ವಿದೇಶಕ್ಕಿಂತ ಭಾರತದ ಬಹುಭಾಷಾ ಸಂಸ್ಕೃತಿ ಭಿನ್ನ: ಪ್ರೊ. ಪ್ರಮೋದ್ ಪಾಂಡೆ

| Published : May 29 2024, 12:55 AM IST

ವಿದೇಶಕ್ಕಿಂತ ಭಾರತದ ಬಹುಭಾಷಾ ಸಂಸ್ಕೃತಿ ಭಿನ್ನ: ಪ್ರೊ. ಪ್ರಮೋದ್ ಪಾಂಡೆ
Share this Article
  • FB
  • TW
  • Linkdin
  • Email

ಸಾರಾಂಶ

ಇಂಗ್ಲಿಷ್ ಭಾಷೆಯು ಭಾರತದಲ್ಲಿ ಭಾರತೀಯ ಇಂಗ್ಲಿಷ್ ಆಗಿ ಪರಿವರ್ತನೆಗೊಳ್ಳುತ್ತಿದೆ. ಧ್ವನಿಯ ಮೂಲಕ ತಮಿಳು, ಮಲೆಯಾಳಿ ಇಂಗ್ಲಿಷ್ ಆಗಿಯೂ ಅದನ್ನು ನೋಡಬಹುದು. ಸ್ಥಳೀಯ ಭಾಷೆ ಮತ್ತು ಇಂಗ್ಲಿಷ್‌ಅನ್ನು ಒಂದೇ ಭಾಷೆಯಂತೆ ಮಾತನಾಡುತ್ತಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ವಿದೇಶಕ್ಕಿಂತ ಭಾರತದ ಬಹುಭಾಷಾ ಸಂಸ್ಕೃತಿಯು ಭಿನ್ನವಾಗಿದೆ ಎಂದು ಡೆಕ್ಕನ್ ಕಾಲೇಜು ಕುಲಪತಿ ಪ್ರೊ. ಪ್ರಮೋದ್ ಪಾಂಡೆ ತಿಳಿಸಿದರು.

ನಗರದ ಹುಣಸೂರು ರಸ್ತೆ ಮಾನಸಗಂಗೋತ್ರಿ ಭಾರತೀಯ ಭಾಷಾ ಸಂಸ್ಥಾನದಲ್ಲಿ ಮಂಗಳವಾರ ಆಯೋಜಿಸಿದ್ದ ಭಾರತೀಯ ಭಾಷೆಗಳು ಮತ್ತು ಒಂದು ಭಾಷಿಕ ಪ್ರದೇಶವಾಗಿ ಭಾರತ ಕುರಿತ ಸಮ್ಮೇಳನದಲ್ಲಿ ಮಾತನಾಡಿದ ಅವರು, ವಿದೇಶದಲ್ಲಿ ಹಲವು ಭಾಷೆಗಳಿದ್ದರೂ ಅವುಗಳು ಪರಸ್ಪರ ಮಿಶ್ರಣಗೊಳ್ಳುವುದಿಲ್ಲ. ಆದರೆ, ಭಾರತದಲ್ಲಿ ವಿವಿಧ ಭಾಷೆಗಳು ಮಿಶ್ರಣಗೊಂಡು ಹೊಸ ರೂಪ ಹೊಂದುತ್ತವೆ ಎಂದು ಹೇಳಿದರು.

ಇಂಗ್ಲಿಷ್ ಭಾಷೆಯು ಭಾರತದಲ್ಲಿ ಭಾರತೀಯ ಇಂಗ್ಲಿಷ್ ಆಗಿ ಪರಿವರ್ತನೆಗೊಳ್ಳುತ್ತಿದೆ. ಧ್ವನಿಯ ಮೂಲಕ ತಮಿಳು, ಮಲೆಯಾಳಿ ಇಂಗ್ಲಿಷ್ ಆಗಿಯೂ ಅದನ್ನು ನೋಡಬಹುದು. ಸ್ಥಳೀಯ ಭಾಷೆ ಮತ್ತು ಇಂಗ್ಲಿಷ್‌ಅನ್ನು ಒಂದೇ ಭಾಷೆಯಂತೆ ಮಾತನಾಡುತ್ತಾರೆ. ಈ ಸಹಜತೆಯೂ ಭಾಷಾ ವಲಯ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಅವರು ತಿಳಿಸಿದರು.

ಸ್ವರಗಳ ವಿಚಾರದಲ್ಲಿ ದಕ್ಷಿಣದ ಭಾಷೆಗಳು ಅದ್ಭುತ ರಚನೆಯನ್ನು ಹೊಂದಿದ್ದು, ಕನ್ನಡ ಭಾಷೆ ಒಂದು ಮಹತ್ವದ ಉದಾಹರಣೆಯಾಗಿ ನಿಲ್ಲುತ್ತದೆ. ಭಾರತೀಯ ಭಾಷೆಯಲ್ಲಿ ಸ್ವರಗಳ ಸಾಮ್ಯತೆಯನ್ನು ಕಾಣಬಹುದು. ಕೆಲವನ್ನು ಹೊರತುಪಡಿಸಿ ಬಹುತೇಕ ಭಾಷೆಗಳಲ್ಲಿ ಒಂದು ಲಯವಿದ್ದು, ವಿದೇಶಿ ಭಾಷೆಗಳಿಗೆ ಹೋಲಿಸಿದಾಗ ಇದು ಭಿನ್ನವಾಗಿ ನಿಲ್ಲುತ್ತದೆ ಎಂದರು.

ಇದಕ್ಕೂ ಮುನ್ನ ಸಿಐಐಎಲ್ ನಿರ್ದೇಶಕ ಪ್ರೊ. ಶೈಲೇಂದ್ರ ಮೋಹನ್‌ ಅವರು ಸಮ್ಮೇಳನವನ್ನು ಉದ್ಘಾಟಿಸಿ, ಭಾರತೀಯ ಭಾಷಾ ಪರಿವಾರ್ ಪೊರ್ಟಲ್ ಅನಾವರಣಗೊಳಿಸಿದರು.

ನಂತರ ಭಾರತ ಒಂದು ಸಂಸ್ಕೃತಿಕ ವಲಯ ಕುರಿತು ಪ್ರೊ. ಚಂದ್ರಭೂಷಣ್ ಶರ್ಮ, ಭಾರತೀಯ ಭಾಷಾ ಪರಿವಾರದ ವಂಶಾವಳಿ ಕುರಿತು ಪ್ರೊ. ಜ್ಞಾನೇಶ್ವರ ಚೌಬೆ ಮಾತನಾಡಿದರು. ಪಂಕಜ್‌ದ್ವಿವೇದಿ, ಪ್ರೊ. ಮೊಹಮ್ಮದ್ ಜಹಾಂಗೀರ್ ವಾರ್ಸಿ, ಡಾ. ಸುಜೋಯ್ ಸರ್ಕಾರ್ ಮೊದಲಾದವರು ಇದ್ದರು.