ಹೊರಗುತ್ತಿಗೆ ನೌಕರರ ಬೇಡಿಕೆ ಬಗ್ಗೆ ಸದನದಲ್ಲಿ ಚರ್ಚೆ

| Published : Dec 01 2024, 01:32 AM IST

ಸಾರಾಂಶ

ಹೊರಗುತ್ತಿಗೆ ನೌಕರರ ನ್ಯಾಯಯುತ ಬೇಡಿಕೆಗಳ ಬಗ್ಗೆ ಸದನದಲ್ಲಿ ಚರ್ಚೆಗೆ ತರಲಾಗುವುದು. ಹೊರಗುತ್ತಿಗೆ ಕೆಲಸಕ್ಕೆ ತೆಗೆದುಕೊಳ್ಳುವಾಗ ಯಾರಾದರೂ ಹಣ ಕೇಳಿದರೆ ಕೊಡಬೇಡಿ. ನಮ್ಮ ಗಮನಕ್ಕೆ ತಂದರೇ ಇದನ್ನ ದೊಡ್ಡಮಟ್ಟದಲ್ಲಿ ತೆಗೆದುಕೊಂಡು ಹೋಗಿ ಕಡಿವಾಣ ಹಾಕಲಾಗುವುದು ಎಂದು ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಖಡಕ್ ಎಚ್ಚರಿಕೆ ನೀಡಿದರು. ಆರೋಗ್ಯ ಇಲಾಖೆಯ ವಿವಿಧ ವೃಂದದ ಹೊರಗುತ್ತಿಗೆ ನೌಕರರ ಬೇಡಿಕೆಗಳನ್ನು ಸದನದಲ್ಲಿ ಚರ್ಚೆ ಮಾಡುವ ಕೆಲಸವನ್ನು ಖಂಡಿತವಾಗಿ ಮಾಡಲಾಗುವುದು. ನಿಮ್ಮ ನ್ಯಾಯಯುತವಾದ ಬೇಡಿಕೆಗೆ ನ್ಯಾಯ ಒದಗಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಲಾಗುವುದು ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ಹೊರಗುತ್ತಿಗೆ ನೌಕರರ ನ್ಯಾಯಯುತ ಬೇಡಿಕೆಗಳ ಬಗ್ಗೆ ಸದನದಲ್ಲಿ ಚರ್ಚೆಗೆ ತರಲಾಗುವುದು. ಹೊರಗುತ್ತಿಗೆ ಕೆಲಸಕ್ಕೆ ತೆಗೆದುಕೊಳ್ಳುವಾಗ ಯಾರಾದರೂ ಹಣ ಕೇಳಿದರೆ ಕೊಡಬೇಡಿ. ನಮ್ಮ ಗಮನಕ್ಕೆ ತಂದರೇ ಇದನ್ನ ದೊಡ್ಡಮಟ್ಟದಲ್ಲಿ ತೆಗೆದುಕೊಂಡು ಹೋಗಿ ಕಡಿವಾಣ ಹಾಕಲಾಗುವುದು ಎಂದು ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಖಡಕ್ ಎಚ್ಚರಿಕೆ ನೀಡಿದರು.

ನಗರದ ಹಿಮ್ಸ್ ಆವರಣದಲ್ಲಿ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆಯ ವಿವಿಧ ವೃಂದದ ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ಶನಿವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ರಾಜ್ಯಮಟ್ಟದ ಆರೋಗ್ಯ ಇಲಾಖೆಯ ಹೊರಗುತ್ತಿಗೆ ನೌಕರರಿಗೆ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಆರೋಗ್ಯ ಇಲಾಖೆಯ ವಿವಿಧ ವೃಂದದ ಹೊರಗುತ್ತಿಗೆ ನೌಕರರ ಬೇಡಿಕೆಗಳನ್ನು ಸದನದಲ್ಲಿ ಚರ್ಚೆ ಮಾಡುವ ಕೆಲಸವನ್ನು ಖಂಡಿತವಾಗಿ ಮಾಡಲಾಗುವುದು. ನಿಮ್ಮ ನ್ಯಾಯಯುತವಾದ ಬೇಡಿಕೆಗೆ ನ್ಯಾಯ ಒದಗಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಲಾಗುವುದು. ಈ ಸಂಘವು ದೊಡ್ಡಮಟ್ಟದಲ್ಲಿ ಬೆಳೆಯಬೇಕು. ಹಾಗೇ ಒಗ್ಗಟ್ಟಿನಿಂದ ಹೋರಾಟ ಮಾಡುವ ಅವಶ್ಯಕತೆ ಇದೆ ಎಂದರು. ಪ್ರತಿವರ್ಷ ಟೆಂಡರ್‌ ಕರೆಯುವ ಮೂಲಕ ಏಜೆನ್ಸಿ ಬದಲಾಗುತ್ತಿರುತ್ತದೆ. ಸಂಬಳ ಕೊಡುವುದರಲ್ಲೂ ವಿಳಂಬವಾಗಬಹುದು, ಹೊರಗುತ್ತಿಗೆ ನೌಕರರಿಗೆ ಆರೋಗ್ಯ ಸಮಸ್ಯೆ ಇರಬಹುದು, ಕುಟುಂಬದಲ್ಲಿ ಸಾವು ನೋವು ಇರಬಹುದು, ಮಕ್ಕಳ ಶಿಕ್ಷಣಕ್ಕೆ ಹಣಕಾಸು ಇರಬಹುದು, ಹಲವಾರು ಬೇಡಿಕೆಗಳನ್ನು ನಮ್ಮ ಮುಂದೆ ಇಡಲಾಗಿದ್ದು, ಇವೆಲ್ಲಾ ಈಡೇರಬೇಕಾದರೇ ಸಂಘದ ಇಂತಹ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿ ಹೋರಾಟ ಮಾಡಿದರೇ ಮಾತ್ರ ಗೆಲ್ಲಲು ಸಾಧ್ಯ ಎಂದು ಕಿವಿಮಾತು ಹೇಳಿದರು.

ಈ ಬಗ್ಗೆ ಸರ್ಕಾರದಲ್ಲಿ, ಜಿಲ್ಲಾ ಮಂತ್ರಿಗಳಲ್ಲಿ ಮನವಿ ಮಾಡಲಾಗುವುದು, ಸದನದಲ್ಲೂ ಕೂಡ ಪ್ರಸ್ತಾಪ ಮಾಡಲಾಗುವುದು. ಸಂಘದಿಂದ ಹೋರಾಟ ನಿರಂತರವಾಗಿರಬೇಕು. ಬೆಳಗಾಂನಲ್ಲೆ ನಡೆಯುತ್ತಿರುವ ಸಭೆಗೆ ನಿಮ್ಮ ಸಂಘ ಬರುವುದಾದರೇ ಅದಕ್ಕೆ ಅವಶ್ಯಕವಾಗಿ ಬೇಕಾಗಿರುವ ವಾಹನವನ್ನು ನಾನೇ ವ್ಯವಸ್ಥೆ ಮಾಡಿಕೊಡುತ್ತೇನೆ ಎಂದು ಧೈರ್ಯ ತುಂಬಿದರು. ಬೆಳಗಾಂಗೆ ಬಂದು ಸರ್ಕಾರಕ್ಕೆ ಮನವಿ ಮಾಡುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ಕೆಲ ಜಿಲ್ಲೆಗಳಲ್ಲಿ ಸರ್ಕಾರ ಮೂಲಕವೇ ಸೊಸೈಟಿ ಮಾಡಿ ಈ ಮೂಲಕವೇ ಸಂಬಳ ಭರಿಸುವ ಕೆಲಸ ಮಾಡಲಾಗುತ್ತಿದೆ. ಈ ರೀತಿ ಹಾಸನ ಜಿಲ್ಲೆಯಲ್ಲೂ ಜಾರಿಗೆ ಬಂದರೇ ನೌಕರರಿಗೆ ಅನುಕೂಲವಾಗುತ್ತದೆ. ಆರೋಗ್ಯ ಇಲಾಖೆಗೂ ಕೂಡ ಪತ್ರದಲ್ಲಿ ಬರೆಯುವ ಕೆಲಸ ಮಾಡಲಾಗುವುದು. ನೌಕರರಿಗೆ ಏಜೆನ್ಸಿಯವರು ಕೆಲಸ ಕೊಡುವ ಸಂದರ್ಭದಲ್ಲಿ ಹಣವನ್ನು ಕೇಳುವ ಕೆಲಸ ಆಗುತ್ತಿದೆ ಎನ್ನುವ ಬಗ್ಗೆ ನಮ್ಮ ಗಮನಕ್ಕೆ ಬಂದಿದ್ದು, ಇಂತಹ ಕೆಲಸ ಖಂಡಿತ ಆಗಬಾರದು. ನಿಮಗೇನು ಖಾಯಂ ಕೆಲಸವಲ್ಲ. ಹೊರಗುತ್ತಿಗೆ ಕೆಲಸ ತೆಗೆದುಕೊಳ್ಳುವುದರಿಂದ ಯಾರೂ ಕೂಡ ಹಣ ಕೊಟ್ಟು ಕೆಲಸ ತೆಗೆದುಕೊಳ್ಳುವ ಕೆಲಸ ಆಗಬಾರದು. ಯಾರಾದರೂ ಹಣ ಕೇಳಿದರೇ ನಮ್ಮ ಗಮನಕ್ಕೆ ತಂದರೆ ಇದನ್ನು ದೊಡ್ಡ ಮಟ್ಟದಲ್ಲಿ ತೆಗೆದುಕೊಂಡು ಹೋಗಿ ಕಡಿವಾಣ ಹಾಕಲಾಗುವುದು ಎಂದು ಶಾಸಕರು ಖಡಕ್ ಎಚ್ಚರಿಕೆ ನೀಡಿದರು. ನಿಮ್ಮ ಕಷ್ಟಗಳಿಗೆ ಸದಕಾಲ ನಿಮ್ಮ ಜೊತೆ ಇರುತ್ತೇನೆ ಎಂದು ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಹೊರಗುತ್ತಿಗೆ ನೌಕರರ ಸಂಘದಿಂದ ತಮ್ಮ ಬೇಡಿಕೆಗಳ ಮನವಿ ಪತ್ರವನ್ನು ಶಾಸಕ ಎಚ್.ಪಿ. ಸ್ವರೂಪ್ ಅವರಿಗೆ ನೀಡಿದರು.

ಇದೇ ವೇಳೆ ಹೊರಗುತ್ತಿಗೆ ನೌಕರರ ಸಂಘದ ಕಾನೂನು ಸಲಹೆಗಾರ ಎಚ್.ಎನ್. ರಮೇಶ್, ಅಧ್ಯಕ್ಷ ಅಕ್ಷಯ್ ಡಿ.ಎಂ. ಗೌಡ, ಉಪಾಧ್ಯಕ್ಷ ಆರ್‌. ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಮಂಜುಳ, ಜಂಟಿ ಕಾರ್ಯದರ್ಶಿ ಸಾವಿತ್ರಿ, ಖಜಾಂಚಿ ಬಿ. ರವೀಶ್, ಸಂಘಟನಾ ಕಾರ್ಯದರ್ಶಿ ಬಿ.ಟಿ. ಪ್ರಕಾಶ್, ಜಿಲ್ಲಾಧ್ಯಕ್ಷ ಎಚ್.ಆರ್‌. ಮಂಜುನಾಥ್, ಹಿಮ್ಸ್ ಕಾರ್ಯಕ್ರಮದ ಉಸ್ತುವಾರಿ ಲೋಕೇಶ್ ಉದ್ದೂರ್‌, ಆರೋಗ್ಯ ಇಲಾಖೆ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಎಚ್.ಸಿ. ಪ್ರಸಾದ್, ಉಪಾಧ್ಯಕ್ಷ ಸಿ.ಎನ್. ಪ್ರಸಾದ್, ಇತರರು ಉಪಸ್ಥಿತರಿದ್ದರು.