ಕನ್ನಡಪ್ರಭ ವಾರ್ತೆ ದಾವಣಗೆರೆ
ಭದ್ರಾ ಡ್ಯಾಂನಿಂದ ನಾಲೆಗೆ ನೀರು ಹರಿಸುವ ವಿಚಾರವಾಗಿ ಸಿಎಂ, ಜಲ ಸಂಪನ್ಮೂಲ ಸಚಿವರ ಜೊತೆ ತಾವು ಮೊನ್ನೆ ಚರ್ಚಿಸಿದ್ದು, ರೈತರು, ತಜ್ಞರ ಜೊತೆಗೆ ಚರ್ಚಿಸಿದ ನಂತರ ಆ.18ರಂದು ಭದ್ರಾ ಕಾಡಾ ಸಮಿತಿ ಸಭೆಯಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಭರವಸೆ ನೀಡಿದ್ದಾರೆ.ನಗರದಲ್ಲಿ ಶನಿವಾರ ಸ್ವಾತಂತ್ರ್ಯ ದಿನಾಚರಣೆ ನಂತರ ಜೆಜೆಎಂ ಕಾಲೇಜಿನ ಸಭಾಂಗಣದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಭದ್ರಾ ಡ್ಯಾಂನಿಂದ ನಾಲೆಗೆ ನೀರು ಬಿಡುವಂತೆ ಭಾರತೀಯ ರೈತ ಒಕ್ಕೂಟದ ಪ್ರೊ. ಸಿ.ನರಸಿಂಹಪ್ಪ, ಮಾಜಿ ಸಚಿವ ಎಸ್.ಎ. ರವೀಂದ್ರನಾಥ ನೇತೃತ್ವದಲ್ಲಿ ಒತ್ತಾಯಿಸಿ ಮನವಿ ಅರ್ಪಿಸಿದ್ದಾರೆ ಎಂದರು.
ಡ್ಯಾಂನಿಂದ ನಾಲೆಗೆ ನೀರು ಬಿಡುವ ಬಗ್ಗೆ ತಾಂತ್ರಿಕ ಸಮಿತಿ, ತಜ್ಞರು, ರೈತರ ಜೊತೆಗೆ ಚರ್ಚೆ ಇದೆ. ಸುಧೀರ್ಘ ಚರ್ಚೆಯ ನಂತರ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಆ.18ರಂದು ಭದ್ರಾ ಕಾಡಾ ಸಮಿತಿ ಸಭೆ ನಡೆಯಲಿದ್ದು, ಹಿಂದೆಲ್ಲಾ ಇಂತಹ ಪರಿಸ್ಥಿತಿಯಲ್ಲಿ ಏನು ಮಾಡಲಾಗಿತ್ತೆಂಬುದನ್ನೆಲ್ಲಾ ಅವಲೋಕಿಸಿ, ನಾಲೆಗೆ ನೀರು ಬಿಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಯಾರ ಹೊಟ್ಟೆಯ ಮೇಲೂ ಹೊಡೆಯುವುದಿಲ್ಲ. ನಮಗೆ ಎಲ್ಲ ರೈತರೂ ಒಂದೇ. ಕುಡಿಯುವ ನೀರು, ರೈತರಿಗೂ ನ್ಯಾಯ ಕೊಡಿಸಲು ಬದ್ಧರಿದ್ದೇವೆ. ತುಂಗಾದಿಂದ ಭದ್ರಾಗೆ ನೀರು ಲಿಫ್ಟಿಂಗ್ ಮಾಡಬೇಕು. ಅಲ್ಲಿ 2-3 ಪಿಲ್ಲರ್ ಕಾಮಗಾರಿ ಬಾಕಿ ಇದ್ದು, ಅರಣ್ಯ ಇಲಾಖೆಯಿಂದಲೂ ಕ್ಲಿಯರೆನ್ಸ್ ಸಿಕ್ಕಿದೆ. ಸದ್ಯಕ್ಕೆ ಮಳೆಗಾಲದ ಹಿನ್ನೆಲೆ ಕಂಬಕ್ಕೆ ಕಾಂಕ್ರಿಟ್ ಹಾಕಲು ಆಗುತ್ತಿಲ್ಲ. ಮಳೆ ನಿಂತು, ಒಂದಿಷ್ಟು ಬರುವು ಬರುತ್ತಿದ್ದಂತೆಯೇ ಆ ಕಾಮಗಾರಿ ಸಹ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.
ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ ₹3 ಸಾವಿರ ಕೋಟಿ ಬಿಡುಗಡೆ ಆಗಬೇಕಿದೆ. ಈ ಬಗ್ಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ನಾವ್ಯಾರೂ ಸುಮ್ಮನೇ ಕುಳಿತಿಲ್ಲ. ಕೆಲಸ ಮಾಡುತ್ತಿದ್ದೇವೆ. ಇನ್ನೂ ಮಳೆ ಬರುವ ನಿರೀಕ್ಷೆ ಇದ್ದು, ನಾವೂ ಸಹ ಉತ್ತಮ ಮಳೆ, ಬೆಳೆಗಾಗಿ ಪ್ರಾರ್ಥಿಸುತ್ತಿದ್ದೇವೆ. ಮಳೆಗೆ ಇನ್ನೂ ಸಮಯವಿದೆ. ಭದ್ರಾ ಡ್ಯಾಂಗೆ ಒಳಹರಿವು ಹೆಚ್ಚಾಗುವ ವಿಶ್ವಾಸವೂ ಇದೆ. ಈಗ ಭದ್ರಾ ಡ್ಯಾಂನಲ್ಲಿ 171 ಅಡಿ ನೀರಿದ್ದು, ಇನ್ನೂ 10 ಅಡಿ ನೀರು ಬಂದರೆ ಡ್ಯಾಂ ಭರ್ತಿಯಾಗಲಿದೆ ಎಂದು ವಿವರಿಸಿದರು.
ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಜೊತೆಗೆ ಮಾತನಾಡಿದ್ದೇವೆ. ಆ.18ರ ಭದ್ರಾ ಕಾಡಾ ಸಮಿತಿ ಸಭೆಯಲ್ಲೂ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಅಲ್ಲಿವರೆಗೆ ರೈತರೂ ಸಹಕರಿಸಬೇಕು. ಆ.15ರ ಮಧ್ಯರಾತ್ರಿಯಿಂದ ನೀರು ಬಿಡದಿದ್ದರೆ, ಆ.16ರಿಂದ ಹರಿಹರದಿಂದ ಹೋರಾಟ ನಡೆಸುವುದಾಗಿ ರೈತ ಮುಖಂಡರು ಹೇಳಿದ್ದರು. ಆ ಎಲ್ಲರಿಗೂ ಮನವರಿಕೆ ಮಾಡಿಕೊಟ್ಟಿದ್ದೇವೆ. ಕಾಡಾ ಸಮಿತಿ ಸಭೆಯಲ್ಲಿ ರೈತರಿಗೆ ಅನುಕೂಲ ಆಗುವಂತೆ ಸೂಕ್ತ ನಿರ್ಧಾರವನ್ನೇ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ, ಬಯಲುಸೀಮೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಚ್.ಬಿ.ಮಂಜಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಮುದೇಗೌಡ್ರ ಗಿರೀಶ, ಭಾರತೀಯ ರೈತ ಒಕ್ಕೂಟದ ಅಧ್ಯಕ್ಷ ಶಾಮನೂರು ಎಚ್.ಆರ್. ಲಿಂಗರಾಜ, ಆವರಗೊಳ್ಳ ಬಿ.ಎಂ. ಷಣ್ಮುಖಯ್ಯ, ಆರ್.ಎಚ್.ನಾಗಭೂಷಣ್, ಮಾಗಾನಹಳ್ಳಿ ಬಿ.ಕೆ.ಪರಶುರಾಮ, ಜಿ.ಎಸ್. ಮಂಜುನಾಥ ಗಡಿಗುಡಾಳ, ಬೂದಾಳ್ ಬಾಬು, ಎ.ನಾಗರಾಜ ಇತರರು ಇದ್ದರು. ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ₹100 ಕೋಟಿಗೆ ಕ್ರಿಯಾಯೋಜನೆದಾವಣಗೆರೆ: ನಾನು ಊರಲ್ಲಿ ಇದ್ದರೂ, ಇಲ್ಲದಿದ್ದರೂ ಕರೆಕ್ಟ್ ಆಗಿಯೇ ಕೆಲಸ ಮಾಡುತ್ತೇವೆ. ಇಲ್ಲಿನ ಪ್ರತಿ ಮಾಹಿತಿಯೂ ನನಗೆ ಬರುತ್ತದೆ. ಸ್ವಚ್ಛ ಮತ್ತು ಪ್ರಾಮಾಣಿಕ ಆಡಳಿತವನ್ನೇ ನೀಡುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬರ ಸೇರಿದಂತೆ ಎಲ್ಲ ವಿಚಾರದ ಬಗ್ಗೆ ನಮಗೆ ಮಾಹಿತಿ ಇದ್ದು, ಪ್ರತಿಯೊಂದರ ಮಾಹಿತಿ, ಮಿನಿಟ್ ಟು ಮಿನಿಟ್ ಕಾರ್ಯಕ್ರಮದ ವಿವರ ನನಗೆ ಬರುತ್ತದೆ. ಪ್ರತಿಯೊಂದು ಮಾಹಿತಿ ನೋಟಿಸ್ ಬೋರ್ಡ್‌ಗೆ ಹಾಕಿ ನೀಡುತ್ತೇವೆ. ದಾವಣಗೆರೆಯ ಕೆ.ಎಸ್.ಬಸವಂತಪ್ಪಗೆ ಸಚಿವ ಸ್ಥಾನ ನೀಡಿದ್ದು, ಒಳ್ಳೆಯ ಅಭಿವೃದ್ಧಿ ಕೆಲಸ ಮಾಡಲಿ. ಜಿಲ್ಲೆಯ 22 ಕೆರೆಗಳನ್ನು ತುಂಬಿಸುವ ಕಾಮಗಾರಿಗೆ ಡಿಎ ಪೈಪ್ ಅಳವಡಿಸಲು ಸೂಚಿಸಿದ್ದೇನೆ. ತುಂಗಭದ್ರಾ ನದಿ ನೀರು ಹಾಳಾಗದಂತೆ ತಡೆಯಲು ಟ್ರೀಟ್ ಮೆಂಟ್ ಪ್ಲಾಂಟ್ ಮಾಡಲು ಸೂಚಿಸಲಾಗಿದೆ ಎಂದು ತಿಳಿಸಿದರು.ದಾವಣಗೆರೆ ಜಿಲ್ಲೆಯ ಕೆರೆಗಳನ್ನು ಮಳೆಗಾಲದಲ್ಲಿ ತುಂಬಿಸುವ ಬಗ್ಗೆ ಮಾಸ್ಟರ್ ಪ್ಲಾನ್ ಮಾಡಿದ್ದೇವೆ. ಜಗಳೂರು ತಾಲೂಕಿನಲ್ಲಿ ಕಾಮಗಾರಿ ಶುರುವಾಗಿದ್ದು, ಭರಮಸಾಗರ ಭಾಗದಲ್ಲೂ ಕೆಲಸ ಸಾಗಿದೆ. ಸಾಸ್ವೆಹಳ್ಳಿ, ಕಾಡಜ್ಜಿ, ಆವರಗೆರೆ ಕೆರೆಗಳನ್ನೂ ತುಂಬಿಸಲಾಗುವುದು. ದಾವಣಗೆರೆ ಆವರಗೆರೆ-ಬೇತೂರು ಮಾರ್ಗದಲ್ಲಿ ಸಾಗುವ ಹಳ್ಳದ ಪಕ್ಕೆ ತಾತ್ಕಾಲಿಕವಾಗಿ ರಸ್ತೆಯ ಕಾಮಗಾರಿ ಮಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ₹100 ಕೋಟಿ ಕ್ರಿಯಾಯೋಜನೆ ಸಲ್ಲಿಸಬೇಕಿದೆ. ಕೇಂದ್ರ ಶೇ.25 ಅನುದಾನ ನೀಡಬೇಕು. ಕೇಂದ್ರ, ರಾಜ್ಯ ಸರ್ಕಾರದ ಜೊತೆಗೆ ಮಹಾ ನಗರ ಪಾಲಿಕೆಯ ಅನುದಾನ ಸೇರಿಸಿ, ಸುಮಾರು ₹150 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾಗಿ ಕೈಗೊಳ್ಳುವ ಉದ್ದೇಶವಿದೆ ಎಂದು ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹೇಳಿದರು.