ಪಿಯುಸಿ ಹಂತದಲ್ಲೇ ಭವಿಷ್ಯದ ಶಿಕ್ಷಣ ನಿರ್ಧಾರ: ಶಾಸಕ ತುನ್ನೂರು

| Published : Jun 21 2024, 01:09 AM IST

ಪಿಯುಸಿ ಹಂತದಲ್ಲೇ ಭವಿಷ್ಯದ ಶಿಕ್ಷಣ ನಿರ್ಧಾರ: ಶಾಸಕ ತುನ್ನೂರು
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳಿಗೆ ಪಿಯುಸಿ ಹಂತದ ಅಭ್ಯಾಸದ ದಿನಗಳು ಪ್ರಮುಖವಾಗಿವೆ. ಆ ದಿನಗಳಲ್ಲಿ ಅವರಲ್ಲಿರುವ ನಾನಾ ಪ್ರತಿಭೆಗಳು ವಿಕಾಸವಾಗಿ ಮುಂದೆ ಅಭ್ಯಾಸ ಮಾಡಬೇಕಾದ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಂಡು, ತಮ್ಮ ಭವಿಷ್ಯ ರೂಪಿಸಿಕೊಳ್ಳಲು ನಿರ್ಧಾರ ತೆಗೆದುಕೊಳ್ಳುವುದಾಗಿದೆ.

ಕನ್ನಡಪ್ರಭ ವಾರ್ತೆ, ಯಾದಗಿರಿ

ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣಕ್ಕೆ ಹೆಚ್ಚು ಮಹತ್ವವಿದೆ. ವಿದ್ಯಾರ್ಥಿಗಳಿಗೆ ಪಿಯುಸಿ ಹಂತದ ಅಭ್ಯಾಸದ ದಿನಗಳು ಪ್ರಮುಖವಾಗಿವೆ. ಆ ದಿನಗಳಲ್ಲಿ ಅವರಲ್ಲಿರುವ ನಾನಾ ಪ್ರತಿಭೆಗಳು ವಿಕಾಸವಾಗಿ ಮುಂದೆ ಅಭ್ಯಾಸ ಮಾಡಬೇಕಾದ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಂಡು, ತಮ್ಮ ಭವಿಷ್ಯ ರೂಪಿಸಿಕೊಳ್ಳಲು ನಿರ್ಧಾರ ತೆಗೆದುಕೊಳ್ಳುವುದಾಗಿದೆ. ಈ ದಿಶೆಯಲ್ಲಿ ವಿದ್ಯಾರ್ಥಿಗಳು ಏಕಾಗ್ರತೆ, ಪರಿಶ್ರಮದಿಂದ ಅಭ್ಯಾಸ ಮಾಡಿ, ತಾವು ಕಂಡ ಗುರಿ ತಲುಪಬೇಕು ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಸಲಹೆ ನೀಡಿದರು.

ನಗರದ ಹೊರ ವಲಯದಲ್ಲಿರುವ ಆರ್ಯಭಟ್ಟ ಅಂತಾರಾಷ್ಟ್ರೀಯ ಅಕಾಡೆಮಿ ಕಾಲೇಜಿನಲ್ಲಿ ಪಿಯುಸಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ 4 ದಿನಗಳ ಕಾರ್ಯಾಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಸಕ್ತ ದಿನಗಳಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸುವುದು ತಂದೆ-ತಾಯಿಗೆ ಒಂದು ಸವಾಲಾಗಿದೆ. ಶಿಕ್ಷಣದಲ್ಲಿಯೂ ಕೂಡ ಅಪಾರ ಬದಲಾವಣೆ ಕಾಣುತ್ತಿದ್ದೇವೆ ಎಂದರು.

ಮಕ್ಕಳು ಪಿಯುಸಿ ಅಭ್ಯಾಸದ ನಂತರ ಎಂಜಿನಿಯರ್ ಅಥವಾ ವೈದ್ಯಕೀಯ ಅಭ್ಯಾಸ ಮಾಡಬೇಕೆಂಬುದು ಬಹುತೇಕ ಪೋಷಕರ ಆಸೆ ಆಗಿರುತ್ತದೆ. ಆದರೆ, ಅದಕ್ಕೂ ಮಿಗಿಲಾಗಿ ಹಲವಾರು ಕೋರ್ಸ್ ಗಳು ಅಭ್ಯಾಸ ಮಾಡಲು ಲಭ್ಯ ಇವೆ. ಅಲ್ಲದೇ ಭವಿಷ್ಯದಲ್ಲಿ ಉತ್ತಮ ಸಂಬಳ ಕೂಡ ಸಿಗುತ್ತದೆ. ನಾವು ಇವೆರಡನ್ನೂ ಹೊರತುಪಡಿಸಿ, ಚಿಂತನೆ ಮಾಡುವುದು ಅವಶ್ಯಕವಾಗಿದೆ. ಈ ಕಾರ್ಯಾಗಾರ ವಿದ್ಯಾರ್ಥಿಗಳಿಗೆ ಹೊಸ ಆಶಾ ಭಾವನೆ ಮೂಡಿಸಲಿ ಎಂದರು.

ಸಂಪನ್ಮೂಲ ವ್ಯಕ್ತಿಗಳಾಗಿ ಉಪನ್ಯಾಸ ನೀಡಿದ ಹೈದ್ರಾಬಾದ್‌ನ ಜಗನ್ನಾಥ ಜೋಷಿ, ನಮ್ಮ ನಾಡಿನಲ್ಲಿ ಪಿಯುಸಿ ಅಭ್ಯಾಸದ ನಂತರ ವಿದ್ಯಾರ್ಥಿಗಳಿಗೆ 2000ಕ್ಕೂ ಹೆಚ್ಚು ವಿಭಿನ್ನ ಕೋರ್ಸ್ ಗಳಿವೆ. ಅವರು ಗಮನಹರಿಸಿ, ಸೂಕ್ತ ಆಯ್ಕೆ ಮಾಡಿಕೊಂಡು ಅಭ್ಯಾಸ ಮಾಡಿದಲ್ಲಿ ಅವರ ಬದುಕಿನ ಚಿತ್ರಣವೇ ಬದಲಾಗಲಿದೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಆರ್ಯಭಟ್ಟ ಇಂಟರನ್ಯಾಷನಲ್ ಅಕಾಡೆಮಿ ಅಧ್ಯಕ್ಷ ಸುಧಾಕರರಡ್ಡಿ ಮಾಲಿ ಪಾಟೀಲ್ ಅನಪೂರ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗ ಶೈಕ್ಷಣಿಕವಾಗಿ ಹಿಂದುಳಿದಿದೆ. ಪಿಯುಸಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ಹಾಗೂ ಅವರ ಪೋಷಕರಲ್ಲಿ ಹಲವಾರು ಗೊಂದಲಗಳಿರುವುದನ್ನು ನಾವೂ ಗಮನಿಸಿ, ಕಳೆದ 3 ವರ್ಷಗಳಿಂದ ಕಾಲೇಜಿನಲ್ಲಿ ವಿಷಯತಜ್ಞರಿಂದ ಅಗತ್ಯ ಮಾಹಿತಿಗಳನ್ನು, ಮಾರ್ಗದರ್ಶನ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ವೇದಿಕೆ ಮೇಲೆ ಅಕಾಡೆಮಿ ನಿರ್ದೇಶಕ ಪಿ. ಅರವಿಂದಾಕ್ಷಣ, ಪ್ರಾಂಶುಪಾಲರಾದ ಮಾಧವಿ ಸಿಂಗ್, ವೆಂಕಟರೆಡ್ಡಿ ಪಾಟೀಲ್ ಇದ್ದರು. ಕಾಲೇಜು ಪ್ರಾಂಶುಪಾಲರಾದ ಡಾ. ಮಂಜುನಾಥ ಸ್ವಾಗತಿಸಿದರು. ಆಡಳಿತಾಧಿಕಾರಿ ಅರವಿಂದರೆಡ್ಡಿ ವಂದಿಸಿದರು. ಕಾರ್ಯಕ್ರಮದಲ್ಲಿ ನೂರಾರು ವಿಧ್ಯಾರ್ಥಿಗಳು ಭಾಗವಹಿಸಿದ್ದರು.