ಲೋಕಸಭೆ ಚುನಾವಣೆ ಮತದಾನ ಬಹಿಷ್ಕರಿಸಲು ನಿರ್ಧಾರ

| Published : Mar 23 2024, 01:10 AM IST

ಲೋಕಸಭೆ ಚುನಾವಣೆ ಮತದಾನ ಬಹಿಷ್ಕರಿಸಲು ನಿರ್ಧಾರ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ಏಳು ತಿಂಗಳುಗಳಿಂದ ತಾಲೂಕಿನ ಬೂದಿವಾಳ ಕ್ಯಾಂಪಿನಲ್ಲಿ ನಿರಂತರವಾಗಿ ನಡೆದಿರುವ ವಸತಿ ಮತ್ತು ನಿವೇಶನ ರಹಿತರ ಧರಣಿ ಸತ್ಯಾಗ್ರಹ ತಾಲೂಕು ಆಡಳಿತ ನಿರ್ಲಕ್ಷ್ಯಿಸಿರುವ ಧೋರಣೆ ವಿರೋಧಿಸಿ ಲೋಕಸಭೆ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ರೈತ ಸಂಘ ತಾಲೂಕು ಘಟಕ ತಿಳಿಸಿದೆ.

ಸಿಂಧನೂರು: ಕಳೆದ ಏಳು ತಿಂಗಳುಗಳಿಂದ ತಾಲೂಕಿನ ಬೂದಿವಾಳ ಕ್ಯಾಂಪಿನಲ್ಲಿ ನಿರಂತರವಾಗಿ ನಡೆದಿರುವ ವಸತಿ ಮತ್ತು ನಿವೇಶನ ರಹಿತರ ಧರಣಿ ಸತ್ಯಾಗ್ರಹ ತಾಲೂಕು ಆಡಳಿತ ನಿರ್ಲಕ್ಷ್ಯಿಸಿರುವ ಧೋರಣೆ ವಿರೋಧಿಸಿ ಲೋಕಸಭೆ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ರೈತ ಸಂಘ ತಾಲೂಕು ಘಟಕ ತಿಳಿಸಿದೆ.

ಇಲ್ಲಿನ ಮಿನಿ ವಿಧಾನಸೌಧದ ಮುಂದೆ ಗ್ರೇಡ್-2 ತಹಸೀಲ್ದಾರ್ ಚಂದ್ರಶೇಖರ ಅವರಿಗೆ ಮನವಿ ಪತ್ರ ಸಲ್ಲಿಸಿ ಕಳೆದ 50 ವರ್ಷಗಳಿಂದ ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ಸರ್ವೆ ನಂ.67 ಹಾಗೂ ಕಾಲುವೆ ಬದಿಯಲ್ಲಿ ಗುಡಿಸಲುಗಳನ್ನು ಹಾಕಿಕೊಂಡು ವಾಸ ಮಾಡುತ್ತಿದ್ದು, ಈ ಜಾಗ ಲೋಕೋಪಯೋಗಿ ಮತ್ತು ನೀರಾವರಿ ಇಲಾಖೆಗೆ ಸೇರಿದ್ದರಿಂದ ಮನೆ ಕಟ್ಟಿಕೊಳ್ಳಲು ಅವಕಾಶ ದೊರೆಯುತ್ತಿಲ್ಲ. ಈ ಕಾರಣದಿಂದ ಬೂದಿವಾಳ ಕ್ಯಾಂಪ್‌ಗೆ ಹೊಂದಿಕೊಂಡಿರುವ ಖಾಲಿಯಿರುವ ಸರ್ವೆ ನಂ.44ರಲ್ಲಿ 2 ಎಕರೆ 20 ಗುಂಟೆ ಆಶ್ರಮ ನಿವೇಶನದಲ್ಲಿ ನಮಗೆ ಹಕ್ಕುಪತ್ರ ಕೊಡಬೇಕು ಎಂದು ಆಗ್ರಹಿಸಿದರು.

ಈ ಕುರಿತು ಕಳೆದ 7 ತಿಂಗಳುಗಳಿಂದ ಕರ್ನಾಟಕ ರೈತ ಸಂಘ ತಾಲೂಕು ಘಟಕವತಿಯಿಂದ ಧರಣಿ ನಡೆಸಲಾಗುತ್ತಿದೆ. 2023 ನ.10ರಂದು ಸೋಮಲಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮಸಭೆ ನಡೆಸಿ 84 ಜನ ಫಲಾನುಭವಿಗಳ ಆಯ್ಕೆ ಮಾಡಿದ್ದಾರೆ. ಈ ಸಭೆ ನಡೆಸಿ 4 ತಿಂಗಳಾದರೂ ಗ್ರಾ.ಪಂ ಹಾಗೂ ತಾ.ಪಂ ಅಧಿಕಾರಿಗಳು ಹಕ್ಕುಪತ್ರ ವಿತರಿಸಿಲ್ಲ. ರಾಜಕೀಯ ಒತ್ತಡಕ್ಕೆ ಮಣಿದು ವಿಳಂಬ ಮಾಡುತ್ತಿದ್ದಾರೆ. ಪಂಚಾಯಿತಿ ರಾಜ್ ಕಾಯ್ದೆ ಪ್ರಕಾರ ಗ್ರಾಮಸಭೆ ನಡವಳಿಕೆಗಳನ್ನು ಪಂಚಾಯಿತಿ ಆಡಳಿತ ಮಂಡಳಿ ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕು. ಆದರೆ ರಾಜಕೀಯ ದುರುದ್ದೇಶದಿಂದ ಹಕ್ಕುಪತ್ರ ಹಂಚದೆ ಕಾಲಹರಣ ಮಾಡುತ್ತಿದ್ದಾರೆ. ಶಾಸಕ ಹಂಪನಗೌಡ ಬಾದರ್ಲಿ ಅವರನ್ನು ಅನೇಕ ಬಾರಿ ಭೇಟಿಯಾದರೂ ಸಹ ಸ್ಪಂದನೆ ನೀಡಿಲ್ಲ ಎಂದು ಉಪಾಧ್ಯಕ್ಷ ಚಿಟ್ಟಿಬಾಬು ಆರೋಪಿಸಿದರು.

ತಾವು ವಾಸಿಸುವ ಗುಡಿಸಲು ಪ್ರದೇಶಕ್ಕೆ ವಿದ್ಯುತ್ ವ್ಯವಸ್ಥೆ ಇಲ್ಲ. ರಾತ್ರಿ ವೇಳೆಯಲ್ಲಿ ವಿಷಜಂತುಗಳು ಕಚ್ಚಿ ಮಕ್ಕಳು ಸಾವಿಗೀಡಾಗಿದ್ದಾರೆ. ಸರ್ಕಾರ ಮತ್ತು ಜಿಲ್ಲಾಡಳಿತ ಇಲ್ಲಿನ ನಿವಾಸಿಗಳ ಸಂಕಷ್ಟಕ್ಕೆ ಸರಿಯಾಗಿ ಸ್ಪಂದನೆ ನೀಡುತ್ತಿಲ್ಲ. ಹೀಗಾಗಿ ಲೋಕಸಭೆ ಚುನಾವಣೆಯ ಮತದಾನ ಬಹಿಷ್ಕರಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ನಿರಾಶ್ರಿತರಾದ ಅಮೀನಸಾಬ ನದಾಫ್, ಭೂದೇವಿ, ಶಾಮಮ್ಮ, ವಿರುಪಣ್ಣ, ಮಲ್ಲಯ್ಯ, ದೇವಪುತ್ರ, ನಾಗಮ್ಮ, ಲಕ್ಷ್ಮಿ, ರಾಧಮ್ಮ, ದುರ್ಗಾಪ್ರಸಾದ, ಸ್ವಾತಿ, ನಾಗಪ್ಪ, ರಾಜಶ್ರೀ, ಪವಿತ್ರ, ಗಂಗಮ್ಮ ಇದ್ದರು.