ಐತಿಹಾಸಿಕ ಹಿನ್ನೆಲೆಯ ಮಡಿಕೇರಿ ದಸರಾವನ್ನು ವರ್ಷದಿಂದ ವರ್ಷಕ್ಕೆ ವಿಜೃಂಭಣೆಯಿಂದ ಜನೋತ್ಸವ ದಸರಾವನ್ನಾಗಿ ಆಚರಿಸುವಂತಾಗಬೇಕು. ಆ ನಿಟ್ಟಿನಲ್ಲಿ ಸಾರ್ವಜನಿಕ ಸಭೆ ಕರೆದು ಬೈಲಾ ತಿದ್ದುಪಡಿಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಶಾಸಕ ಡಾ.ಮಂತರ್ ಗೌಡ ತಿಳಿಸಿದ್ದಾರೆ.
ಮಡಿಕೇರಿ: ಐತಿಹಾಸಿಕ ಹಿನ್ನೆಲೆಯ ಮಡಿಕೇರಿ ದಸರಾವನ್ನು ವರ್ಷದಿಂದ ವರ್ಷಕ್ಕೆ ವಿಜೃಂಭಣೆಯಿಂದ ಜನೋತ್ಸವ ದಸರಾವನ್ನಾಗಿ ಆಚರಿಸುವಂತಾಗಬೇಕು. ಆ ನಿಟ್ಟಿನಲ್ಲಿ ಸಾರ್ವಜನಿಕ ಸಭೆ ಕರೆದು ಬೈಲಾ ತಿದ್ದುಪಡಿಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಶಾಸಕ ಡಾ.ಮಂತರ್ ಗೌಡ ತಿಳಿಸಿದ್ದಾರೆ.ನಗರದ ರೆಡ್ಬ್ರಿಕ್ಸ್ ಸಂಸ್ಥೆಯ ಸತ್ಕಾರ ಸಭಾಂಗಣದಲ್ಲಿ ದಸರಾ ದಶಮಂಟಪ ಸಮಿತಿ ಹಾಗೂ 62 ವಿವಿಧ ಸಾರ್ವಜನಿಕ ಸಂಘ ಸಂಸ್ಥೆಗಳಿಂದ ಮಂಗಳವಾರ ಏರ್ಪಡಿಸಲಾಗಿದ್ದ ಪೌರ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ದಸರಾ ಸಿದ್ಧತೆಯನ್ನು ಏಪ್ರಿಲ್ ತಿಂಗಳಿನಿಂದಲೇ ಅಗತ್ಯ ತಯಾರಿ ಮಾಡಿಕೊಳ್ಳಬೇಕು, ಮಂಟಪ ನಿರ್ಮಾಣಕ್ಕಾಗಿ ಹಲವರು ದುಡಿಯುತ್ತಾರೆ. ಮಡಿಕೇರಿ ದಸರಾದಲ್ಲಿ ಕರಗ ಉತ್ಸವದ ಜೊತೆಗೆ ಶೋಭಾಯಾತ್ರೆ ಅತೀ ಮುಖ್ಯ. ಆ ನಿಟ್ಟಿನಲ್ಲಿ ಮಂಟಪ ಸಮಿತಿಗೆ ಸಾಧ್ಯವಾದಷ್ಟು ಹೆಚ್ಚಿನ ಅನುದಾನ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಶಾಸಕರು ಹೇಳಿದರು.ಅಭಿವೃದ್ಧಿಗೆ ಸಂಬಂಧಿಸಿದಂತೆ ಹಿರಿಯರ ಸಲಹೆ, ಮಾರ್ಗದರ್ಶನದಂತೆ ನಡೆಯಲಾಗುವುದು, ದಸರಾ ಸಂಬಂಧಿಸಿದಂತೆ ವಿಶಿಷ್ಟ ಹಾಗೂ ವಿಭಿನ್ನ ಕಾರ್ಯಕ್ರಮ ಆಯೋಜಿಸಲು ಎಲ್ಲರೂ ಸಹಕಾರ ನೀಡಬಹುದಾಗಿದೆ ಎಂದು ಶಾಸಕ ಡಾ.ಮಂತರ್ ಗೌಡ ತಿಳಿಸಿದರು.
ದಸರಾವನ್ನು ಜನೋತ್ಸವವಾಗಿ ಆಚರಿಸುವಲ್ಲಿ ಶಾಸಕನಾಗಿ ನನ್ನ ಜವಾಬ್ದಾರಿಯುತ ಕರ್ತವ್ಯವಾಗಿದ್ದು, ಅದನ್ನು ನಿರ್ವಹಿಸುತ್ತೇನೆ. ಸಾರ್ವಜನಿಕರ ಜೊತೆ ನಿರಂತರವಾಗಿ ಇರುತ್ತೇನೆ ಎಂದು ಶಾಸಕರು ಹೇಳಿದರು.ಮಡಿಕೇರಿ ದಸರಾದಲ್ಲಿ ಮಹಿಳಾ, ಮಕ್ಕಳ, ಯುವ, ಕಾಫಿ, ಜಾನಪದ, ಕ್ರೀಡಾ ದಸರಾ ಹೀಗೆ ಎಲ್ಲಾ ರೀತಿಯ ದಸರಾಗಳು ಆಕರ್ಷಿಣಿವಾಗಿದ್ದವು. ಇನ್ನು ವರ್ಷದಿಂದ ವರ್ಷಕ್ಕೆ ದಸರಾವನ್ನು ಸುಧಾರಿಸಿಕೊಳ್ಳುವಲ್ಲಿ ಶ್ರಮಿಸಬೇಕು. ನಿಮ್ಮ ಮನೆ ಮಗನಾಗಿ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸುತ್ತೇನೆ ಎಂದರು. ನಗರದ ಗಾಂಧಿ ಮೈದಾನದಲ್ಲಿ ಹೈಟೆಕ್ ವೇದಿಕೆ ನಿರ್ಮಾಣವಾಗುತ್ತಿದೆ. ಈಗ ರಸ್ತೆಯು ಸಹ ನಿರ್ಮಾಣವಾಗುತ್ತಿದ್ದು, ಕಾಮಗಾರಿಗೆ ಅಗತ್ಯ ಸಹಕಾರ ನೀಡಬೇಕು. ನಿಮ್ಮ ಊರಿನ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಿದಾಗ ಇನ್ನೂ ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡಬಹುದಾಗಿದೆ ಎಂದರು.
ನೂತನ ಬೈಲಾ ಬೇಕು: ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷರಾದ ಟಿ.ಪಿ.ರಮೇಶ್ ಮಾತನಾಡಿ, ಮಡಿಕೇರಿ ದಸರಾಗೆ ತನ್ನದೇ ಆದ ಇತಿಹಾವಿದ್ದು, ಬೈಲಾ ರಚಿಸಿ ಹಲವು ದಶಕಗಳೇ ಕಳೆದಿದೆ. ಶಾಸಕರ ನೇತೃತ್ವದಲ್ಲಿ ನೂತನ ಬೈಲಾ ರಚಿಸುವಂತಾಗಬೇಕು ಎಂದು ಸಲಹೆ ಮಾಡಿದರು. ದಸರಾ ಸಮಿತಿ ಮಾಜಿ ಕಾರ್ಯಾಧ್ಯಕ್ಷರಾದ ಕೆ.ಎಂ.ಬಿ.ಗಣೇಶ್ ಮಾತನಾಡಿ ಶಾಸಕರು ಎಲ್ಲಾ ದೇವಾಲಯಗಳಿಗೂ ಅಗತ್ಯ ಸಹಕಾರ ನೀಡಿದ್ದಾರೆ. ಕಳೆದ ಬಾರಿ 1.50 ಕೋಟಿ ರೂ.ಬಿಡುಗಡೆ ಮಾಡಿಸಿದ್ದರು. ಈ ಬಾರಿ 2 ಕೋಟಿ ರೂ. ಕೊಡಿಸಿದ್ದಾರೆ ಎಂದು ಅವರು ಕೊಂಡಾಡಿದರು.ದಶಮಂಟಪ ಸಮಿತಿ ಮಾಜಿ ಅಧ್ಯಕ್ಷರಾದ ಬಿ.ಎಂ.ರಾಜೇಶ್ ಮಾತನಾಡಿ, ದಶ ಮಂಟಪ ಸಮಿತಿಯಲ್ಲಿ ಹಲವು ನಿಯಮಗಳನ್ನು ಬದಲಾಯಿಸಿಕೊಂಡು ನಡೆಯಬೇಕಿದೆ ಎಂದರು.ದಸರಾ ಸಮಿತಿ ಮಾಜಿ ಕಾರ್ಯಾಧ್ಯಕ್ಷರಾದ ಪ್ರಕಾಶ್ ಆಚಾರ್ಯ ಮಾತನಾಡಿ, ಶಾಸಕರು ಕ್ರೀಯಾಶೀಲವಾಗಿ ತೊಡಗಿಸಿಕೊಂಡು ದಸರಾ ವಿಜೃಂಭಣೆಗೆ ಶ್ರಮಿಸಿದ್ದಾರೆ ಎಂದರು.
ಕರ್ನಾಟಕ ಪ್ಲಾಂಟರ್ಸ್ ಅಸೋಶಿಯೇಷನ್ನ ಅಧ್ಯಕ್ಷರಾದ ಎಂ.ಕಾರ್ಯಪ್ಪ, ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯದ ಅರ್ಚಕರಾದ ಚಾಮಿ, ಪೌರ ಕಾರ್ಮಿಕರಾದ ಲಕ್ಷ್ಮಿ, ಮಡಿಕೇರಿ ನಗರ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರಾದ ಸಂತೋಷ್ ಅನ್ವೇಕರ್, ದಸರಾ ಸಮಿತಿ ಉಪಾಧ್ಯಕ್ಷರಾದ ವಿ.ಜೆ.ಮೋಹನ್ ವೇದಿಕೆಯಲ್ಲಿದ್ದರು. ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು ಮತ್ತು ಕಾರ್ಯಕ್ರಮ ಸಂಚಾಲಕರಾದ ರಾಜೇಶ್ ಯಲ್ಲಪ್ಪ ಸ್ವಾಗತಿಸಿದರು. ಮುನೀರ್ ಅಹಮ್ಮದ್ ನಿರೂಪಿಸಿ, ವಂದಿಸಿದರು.