ಕನ್ನಡಪ್ರಭ ವಾರ್ತೆ ಪಾಲಬಾವಿಬ್ಯಾಂಕ್ ಸಾಲ ಹಾಗೂ ಕೈಗಡ ಸಾಲದ ಹೊರೆ ತಾಳಲಾರದೆ ಮಾನಸಿಕವಾಗಿ ನೊಂದ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಯಬಾಗ ತಾಲೂಕಿನ ಹಂದಿಗುಂದ ಗ್ರಾಮದಲ್ಲಿ ಗುರುವಾರ (ಅ.08) ನಡೆದಿದೆ.
ಕನ್ನಡಪ್ರಭ ವಾರ್ತೆ ಪಾಲಬಾವಿ
ಬ್ಯಾಂಕ್ ಸಾಲ ಹಾಗೂ ಕೈಗಡ ಸಾಲದ ಹೊರೆ ತಾಳಲಾರದೆ ಮಾನಸಿಕವಾಗಿ ನೊಂದ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಯಬಾಗ ತಾಲೂಕಿನ ಹಂದಿಗುಂದ ಗ್ರಾಮದಲ್ಲಿ ಗುರುವಾರ (ಅ.08) ನಡೆದಿದೆ.ಹಂದಿಗುಂದ ಗ್ರಾಮದ ಕೇದಾರಿ ದುಂಡಪ್ಪ ಸಂಕ್ರಟ್ಟಿ (34) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಮೃತರಿಗೆ ತಂದೆ-ತಾಯಿ, ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವಿದೆ.
ಹೈನುಗಾರಿಕೆಗೆ ಬ್ಯಾಂಕ್ ಸಾಲ, ವೈಯಕ್ತಿಕವಾಗಿ ಕೈಗಡ ಸಾಲ: ಕೇದಾರಿ ಸಂಕ್ರಟ್ಟಿ ಅವರು ಬನಹಟ್ಟಿಯ ಐಡಿಎಫ್‌ಸಿ ಬ್ಯಾಂಕ್ ಶಾಖೆಯಲ್ಲಿ ಹೈನುಗಾರಿಕೆ ಉದ್ದೇಶಕ್ಕಾಗಿ ಸುಮಾರು ₹2 ಲಕ್ಷ ಸಾಲ ಪಡೆದಿದ್ದರು ಎನ್ನಲಾಗಿದೆ. ಅಲ್ಲದೆ, ವೈಯಕ್ತಿಕವಾಗಿ ಅಂದಾಜು ₹3 ಲಕ್ಷ ಕೈಗಡ ಸಾಲ ಮಾಡಿಕೊಂಡಿದ್ದರು. ಒಟ್ಟಾರೆ ಸುಮಾರು ₹5 ಲಕ್ಷ ಸಾಲದ ಹೊರೆ ಅವರ ಮೇಲಿತ್ತು ಎಂದು ತಿಳಿದುಬಂದಿದೆ.ಸಾಲಗಾರರ ಒತ್ತಡದಿಂದ ಮನನೊಂದು ಅವರು ಗುರುವಾರ ಸಂಜೆ ಸುಮಾರು 3:30ರ ವೇಳೆಗೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಮೃತರ ಕುಟುಂಬದವರು ತಿಳಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.