ಪುಟ್ಟಸ್ವಾಮಿ ನಿಧನ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ನಷ್ಟ: ಸಾಹಿತಿ ಡಾ.ರಾಜಶ್ರೀ

| Published : Aug 09 2024, 12:35 AM IST

ಪುಟ್ಟಸ್ವಾಮಿ ನಿಧನ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ನಷ್ಟ: ಸಾಹಿತಿ ಡಾ.ರಾಜಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಅಗಲಿದ ಪರಿಸರವಾದಿ, ಕವಿ, ನಾಟಕಕಾರ, ನಿವೃತ್ತ ಉಪನ್ಯಾಸಕ ಭೂಹಳ್ಳಿ ಪುಟ್ಟಸ್ವಾಮಿ ನಿಧನದಿಂದ ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಸಾಹಿತಿ ಡಾ.ರಾಜಶ್ರೀ ವಿಷಾದಿಸಿದರು. ಚನ್ನಪಟ್ಟಣದಲ್ಲಿ ಭೂಹಳ್ಳಿ ಪುಟ್ಟಸ್ವಾಮಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.

-ಪರಿಸರವಾದಿ ಭೂಹಳ್ಳಿ ಪುಟ್ಟಸ್ವಾಮಿಗೆ ಶ್ರದ್ಧಾಂಜಲಿ ಸಭೆ -ಪುಟ್ಟಸ್ವಾಮಿ ಸೇವೆ ಸ್ಮ ರಣೆಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ಅಗಲಿದ ಪರಿಸರವಾದಿ, ಕವಿ, ನಾಟಕಕಾರ, ನಿವೃತ್ತ ಉಪನ್ಯಾಸಕ ಭೂಹಳ್ಳಿ ಪುಟ್ಟಸ್ವಾಮಿ ನಿಧನದಿಂದ ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಸಾಹಿತಿ ಡಾ.ರಾಜಶ್ರೀ ವಿಷಾದಿಸಿದರು.

ನಗರದ ಡಾ.ರಾಜ್ ಚಿಕಿತ್ಸಾಲಯದ ಆವರಣದಲ್ಲಿ ಡಾ.ನಾಗರಾಜ್ ಸಾಹಿತ್ಯ ವೇದಿಕೆ ಹಮ್ಮಿಕೊಂಡಿದ್ದ ಭೂಹಳ್ಳಿ ಪುಟ್ಟಸ್ವಾಮಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರ ಆತ್ಮಕ್ಕೆ ಶಾಂತಿ ಕೋರಿ ಮಾತನಾಡಿ, ಪರಿಸರದ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಅವರು, ತಮ್ಮ ಸ್ವಂತ ಹಣದಲ್ಲೇ ಸರ್ಕಾರಿ ಜಾಗದಲ್ಲಿ ಸಸಿ ನೆಟ್ಟು ಬೆಳೆಸಿದ್ದರು. ತಾಲೂಕಿನ ವಿವಿಧೆಡೆ ೪೦ ಎಕರೆ ಭೂಮಿಯಲ್ಲಿ ಸಸಿ ನೆಟ್ಟು, ಸಾವಿರಾರು ಗಿಡ ಮರ ಬೆಳೆಸಿದ್ದರು. ಅವರ ಅಗಲಿಕೆ ನೋವು ತರಿಸಿದೆ ಎಂದರು.

ಸಾಹಿತಿ ಸಂಘಟಕ ಡಾ.ರಾಮಲಿಂಗೇಶ್ವರ ಮಾತನಾಡಿ, ಸಮಾಜಮುಖಿ ಚಿಂತಕ ಪುಟ್ಟಸ್ವಾಮಿ, ವಾಸ್ತವಕ್ಕೆ ಹತ್ತಿರವಾಗಿದ್ದಂತಹ ಕವಿಯಾಗಿದ್ದರು. ಪರಿಸರವನ್ನೇ ದೇವರೆಂದು ಭಾವಿಸಿದ್ದ ಅವರು, ಸಮಾಜದ ಮೌಢ್ಯಗಳನ್ನು ವಿರೋಧಿಸಿ, ಮನುಷ್ಯ ಧರ್ಮಕ್ಕೆ ಹತ್ತಿರವಿದ್ದ ವಿಚಾರವಾದಿಯಾಗಿದ್ದರು. ಭೂಹಳ್ಳಿ ಪುಟ್ಟಸ್ವಾಮಿ ಅವರ ನಿಧನ ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.

ಶಿಕ್ಷಣ ಸಂಯೋಜಕ ಯೋಗೇಶ್ ಚಕ್ಕೆರೆ ಮಾತನಾಡಿ, ನನ್ನ ವಿದ್ಯಾ ಗುರುಗಳಾಗಿದ್ದ ಭೂಹಳ್ಳಿ ಪುಟ್ಟಸ್ವಾಮಿ ಅವರು ಅದಮ್ಯ ಪರಿಸರ ಪ್ರೇಮಿಯಾಗಿದ್ದರು. ಪರಿಸರದ ಬಗ್ಗೆ ಭಾಷಣ ಮಾಡುವ ಪಂಡಿತರಂತೆ ಯಾವತ್ತೂ ತೋರಿಸಿಕೊಂಡವರಲ್ಲ, ತನ್ನ ಸ್ವಂತ ಹಣವನ್ನು ಖರ್ಚು ಮಾಡಿಕೊಂಡು ಹತ್ತಾರು ವನಗಳನ್ನು ನಿರ್ಮಿಸಿ, ಗಿಡ ಮರಗಳನ್ನು ತನ್ನ ಮಕ್ಕಳಿಗಿಂತಲೂ ಹೆಚ್ಚಾಗಿ ಜೋಪಾನದಿಂದ ಕಾಪಾಡಿಕೊಂಡು ಬಂದಿದ್ದರು ಎಂದು ಸ್ಮರಿಸಿದರು.

ಭಾರತ ವಿಕಾಸ ಪರಿಷತ್ತು ಪ್ರಾಂತ್ಯ ಸಂಘಟನಾ ಕಾರ್ಯದರ್ಶಿ ವಸಂತ ಕುಮಾರ್, ಸಾಹಿತಿ ಕೂರಣಗೆರೆ ಕೃಷ್ಣಪ್ಪ, ಕವಯಿತ್ರಿ ಆಶಾಲತಾ ನುಡಿನಮನ ಸಲ್ಲಿಸಿದರು. ಬಾವಿಪ ಕಾರ್ಯದರ್ಶಿ ವಿ.ಟಿ.ರಮೇಶ್, ನಿವೃತ್ತ ಶಿಕ್ಷಕ ಕರಿಯಪ್ಪ, ನಿವೃತ್ತ ಶಿಶು ಅಭಿವೃದ್ಧಿ ಅಧಿಕಾರಿ ಪುಟ್ಟಸ್ವಾಮಿ, ಉದ್ಯಮಿ ಡ್ರೀಮ್ ಲ್ಯಾಂಡ್ ನಾಗರಾಜು, ಸಮಾಜ ಸೇವಕ ತಗಚಗೆರೆ ದೇವರಾಜು, ಶಿಕ್ಷಕ ರಾಜಶೇಖರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪುಟ್ಟಸ್ವಾಮಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಅವರ ಆತ್ಮಕ್ಕೆ ಶಾಂತಿಸಿಗಲೆಂದು ಶ್ರದ್ಧಾಂಜಲಿ ಸಲ್ಲಿಸಲಾಯಿತು.