗೂ ಶಾಸಕ ಟಿ.ಡಿ.ರಾಜೇಗೌಡ ನಮ್ಮ ಕುಟುಂಬದವರೊಂದಿಗೆ ಮಾತನಾಡಿ, ಎಫ್.ಐ.ಆರ್‌ನಲ್ಲಿ ಪ್ರಕರಣ ದಾಖಲಿಸಿರುವ ಆರು ಜನ ಅಧಿಕಾರಿಗಳ ವಿರುದ್ಧ 24 ಗಂಟೆಯೊಳಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ ಘಟನೆ ನಡೆದು 10 ದಿನ ಕಳೆದರೂ ಇದೂವರೆಗೆ ಯಾವುದೇ ಅಧಿಕಾರಿಗಳ ವಿರುದ್ಧ ಕ್ರಮಕೈಗೊಂಡಿಲ್ಲ. ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಕೂಡಲೇ ಕರ್ತವ್ಯ ಲೋಪ ಎಸಗಿದ ಎಲ್ಲಾ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳುವುದಲ್ಲದೇ ಕರ್ತವ್ಯದಿಂದ ವಜಾಗೊಳಿಸಬೇಕು. ಇನ್ನು ಒಂದು ವಾರದೊಳಗೆ ಕ್ರಮ ಕೈಗೊಳ್ಳ ದಿದ್ದಲ್ಲಿ ಚಿಕ್ಕಮಗಳೂರಿನ ಮೆಸ್ಕಾಂ ಎಸ್.ಇ.ಕಚೇರಿ ಹಾಗೂ ಬಾಳೆಹೊನ್ನೂರು ಮೆಸ್ಕಾಂ ಕಚೇರಿ ಮುಂಭಾಗದಲ್ಲಿ ಪ್ರತಿ ಭಟನೆಯನ್ನು ಕುಟುಂಬ ಸದಸ್ಯರು ನಡೆಸಲಿದ್ದೇವೆ ಎಂದು ತಿಳಿಸಿದರು.೦೩ಬಿಹೆಚ್‌ಆರ್ ೧: ಸೋಮಶೇಖರ್