ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೌಜನ್ಯ ಮಾವ ವಿಠಲಗೌಡ ತಲೆಬುರುಡೆ ತಂದಿದ್ದ ಬಂಗ್ಲೆಗುಡ್ಡ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯಕ್ಕೆ ಎಸ್‌ಐಟಿ ಗಮನ ಹರಿಸಿದ್ದು, ಇದಕ್ಕೆ ಪೂರ್ವಭಾವಿಯಾಗಿ ಸೋಮವಾರ ಅರಣ್ಯ ಇಲಾಖೆಯ ಅಧಿಕಾರಿಗಳ ಜತೆ ಸುದೀರ್ಘ ಮಾತುಕತೆ ನಡೆಸಿದೆ.ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ಅವರು ಸೋಮವಾರ ಅಧಿಕಾರಿಗಳ ಜತೆ ಎಸ್‌ಐಟಿ ಕಚೇರಿಗೆ ಭೇಟಿ ನೀಡಿದ್ದು, ಬುರುಡೆ ಪ್ರಕರಣದ ತನಿಖಾಧಿಕಾರಿ ಜಿತೇಂದ್ರ ದಯಾಮ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.
ಕೆಲ ದಿನಗಳ ಹಿಂದೆ ಹೇಳಿಕೆ ನೀಡಿದ್ದ ವಿಠಲ ಗೌಡ, ಬಂಗ್ಲೆಗುಡ್ಡ ಅರಣ್ಯ ವ್ಯಾಪ್ತಿಯಲ್ಲಿ ಇನ್ನಷ್ಟು ಮಾನವ ಅಸ್ಥಿಪಂಜರ ನೋಡಿದ್ದಾಗಿ ತಿಳಿಸಿದ್ದರು. ಇದರ ಬೆನ್ನಲ್ಲೇ ಎಸ್‌ಐಟಿಯ ಈ ನಡೆ ಕುತೂಹಲಕ್ಕೆ ಕಾರಣವಾಗಿದೆ.ಬಂಗ್ಲೆಗುಡ್ಡ, ಮೀಸಲು ಅರಣ್ಯ ಪ್ರದೇಶವಾಗಿದ್ದರಿಂದ ಅದರ ವಿಸ್ತೀರ್ಣ, ಎಷ್ಟು ಮರಗಳಿವೆ, ಮರಗಳ ವಯಸ್ಸೆಷ್ಟು ಇತ್ಯಾದಿ ಮಾಹಿತಿಗಳನ್ನು ಕಲೆ ಹಾಕುವುದು ಸೇರಿದಂತೆ ಅಸ್ಥಿಪಂಜರಗಳು ಇರಬಹುದಾದ ಸಾಧ್ಯತೆಗಳ ಬಗ್ಗೆಯೂ ಶೋಧ ನಡೆಸಲು ಎಸ್‌ಐಟಿ ಮುಂದಾಗಿದೆ ಎನ್ನಲಾಗಿದೆ.ತನಿಖೆಯ ಬ್ಲ್ಯೂಪ್ರಿಂಟ್ ರೆಡಿ:
ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಅಧಿಕಾರಿಗಳು ಸೋಮವಾರ ಯಾರನ್ನೂ ವಿಚಾರಣೆ ಮಾಡಿಲ್ಲ. ಹೀಗಾಗಿ ಬಂಗ್ಲೆಗುಡ್ಡ ಅರಣ್ಯ ಪ್ರದೇಶದಲ್ಲಿ ಸಮೀಕ್ಷೆ ಅಥವಾ ಕಾರ್ಯ ನಡೆಸಬಹುದು ಎಂಬ ನಿರೀಕ್ಷೆಯಿತ್ತು. ಆದರೆ ಇಂತಹ ಯಾವ ಕಾರ್ಯಾಚರಣೆ ನಡೆದಿಲ್ಲ. ತನಿಖೆ ಕುರಿತು ಬ್ಲ್ಯೂ ಪ್ರಿಂಟ್ ಮಾಡಿಟ್ಟುಕೊಂಡಿರುವ ಎಸ್‌ಐಟಿ ಹಂತ ಹಂತವಾಗಿ ಕಾರ್ಯಾಚರಣೆ ನಡೆಸಲು ಮುಂದಾಗಿದೆ.ಮೊದಲು ಅರಣ್ಯ ಇಲಾಖೆ ವತಿಯಿಂದ ಬಂಗ್ಲೆಗುಡ್ಡ ಅರಣ್ಯದ ಸರ್ವೇ ನಡೆಸಿ, ಬಳಿಕ ಎಸ್‌ಐಟಿ ತಂಡ ಕಾಡಿನೊಳಗೆ ಶೋಧ ಕಾರ್ಯಾಚರಣೆ ನಡೆಸುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಬಂಗ್ಲೆಗುಡ್ಡ ಅರಣ್ಯ ವ್ಯಾಪ್ತಿಯಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.ಶವ ಉತ್ಖನನಕ್ಕೆ ಅರ್ಜಿ: ಎಸ್‌ಐಟಿಗೆ ನೋಟಿಸ್‌ಧರ್ಮಸ್ಥಳ ಗ್ರಾಮದಲ್ಲಿ ಸ್ಥಳೀಯ ನಿವಾಸಿಗಳಿಬ್ಬರು ಗುರುತಿಸಿರುವ ಜಾಗಗಳಲ್ಲಿ ಸ್ಥಳ ಪರಿಶೀಲನೆ, ಶವಗಳ ಉತ್ಖನನಕ್ಕೆ ಕಾಲಮಿತಿಯೊಳಗೆ ಕ್ರಮ ಕೈಗೊಳ್ಳಲು ಸೂಚಿಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.ಧರ್ಮಸ್ಥಳ ಗ್ರಾಮದ ಪಾಂಡುರಂಗ ಗೌಡ ಹಾಗೂ ತುಕಾರಾಂ ಗೌಡ ಸಲ್ಲಿಸಿರುವ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ನ್ಯಾಯಪೀಠ ಈ ಆದೇಶ ಮಾಡಿದೆ. ಅಲ್ಲದೆ, ಅರ್ಜಿಗೆ ಸಂಬಂಧಿಸಿ ಮಾಹಿತಿ ಪಡೆದು ನ್ಯಾಯಾಲಯಕ್ಕೆ ಒದಗಿಸುವಂತೆ ವಿಶೇಷ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ಅವರಿಗೆ ಸೂಚಿಸಿ ವಿಚಾರಣೆಯನ್ನು ಸೆ.18ಕ್ಕೆ ಮುಂದೂಡಿತು.ಅರ್ಜಿದಾರರ ಪರ ವಕೀಲರು, ಪಾಂಡುರಂಗ ಗೌಡ ಹಾಗೂ ತುಕಾರಾಂ ಗೌಡ ಅವರು ಆ.6 ಮತ್ತು 29ರಂದು ಎಸ್‌ಐಟಿಗೆ ಮನವಿ ಸಲ್ಲಿಸಿ ತಾವು ಗುರುತಿಸಿರುವ ವಿವಿಧ ಸ್ಥಳಗಳಲ್ಲಿ ಮೃತದೇಹಗಳ ಕೆಲ ಭಾಗಗಳು ಪ್ರಾಣಿಗಳು ಹಾಗೂ ಮನುಷ್ಯರಿಗೆ ಗೋಚರಿಸುವಂತಿದೆ. ಆ ಕುರಿತು ಶೀಘ್ರ ಸ್ಥಳ ಪರಿಶೀಲನೆ ನಡೆಸುವಂತೆ ಕೋರಿದ್ದರು. ಆದರೂ ಎಸ್‌ಐಟಿ ಕ್ರಮ ವಹಿಸಿಲ್ಲ. ಹಾಗಾಗಿ ಈ ನಿಟ್ಟಿನಲ್ಲಿ ಎಸ್‌ಐಟಿಗೆ ಸೂಕ್ತ ನಿರ್ದೇಶನ ನೀಡಬೇಕು ಕೋರಿದರು.