ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿಕೊನೆಗೂ ಇಲ್ಲಿನ ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿಯ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ನಿರ್ಧರಿಸಿದೆ. ಸುದೀರ್ಘ ಕಾಲದಿಂದ ಕಾಮಗಾರಿಯನ್ನು ಪೂರ್ಣಗೊಳಿಸದೇ ನಿರ್ಲಕ್ಷ್ಯದಿಂದ ಜನರ ಜೀವನದ ಜೊತೆ ಆಟವಾಡುತ್ತಿದ್ದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಜಿಲ್ಲಾಡಳಿತ ಮುಂದಾಗಿದೆ.ರಾಷ್ಟ್ರೀಯ ಹೆದ್ದಾರಿ 169ಎ ಇದಕ್ಕೆ ಅಡ್ಡಲಾಗಿ ಸಾಗುವ ಕೊಂಕಣ ರೈಲ್ವೆ ಮಾರ್ಗದ ಮೇಲೆ ಈ ಉಕ್ಕಿನ ಸೇತುವೆಯನ್ನು ಒಂದೆರಡು ತಿಂಗಳಲ್ಲಿ ಪೂರ್ಣಗೊಳ್ಳಬಹುದಾಗಿದ್ದರೂ ಕಳೆದ 5 ವರ್ಷಗಳಿಂದ ಕಾಮಗಾರಿ ನಾನಾ ನೆಪಗಳನ್ನು ಮುಂದೊಡ್ಡಿ ನೆನೆಗುದಿಗೆ ಹಾಕಲಾಗಿತ್ತು.2018ರಿಂದ ಸೇತುವೆಯ ಅನುದಾನದಲ್ಲಿ ತೊಡಕು, ಸೇತುವೆಯ ವಿನ್ಯಾಸದಲ್ಲಿ ತಿದ್ದುಪಡಿ, ರೈಲ್ವೆ ಇಲಾಖೆಯಿಂದ ಅನುಮತಿ ವಿಳಂಬ, ರೈಲ್ವೆ ಮತ್ತು ಜಿಲ್ಲಾಡಳಿತ, ರಾಷ್ಟ್ರೀಯ ಹೆದ್ದಾರಿ ಇಲಾಖೆಗಳ ನಡುವೆ ಸಮನ್ವಯದ ಕೊರತೆ, ಜನಪ್ರತಿನಿಧಿಗಳ ನಿರಾಸಕ್ತಿ ಇತ್ಯಾದಿ ಕಾರಣಗಳಿಂದ ಕಾಮಗಾರಿ ಆರಂಭವಾಗಿ 5 ವರ್ಷ ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ. ಇದರಿಂದ ಈ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯಲ್ಲಿ ದಿನಕ್ಕೆ ಸಾವಿರಾರು ವಾಹನಗಳು ಓಣಿಯಂತಹ ಹಳೆಯ ಸೇತುವೆ ಮೇಲೆ ಸಾಗುವಂತಾಗಿತ್ತು, ಟ್ರಾಫಿಕ್ ಜಾಮ್, ಅಪಘಾತ ಇಲ್ಲಿ ಸಾಮಾನ್ಯವೆಂಬಂತಾಗಿತ್ತು.ಹಿಂದಿನ ಸಂಸದೆ ಶೋಭಾ ಕರಂದ್ಲಾಜೆ ಅವರು ಒಂದೆರಡು ಬಾರಿ ಗುತ್ತಿಗೆದಾರರನ್ನು, ಅಧಿಕಾರಿಗಳನ್ನು ವಿಳಂಬಕ್ಕೆ ತರಾಟೆಗೆ ತೆಗೆದುಕೊಂಡಿದ್ದರೂ, ಅವರು ಕ್ಯಾರೇ ಎಂದಿರಲಿಲ್ಲ. ನಂತರ ನೂತನ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರೂ ಹೊಸದರಲ್ಲಿ ಸಭೆ ನಡೆಸಿ ಗುತ್ತಿಗೆದಾರರಿಗೆ ಗಡುವು ನೀಡಿದ್ದರೂ ಪ್ರಯೋಜನವಾಗಿರಲಿಲ್ಲ.ನಂತರ ಜಿಲ್ಲಾಧಿಕಾರಿ ಮತ್ತು ಎಸ್ಪಿ ಅವರು ಡಿಸೆಂಬರ್‌ನೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಿ ಸಂಚಾರಕ್ಕೆ ಬಿಟ್ಟು ಕೊಡದಿದ್ದಲ್ಲಿ ಗುತ್ತಿಗೆದಾರರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದರು. ನಂತರ ಕಾಮಗಾರಿ ಆರಂಭವಾಗಿದ್ದರೂ ಆಮೆ ಗತಿಯಲ್ಲಿ ಸಾಗುತಿತ್ತು.
ಇದೀಗ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ, ಈ ಕಾಮಗಾರಿಯ ಪ್ರಗತಿ ಸಭೆಯಲ್ಲಿ ನಿಗದಿತ ಕಾಲಾವಧಿಯಲ್ಲಿ ಪೂರ್ಣಗೊಳಿಸದೇ ನಿರ್ಲಕ್ಷ್ಯ ತೋರುತ್ತಿರುವ ಗುತ್ತಿಗೆದಾರರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಅವರನ್ನು ಕಪ್ಪು ಪಟ್ಟಿಗೆ ಸೇರಿಸಲು ರಾ.ಹೆ. ಅಧಿಕಾರಿಗಳಿಗೆ ಆದೇಶಿಸಿದ್ದಾರೆ.ಕಳೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಾತ್ರಿ ಹಾಗೂ ಹಗಲು ಎರಡೂ ಪಾಳಿಗಳಲ್ಲಿ ಕಾರ್ಮಿಕರನ್ನು ನಿಯೋಜಿಸಿ, ಕಾಮಗಾರಿಯನ್ನು ಶೀಘ್ರವಾಗಿ ಕೈಗೊಳ್ಳಲು ಸೂಚನೆ ನೀಡಲಾಗಿತ್ತು. ಆದರೆ ಬೆರಳೆಣಿಕೆಯ ಕಾರ್ಮಿಕರನ್ನು ನಿಯೋಜಿಸಿ ಕಾಮಗಾರಿ ವಿಳಂಬ ಮಾಡಲಾಗುತ್ತಿದ್ದು, ಸಾರ್ವಜನಿರಿಂದ ನಿತ್ಯ ದೂರುಗಳು ಬರುತ್ತಿವೆ. ಆದ್ದರಿಂದ ತಕ್ಷಣ ಗುತ್ತಿಗೆದಾರರನ್ನು ಬ್ಲಾಕ್ ಲಿಸ್ಟ್ ಮಾಡುವಂತೆ ಆದೇಶಿಸಿದ್ದಾರೆ.ಎಸ್ಪಿ ಡಾ. ಅರುಣ್ ಕೆ., ಸಾರ್ವಜನಿಕರ ಸುಗಮ ಸಂಚಾರಕ್ಕೆ ಕಿರಿಕಿರಿ, ಜೀವಾಪಾಯಕ್ಕೆ ಕಾರಣವಾಗಿರುವ ಗುತ್ತಿಗೆದಾರರು ಮತ್ತು ರಾ.ಹೆ. ಇಲಾಖೆಯ ಅಧಿಕಾರಿಗಳನ್ನೂ ಸೇರಿಸಿ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದ್ದಾರೆ.