ಭೀಮಾ ನೀರಿಗೆ ನ್ಯಾಯಾಂಗದ ಮೊರೆಗೆ ನಿರ್ಧಾರ

| Published : Mar 25 2024, 12:48 AM IST

ಸಾರಾಂಶ

ಭೀಮಾ ನದಿ ನೀರಿನಲ್ಲಿ ನಮ್ಮ ಪಾಲು ಪಡೆಯುವ ನಿಟ್ಟಿನಲ್ಲಿ ಸುಪ್ರಿಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ನ್ಯಾಯಾಂಗದ ಮೆಟ್ಟಿಲು ಹತ್ತೋಣ: ಶಾಸಕ ಯಶವಂತ್ರಾಯ ಪಾಟೀಲ್

ಕನ್ನಡಪ್ರಭ ವಾರ್ತೆ ಚವಡಾಪುರ

ಭೀಮಾ ನದಿ ನೀರು ಹಂಚಿಕೆ ಕುರಿತು ಬಚಾವತ್ ನ್ಯಾಯಾಧಿಕರಣ ತೀರ್ಪು ಬಂದಿದ್ದರೂ ಕೂಡ ನಮ್ಮ ಭಾಗಕ್ಕೆನೀರು ಸಿಗುತ್ತಿಲ್ಲ ಎನ್ನುವ ಕೊರಗು ಎಲ್ಲರಿಗೂ ಇದೆ. ಹೀಗಾಗಿ ಭೀಮಾ ನದಿ ನೀರಿನಲ್ಲಿ ನಮ್ಮ ಪಾಲು ಪಡೆಯುವ ನಿಟ್ಟಿನಲ್ಲಿ ಸುಪ್ರಿಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ನ್ಯಾಯಾಂಗದ ಮೆಟ್ಟಿಲು ಹತ್ತೋಣ ಎಂದು ಇಂಡಿ ಕ್ಷೇತ್ರದ ಶಾಸಕ ಯಶವಂತ್ರಾಯ ಪಾಟೀಲ್ ಹೇಳಿದರು.

ಅಫಜಲ್ಪುರ ಪಟ್ಟಣದ ಅಂಬೇಡ್ಕರ್‌ ವೃತ್ತದಲ್ಲಿ ಜೆಡಿಎಸ್ ಮುಖಂಡ ಶಿವಕುಮಾರ ನಾಟಿಕಾರ ಅವರು ಹಮ್ಮಿಕೊಂಡಿರುವ ಭೀಮಾ ನದಿಗೆ ನೀರು ಹರಿಸಿ ರೈತರ ಜೀವ ಉಳಿಸಿ ಅನಿರ್ಧಿಷ್ಟ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದರು.

ನಾವೆಲ್ಲರೂ ಭೀಮಾ ನದಿ ದಂಡೆಯ ತಾಲೂಕುಗಳ ಜನರಾಗಿದ್ದೇವೆ. ಜನ ನಮಗೆ ಮತ ನೀಡಿ ಗೆಲ್ಲಿಸಿದ್ದು ಅವರ ಕಷ್ಟಕ್ಕೆ ಸ್ಪಂದಿಸಲಿ ಎಂದು ಹೀಗಾಗಿ ಭೀಮಾ ನದಿ ದಂಡೆಯ ಜನರ ಹಿತರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಹೀಗಾಗಿ ಭೀಮಾ ನದಿಗೆ ನೀರು ಹರಿಸಿ ಈ ಭಾಗದ ಜನ, ಜಾನುವಾರುಗಳ ಜೀವ ರಕ್ಷಣೆಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದ ಅವರು, ಯಾವುದೇ ಸರ್ಕಾರವಾಗಿರಲಿ ಭೀಮಾ ನದಿಯನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎನ್ನುವ ಅಪರಾಧಿ ಭಾವನೆ ಸರ್ಕಾರಗಳಿಗೆ ಇದೆ. ಆದರೆ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಭೀಮೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಭೀಮಾ ನದಿ ದಂಡೆಯಲ್ಲಿರುವ ಎಲ್ಲಾ ತಾಲೂಕುಗಳ ಶಾಸಕರು, ಜನಪ್ರತಿನಿಧಿಗಳು, ಹೋರಾಟಗಾರರು, ವಕೀಲರು, ಸಾರ್ವಜನಿಕರ ಸಮೀತಿ ರಚನೆ ಮಾಡಿ ನ್ಯಾಯಾಂಗ ಹೋರಾಟ ಮುಂದುವರೆಸೋಣ ಎಂದರು.

ಶಾಸಕ ಎಂ.ವೈ. ಪಾಟೀಲ್ ಮಾತನಾಡಿ, ಭೀಮಾ ನದಿಗೆ ನಮ್ಮ ಹಕ್ಕಿನ ನೀರು ಪಡೆಯಲು ಎಲ್ಲರೂ ಕೂಡಿ ಹೋರಾಟ ಮಾಡೋಣ. ಸಧ್ಯಕ್ಕೆ ಎದುರಾಗಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಏನೇನು ಮಾರ್ಗಗಳಿವೆ ಅವುಗಳನ್ನು ನಾವು ಎಡಬಿಡದೆ ಮಾಡುತ್ತಿದ್ದೇವೆ ಎಂದರು.

ಶಿವಕುಮಾರ ನಾಟಿಕಾರ ಮಾತನಾಡಿ, 1969ರಲ್ಲಿ ಬಂದ ಬಚಾವತ್ ತೀರ್ಪಿನ ಪ್ರಕಾರವೇ ನಮ್ಮ ಪಾಲಿನ ನೀರು ನಮಗೆ ಸಿಗುತ್ತಿಲ್ಲ. ಮಹಾರಾಷ್ಟ್ರದವರು ನಮ್ಮ ಪಾಲಿನ ನೀರನ್ನು ಉಜನಿ ಜಲಾಶಯದಿಂದ ಸುರಂಗ ಮಾರ್ಗದ ಮೂಲಕ ಶೀನಾ ನದಿಗೆ ಹರಿಸಿದ್ದಾರೆ, ಕೇಂದ್ರ ಜಲ ಆಯೋಗದ ಅನುಮತಿ ಇಲ್ಲದೆ ಸಾಕಷ್ಟು ನೀರಾವರಿ ಯೋಜನೆಗಳನ್ನು ಮಾಡಿಕೊಂಡಿದ್ದಾರೆ. ಹೀಗಾಗಿ ನಾವು ಕೆಟ್ಟ ದುಷ್ಪರಿಣಾಮ ಅನುಭವಿಸುವಂತಾಗಿದೆ. ಬಚಾವತ್ ತೀರ್ಪು ಬಂದು 4 ದಶಕ ಕಳೆದರೂ ನಮ್ಮ ಪಾಲಿನ ನೀರು ನಾವು ಕೇಳಿಲ್ಲ, ಈಗಿನಿಂದಲಾದರೂ ಕೇಳಬೇಕಲ್ಲ? ಭವಿಷ್ಯತ್ತನ್ನು ಗಮನದಲ್ಲಿಟ್ಟುಕೊಂಡು ಬಚಾವತ್ ತೀರ್ಪಿನ ಪ್ರಕಾರ ನಮ್ಮ ಪಾಲಿನ ನೀರು ಪಡೆಯಲು ಸಂಘಟಿತರಾಗಿ ಕೇಳಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಅರುಣಕುಮಾರ ಪಾಟೀಲ್, ಮಕ್ಬೂಲ್ ಪಟೇಲ್, ಮಲ್ಲಿಕಾರ್ಜುನ ಸಿಂಗೆ, ಚಿದಾನಂದ ಮಠ, ಬಸಣ್ಣ ಗುಣಾರಿ, ಜಮೀಲ ಗೌಂಡಿ, ಮಾಂತು ಬಳೂಂಡಗಿ ಸೇರಿದಂತೆ ಅನೇಕರು ಇದ್ದರು.