ಗದಗ ಜಿಲ್ಲೆಯಲ್ಲಿಯೂ ಹೃದಯಾಘಾತದಿಂದ ಹೆಚ್ಚುತ್ತಿರುವ ಸಾವು : ಎಚ್ಚರಿಕೆಯ ಗಂಟೆ!

| N/A | Published : Jul 02 2025, 11:48 PM IST / Updated: Jul 03 2025, 01:42 PM IST

heart attack symptoms treatment  prevention
ಗದಗ ಜಿಲ್ಲೆಯಲ್ಲಿಯೂ ಹೃದಯಾಘಾತದಿಂದ ಹೆಚ್ಚುತ್ತಿರುವ ಸಾವು : ಎಚ್ಚರಿಕೆಯ ಗಂಟೆ!
Share this Article
  • FB
  • TW
  • Linkdin
  • Email

ಸಾರಾಂಶ

ಗದಗ ಜಿಲ್ಲೆಯಲ್ಲಿಯೂ ಕಳೆದ 3 ತಿಂಗಳಲ್ಲಿ 78 ಜನರು ಈ ಕಾರ್ಡಿಯಾಕ್ ಅರೆಸ್ಟ್‌ಗೆ ಬಲಿಯಾಗಿದ್ದಾರೆ. ಅದರಲ್ಲಿ ಹಿರಿಯ ನಾಗರಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಹಿರಿಯ ನಾಗರಿಕರಲ್ಲಿಯೂ ಹೃದಯದ ಆರೋಗ್ಯಕ್ಕೆ ತುರ್ತು ಗಮನ ನೀಡುವ ಅಗತ್ಯವನ್ನು ತೋರಿಸುತ್ತಿದೆ.

ಶಿವಕುಮಾರ ಕುಷ್ಟಗಿ

ಗದಗ: ಕಾರ್ಡಿಯಾಕ್ ಅರೆಸ್ಟ್‌ನಿಂದ ಹಾಸನ ಜಿಲ್ಲೆಯಲ್ಲಿ ನಡೆಯುತ್ತಿರುವ ಯುವಕರ ಸಾವಿನ ಸರಣಿ ರಾಜ್ಯ ಮಾತ್ರವಲ್ಲದೇ ದೇಶದಲ್ಲಿಯೂ ಆತಂಕಕ್ಕೆ ಕಾರಣವಾಗಿದೆ. ಅದೇ ಮಾದರಿಯಲ್ಲಿ ಗದಗ ಜಿಲ್ಲೆಯಲ್ಲಿಯೂ ಕಳೆದ 3 ತಿಂಗಳಲ್ಲಿ 78 ಜನರು ಈ ಕಾರ್ಡಿಯಾಕ್ ಅರೆಸ್ಟ್‌ಗೆ ಬಲಿಯಾಗಿದ್ದು, ಜಿಲ್ಲೆಯಾದ್ಯಂತ ಆತಂಕಕ್ಕೆ ಕಾರಣವಾಗಿದೆ.

ಈ ಸಾವುಗಳಲ್ಲಿ ಬಹುಪಾಲು ವಯಸ್ಸಾದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 51ರಿಂದ 70 ವರ್ಷ ವಯಸ್ಸಿನವರಲ್ಲಿ ಬರೋಬ್ಬರಿ 44 ಸಾವು ಸಂಭವಿಸಿದ್ದರೆ, 71 ವರ್ಷಕ್ಕಿಂತ ಮೇಲ್ಪಟ್ಟ 19 ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇದು ಹಿರಿಯ ನಾಗರಿಕರಲ್ಲಿಯೂ ಹೃದಯದ ಆರೋಗ್ಯಕ್ಕೆ ತುರ್ತು ಗಮನ ನೀಡುವ ಅಗತ್ಯವನ್ನು ತೋರಿಸುತ್ತಿದೆ.

ಮಧ್ಯವಯಸ್ಕರೂ ಸುರಕ್ಷಿತವಲ್ಲ: ಜಿಲ್ಲೆಯಲ್ಲಿ ಮಧ್ಯವಯಸ್ಕರಲ್ಲಿ ಆಗಿರುವ ಹೃದಯಾಘಾತ ಗಮನಿಸಿದಾಗ ಯುವಕರು ಸಹ ಸಂಪೂರ್ಣ ಸುರಕ್ಷಿತವಾಗಿಲ್ಲ. 30ರಿಂದ 50 ವರ್ಷದೊಳಗಿನ 14 ಜನರು ಹೃದಯಾಘಾತದಿಂದ ಅಸು ನೀಗಿರುವುದು ಆಘಾತಕಾರಿ ಅಂಶವಾಗಿದೆ. ಆದರೆ, 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಒಬ್ಬರು ಮಾತ್ರ ಮರಣ ಹೊಂದಿದ್ದು, ಸದ್ಯಕ್ಕೆ ಸಮಾಧಾನಕರ ಸಂಗತಿ. ಆದರೆ ಯಾವುದೇ ವಯಸ್ಸಿನಲ್ಲಿ ಹೃದಯಾಘಾತ ಸಂಭವಿಸಬಹುದು ಎಂಬುದನ್ನು ಇದು ನೆನಪಿಸುತ್ತದೆ.

ಪುರುಷರೇ ಹೆಚ್ಚು: ಜಿಲ್ಲೆಯ 7 ತಾಲೂಕುಗಳ ವ್ಯಾಪ್ತಿಯಲ್ಲಿ ಹೃದಯಾಘಾತದಿಂದ ಅಸು ನೀಗಿದವರ ಲಿಂಗವಾರು ವಿಭಜನೆ ಗಮನಿಸಿದರೆ, ಮೃತರಾದ 78 ಜನರಲ್ಲಿ 50 ಮಂದಿ ಪುರುಷರು ಮತ್ತು 28 ಮಂದಿ ಮಹಿಳೆಯರು. ಈ ಅಂಕಿ-ಅಂಶಗಳು ಜಿಲ್ಲೆಯಲ್ಲಿ ಪುರುಷರಲ್ಲಿಯೇ ಹೆಚ್ಚಿನ ಹೃದಯ ಸಂಬಂಧಿ ಸಮಸ್ಯೆಗಳು ಕಾಡುತ್ತಿದೆ ಎನ್ನುವುದನ್ನು ಸೂಚಿಸುತ್ತವೆ.

ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಹೆಚ್ಚು: ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಜಿಲ್ಲಾ ಆಸ್ಪತ್ರೆಯಲ್ಲಿ ಒಟ್ಟು 44 ಮೃತಪಟ್ಟಿದ್ದಾರೆ. ಅವರಲ್ಲಿ 25 ಪುರುಷರು, 19 ಮಹಿಳೆಯರಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ 30 ವರ್ಷದೊಳಗಿನವರೂ ಯಾರೂ ಇಲ್ಲ. ಆದರೆ 31ರಿಂದ 50ರ ವರೆಗೆ 6 ಜನ, 51ರಿಂದ 70ರ ವರೆಗೆ 27 ಜನ ಹಾಗೂ 70 ವರ್ಷ ಮೇಲ್ಪಟ್ಟವರು 11 ಜನ ಬಲಿಯಾಗಿದ್ದಾರೆ.

ಖಾಸಗಿ ಆಸ್ಪತ್ರೆಗಳು ಹೊರತಾಗಿಲ್ಲ: 34 ಜನರು ಖಾಸಗಿ ಆಸ್ಪತ್ರೆಗಳಲ್ಲಿ ಹೃದಯಾಘಾತಕ್ಕೆ ತುತ್ತಾಗಿದ್ದಾರೆ. 30 ವರ್ಷದೊಳಗಿನವರಲ್ಲಿ ಸಂಭವಿಸಿದ ಏಕೈಕ ಸಾವಿನ ಪ್ರಕರಣವೂ ಖಾಸಗಿ ಆಸ್ಪತ್ರೆಯಲ್ಲಿಯೇ ವರದಿಯಾಗಿದೆ. ಮೃತಪಟ್ಟ 34 ಜನರಲ್ಲಿ 25 ಜನ ಪುರುಷರು, 9 ಮಹಿಳೆಯರಿದ್ದಾರೆ. 31ರಿಂದ 50 ವರ್ಷದೊಳಗೆ 8 ಜನ, 51ರಿಂದ 70 ವಯಸ್ಸಿನಲ್ಲಿ 17 ಜನ ಹಾಗೂ 71 ವರ್ಷ ಮೇಲ್ಪಟ್ಟವರು 8 ಜನ ಅಸು ನೀಗಿದ್ದಾರೆ. ಈ ಅಂಕಿ ಅಂಶಗಳು ಖಾಸಗಿ ಆಸ್ಪತ್ರೆಗಳಲ್ಲಿಯೂ ತುರ್ತು ಹೃದಯ ಆರೈಕೆ ವ್ಯವಸ್ಥೆಗಳನ್ನು ಬಲಪಡಿಸುವ ಮತ್ತು ತಕ್ಷಣದ ಪ್ರತಿಕ್ರಿಯೆಯ ಪ್ರಾಮುಖ್ಯತೆಯ ಕೊರತೆಯನ್ನು ತೋರಿಸುತ್ತದೆ. ಆರೋಗ್ಯಶೈಲಿ:

ಈ ಅಂಕಿ-ಅಂಶಗಳು ಕೇವಲ ಸಂಖ್ಯೆಗಳಲ್ಲ, ಪ್ರತಿಯೊಂದು ಸಾವೂ ಒಂದು ಕುಟುಂಬಕ್ಕೆ, ಒಂದು ಸಮುದಾಯಕ್ಕೆ ತುಂಬಲಾರದ ನಷ್ಟ ಉಂಟುಮಾಡುತ್ತದೆ. ಗದಗ ಜಿಲ್ಲೆಯ ಜನತೆ ಹೃದಯಾಘಾತದ ಅಪಾಯಗಳನ್ನು ಅರ್ಥ ಮಾಡಿಕೊಳ್ಳುವುದು, ನಿಯಮಿತ ಆರೋಗ್ಯ ತಪಾಸಣೆಗಳನ್ನು ಮಾಡಿಸಿಕೊಳ್ಳುವುದು, ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳುವುದು ಮತ್ತು ಯಾವುದೇ ಹೃದಯ ಸಂಬಂಧಿ ಲಕ್ಷಣಗಳನ್ನು ನಿರ್ಲಕ್ಷಿಸದಿರುವುದು ಅತ್ಯಗತ್ಯ.

ತಪಾಸಣೆ ಮಾಡಿಸಿ:  ಹೃದಯಾಘಾತ ತಪ್ಪಿಸಲು ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳಬೇಕು. ಪ್ರತಿದಿನ ಕನಿಷ್ಠ 30 ನಿಮಿಷ ವ್ಯಾಯಾಮ (ನಡೆಯುವುದು, ಜಾಗಿಂಗ್ ಅಥವಾ ಯೋಗ) ಮಾಡಬೇಕು. ಸಂಸ್ಕರಿತ ಆಹಾರ ಸೇವನೆ (ಹೆಚ್ಚು ಉಪ್ಪು, ಬೆಣ್ಣೆ, ಎಣ್ಣೆ, ಜಂಕ್ ಫುಡ್ ಬೇಡ) ಬದಲು, ಹಣ್ಣು, ತರಕಾರಿಗಳು, ಹಾಲಿನ ಉತ್ಪನ್ನಗಳು ಮತ್ತು ಸಂಪೂರ್ಣ ಧಾನ್ಯಗಳನ್ನು ಒಳಗೊಂಡ ಆಹಾರ ಸೇವನೆ ಮಾಡಬೇಕು. 

ರಾತ್ರಿ ಬೇಗ ಮಲಗಿ ಬೇಗ ಏಳಬೇಕು, ಅತಿಯಾದ ಮೊಬೈಲ್ ಬಳಕೆ ನಿಲ್ಲಿಸಬೇಕು. ಧೂಮಪಾನ ಮತ್ತು ಮದ್ಯಪಾನವನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಜತೆಗೆ, ರಕ್ತದೊತ್ತಡ, ಶುಗರ್ ಮತ್ತು ಕೊಲೆಸ್ಟ್ರಾಲ್ ಅನ್ನು ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳಬೇಕು. ವರ್ಷಕ್ಕೊಮ್ಮೆ ಮೆಡಿಕಲ್ ಚೆಕ್‌ಅಪ್ ಮಾಡಿಸಿಕೊಳ್ಳುವುದು ಹಾಗೂ ಹೃದಯ ವೈದ್ಯರ ಸಲಹೆ ಪಾಲಿಸಬೇಕು ಎಂದು ಗದಗ ಡಿಎಚ್‌ಒ ಡಾ. ಎಸ್.ಎಸ್. ನೀಲಗುಂದ ಹೇಳಿದರು.

Read more Articles on