ಸಾರಾಂಶ
ಕನ್ನಡಪ್ರಭ ವಾರ್ತೆ ರಾಯಚೂರುಜಿಲ್ಲೆಯಲ್ಲಿ ಬಾಣಂತಿಯರ ಸಾವಿನ ಪ್ರಕರಣಗಳು ಮುಂದುವರೆದಿದ್ದು, ಹೊಸ ವರ್ಷದ ಮೊದಲ ದಿನವೇ ನವಜಾತ ಶಿಶು ಹಾಗೂ ಬಾಣಂತಿ ಸಾವನಪ್ಪಿರುವ ಘಟನೆ ಸ್ಥಳೀಯ ರಿಮ್ಸ್ ಬೋಧಕ ಆಸ್ಪತ್ರೆಯಲ್ಲಿ ಬುಧವಾರ ಸಂಭವಿಸಿದೆ.ಜಿಲ್ಲೆ ದೇವದುರ್ಗ ತಾಲೂಕಿನ ಮಸೀದಿಪುರ ಗ್ರಾಮದ ಬಾಣಂತಿ ಶಿವಲಿಂಗಮ್ಮ (21) ಹಾಗೂ ಆಕೆಯ ಐದು ದಿನಗಳ ಮಗು ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಹೆರಿಗೆ ನೋವಿನಿಂದ ಕಳೆದ ಡಿ.25 ರಂದು ರಿಮ್ಸ್ ಬೋಧಕ ಆಸ್ಪತ್ರೆಗೆ ದಾಖಲಾಗಿದ್ದ ಶಿವಲಿಂಗಮ್ಮ ಮಗವಿಗೆ ಜನ್ಮ ನೀಡಿದ್ದು, ತೀವ್ರ ರಕ್ತಶ್ರಾವ ಹಾಗೂ ರಕ್ತದೊತ್ತಡದಿಂದ ಬಳಲುತ್ತಿದ್ದರಿಂದ ಬಾಣಂತಿಯನ್ನು ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಲಾಗಿತ್ತು, ಬುಧವಾರ ಬೆಳಗಿನ ಜಾವ 2 ಗಂಟೆಗೆ ಶಿಶು ಸಾವನಪ್ಪಿದ್ದು ಈ ಸುದ್ದಿ ತಿಳಿದ ತಾಯಿ ತೀವ್ರ ಅಘಾತಗೊಂಡು ಬೆಳಗಿನ ಜಾವ 4 ಗಂಟೆಗೆ ಕೊನೆಯುಸಿರು ಎಳೆದಿದ್ದಾಳೆ. ರಿಮ್ಸ್ ಬೋಧಕ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ನಿರ್ಲಕ್ಷ್ಯ, ಸರಿಯಾದ ರೀತಿಯಲ್ಲಿ ಚಿಕಿತ್ಸೆ ನೀಡದ ಕಾರಣಕ್ಕೆ ತಾಯಿ-ಮಗು ಸಾವನಪ್ಪಿದೆ ಎಂದು ಸಂಬಂಧಿಕರು ಗಂಭೀರವಾಗಿ ಆರೋಪಿಸಿದ್ದಾರೆ. ತಾಯಿ-ಮಗುವನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಲ್ಲಿ ಬಾಣಂತಿಯರ ಸಾವಿನ ಸಂಖ್ಯೆಯು 11ಕ್ಕೆ ಏರಿಕೆ ಕಂಡಿದೆ. ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸುರೇಂದ್ರಬಾಬು ಅವರು ಬಾಣಂತಿ ಅತೀಯಾದ ರಕ್ತ ಶ್ರಾವ, ರಕ್ತದ ಒತ್ತಡದ ಜೊತೆಗೆ ಮುಂಚಿತವಾಗಿಯೇ ಮೂರ್ಚೆ ಕಾಯಿಲೆಯಿಂದ ಬಳಲುತ್ತಿದ್ದಳು,ಜನ್ಮಿಸಿದ ಮಗುವು ಸಹ ಆರೋಗ್ಯ ವಾಗಿರಲಿಲ್ಲ, ವೈದ್ಯರು ಪರೀಕ್ಷೆಗಳನ್ನು ನಡೆಸಿ ಚಿಕಿತ್ಸೆ ನೀಡಿರುವುದರ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದರು.