ಋಣಭಾರದಿಂದ ಇ-ಆಸ್ತಿಗೆ ಮತ್ತಷ್ಟು ಸಂಕಷ್ಟ

| Published : Jun 18 2025, 11:49 PM IST

ಸಾರಾಂಶ

ಬಿ ಖಾತೆಯಲ್ಲಿರುವವರಿಗೆ ಆಸ್ತಿ ಉತಾರ ಸೃಷ್ಟಿಯಾದಾಗಿನಿಂದ ಋಣಭಾರ (ಇಸಿ) ಕಡ್ಡಾಯವೆಂದು ಹೇಳಿರುವುದು ಮತ್ತಷ್ಟು ಸಮಸ್ಯೆ ಸೃಷ್ಟಿಸಿದೆ.

ಶಿವಾನಂದ ಪಿ. ಮಹಾಬಲಶೆಟ್ಟಿ

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ರಾಜ್ಯ ಸರ್ಕಾರದ ಮಹತ್ವದ ಯೋಜನೆಯಾಗಿರುವ ಇ-ಆಸ್ತಿ ನೋಂದಣಿಗೆ ಹಲವಾರು ಸಮಸ್ಯೆಗಳು ಎದುರಾಗಿ ನೋಂದಣಿ ಪ್ರಕ್ರಿಯೆಗೆ ತೊಡಕಾಗಿತ್ತು. ಇದನ್ನರಿತ ಇಲಾಖೆ ಎ ಮತ್ತು ಬಿ ಯೋಜನೆಯೆಂದು ರೂಪಿಸಿ ಬಿ ಖಾತೆಯಲ್ಲಿರುವವರಿಗೆ ಆಸ್ತಿ ಉತಾರ ಸೃಷ್ಟಿಯಾದಾಗಿನಿಂದ ಋಣಭಾರ (ಇಸಿ) ಕಡ್ಡಾಯವೆಂದು ಹೇಳಿರುವುದು ಮತ್ತಷ್ಟು ಸಮಸ್ಯೆ ಸೃಷ್ಟಿಸಿದೆ.

ಇಸಿಗಾಗಿ ಅಲೆದಾಟ:

ರಬಕವಿ-ಬನಹಟ್ಟಿ ತಾಲೂಕು ಕೇಂದ್ರವಾಗಿ ೨೦೧೪ರಂದು ನಿರ್ವಹಣೆ ಆರಂಭಿಸಿದಾಗಿನಿಂದ ಸುಲಭವಾಗಿ ಇಸಿ ದೊರೆಯುತ್ತದೆ. ಈ ಮೊದಲು ಜಮಖಂಡಿ ತಾಲೂಕು ಕೇಂದ್ರವಾಗಿದ್ದರಿಂದ ೨೦೦೦ ರಿಂದ ೨೦೧೩ರವರೆಗೂ ಆನ್‌ಲೈನ್ ಇಸಿ ದೊರೆಯುವುದು ಸುಲಭ. ೨೦೦೦ ಇಸ್ವಿಗೂ ಮುಂಚೆ ಕೈಬರಹ ದಾಖಲೆಗಳೇ ದೊರಕುತ್ತಿಲ್ಲ. ಇದಕ್ಕಾಗಿ ಎರಡು ತಿಂಗಳು ಅಲೆದರೂ ಮಾಹಿತಿ ದೊರಕದ ಕಾರಣ ನಿರಾಸೆಯಿಂದ ಮರಳುತ್ತಿದ್ದಾರೆ.

ಶೇ.೨೦ರಷ್ಟು ಮಾತ್ರ ಇ-ಆಸ್ತಿ:

ರಬಕವಿ-ಬನಹಟ್ಟಿ ನಗರಸಭೆ ವ್ಯಾಪ್ತಿಯಲ್ಲಿನ ಸುಮಾರು ೨೦ ಸಾವಿರ ಆಸ್ತಿಗಳ ಪೈಕಿ ಕೇವಲ ೪೦೦೦ದಷ್ಟು ಮಾತ್ರ ಇ-ಆಸ್ತಿಗೆ ಪರಿವರ್ತನೆ ಹೊಂದಿವೆ. ಅದರಲ್ಲಿ ಇತ್ತೀಚಿನ ೨೦ ವರ್ಷಗಳ ಹೊಸ ಕಟ್ಟಡಗಳ ಆಸ್ತಿದಾರರು ಸೂಕ್ತ ದಾಖಲೆ ಒದಗಿಸುತ್ತಿದ್ದು, ಅವರು ಇ-ಆಸ್ತಿ ದಾಖಲೀಕರಣಗೊಳಿಸಿದ್ದಾರೆ. ಅನಿವಾರ್ಯತೆ ಇರುವ ಕಾರಣ ಕೇವಲ ೫೦೦ ಆಸ್ತಿದಾರರು ಒಲ್ಲದ ಮನಸ್ಸಿನಿಂದ ಬಿ-ಖಾತೆ ನಿಯಮಕ್ಕೆ ಒಪ್ಪಿ ಉತಾರ ಮಾಡಿಕೊಂಡಿದ್ದಾಗಿದೆ. ಇನ್ನುಳಿದ ಶೇ.೮೦ರಷ್ಟು ಇ-ಆಸ್ತಿದಾರರು ನಗರದ ಹೃದಯ ಭಾಗದಲ್ಲಿದ್ದು, ಬಹಳಷ್ಟು ಹಳೆಯ ಆಸ್ತಿ ಆಗಿರುವುದರಿಂದ ಅವುಗಳಿಗೆ ಸಮರ್ಪಕ ದಾಖಲೆಗಳಿಲ್ಲದೆ ಪರದಾಡುತ್ತಿದ್ದಾರೆ.

ಒಟ್ಟಾರೆ ಇ-ಆಸ್ತಿಯು ಲೇಔಟ್‌ಗಳಲ್ಲಿ ನಿರ್ಮಾಣಗೊಂಡ ಮನೆಗಳಿಗೆ ಮಾತ್ರ ಸೀಮಿತವಾಗಿದ್ದು, ಇನ್ನುಳಿದ ನೂರಾರು ವರ್ಷ ಹಿಂದಿನಿಂದ ಬದುಕು ನಿರ್ವಹಿಸುತ್ತಿರುವ ಮನೆಗಳಿಗೆ ಮಾರಕವಾಗಿದೆ.

ಅಧಿಕಾರಿಗಳ ನಿರ್ಲಕ್ಷ್ಯ:

ಜಮಖಂಡಿಯ ತಾಲೂಕಾಡಳಿತದಲ್ಲಿ ಲಿಖಿತ ಮಾಹಿತಿ ಒದಗಿಸಿದರೂ ಯಾವುದೇ ದಾಖಲಾತಿ ಒದಗಿಸುತ್ತಿಲ್ಲ. ರಬಕವಿ-ಬನಹಟ್ಟಿ ಭಾಗಗಳ ದಾಖಲಾತಿಗಳೇ ಇಲ್ಲವೆಂದು ಹೇಳಿ ಜನರನ್ನು ವಾಪಸ್ ಕಳಿಸುತ್ತಿದ್ದಾರೆ ಎಂದು ಸಹಕಾರಿ ಧುರೀಣ ಇರ್ಷಾದ್‌ ಮೋಮಿನ್ ಆರೋಪಿಸಿದ್ದಾರೆ.

ಇ-ಆಸ್ತಿಗಾಗಿ ಜನರಲ್ಲಿ ಗೊಂದಲ ಬೇಡ. ಎ ಮತ್ತು ಬಿ ಎಂದು ಯೋಜನೆ ರೂಪಿಸಿದೆ. ಸಮರ್ಪಕ ದಾಖಲೆಗಳನ್ನು ನಗರಸಭೆಗೆ ಒದಗಿಸಿದಲ್ಲಿ ಆನ್‌ಲೈನ್ ಉತಾರ ಸಿಗಲಿದೆ ಎಂದು ಪೌರಾಯುಕ್ತರಾದ ಜಗದೀಶ ಈಟಿ ತೀಳಿಸಿದ್ದಾರೆ.ಪೂರ್ವಜರ ಆಸ್ತಿಗಳಲ್ಲಿ ಡ-ಉತಾರ ಹೊರತುಪಡಿಸಿ ಮತ್ತ್ಯಾವ ದಾಖಲಾತಿಗಳು ದೊರಕದು. ಸರ್ಕಾರ ಮಾಡಿರುವ ಇ-ಆಸ್ತಿ ದಾಖಲೆಗಳು ಸರಳೀಕರಣವಾಗಲೇಬೇಕು ಎಂದು ಹೋರಾಟಗಾರ ಬಸವರಾಜ ಬೆಳಗಲಿ ಆಗ್ರಹಿಸಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಹಣದ ಆಮಿಷಕ್ಕೆ ಜನತೆ ರೋಷಿ ಹೋಗಿದ್ದಾರೆ. ತಕ್ಷಣ ಇ-ಆಸ್ತಿ ಬಗ್ಗೆ ಸರ್ಕಾರ ಗಮನಿಸಿ, ಮೊದಲಿನಂತೆ ಸುಲಭವಾಗಿ ಉತಾರ ದೊರಕುವಂತಾಗಬೇಕು ಎಂದು ಅಲ್ಪಸಂಖ್ಯಾತ ಘಟಕ ಮುಖಂಡ ಇರ್ಷಾದ ಮೋಮಿನ್ ಕೋರಿದ್ದಾರೆ.