ಸಾರಾಂಶ
ಯಾರೂ ಕೂಡ ಕಟ್ಟಿಗೆ, ಕಬ್ಬಿಣದ ರಾಡು ಹಿಡಿದು ಕುಣಿಯುವುದಾಗಲಿ, ದೊಂಬಿ ಎಬ್ಬಿಸುವುದಾಗಲಿ ಮಾಡುವುದು ಕಂಡು ಬಂದರೆ ಅಂತವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು
ಕನಕಗಿರಿ: ತಾಲೂಕಿನ ಸೂಕ್ಷ್ಮ ಗ್ರಾಮವಾಗಿರುವ ಹುಲಿಹೈದರ ಗ್ರಾಮದಲ್ಲಿ ಶಾಂತಿಯುತ, ಸರಳ ಮೊಹರಂ ಆಚರಣೆಗೆ ನಿರ್ಧರಿಸಲಾಯಿತು.
ಇತ್ತೀಚೆಗೆ ಹಮ್ಮಿಕೊಂಡಿದ್ದ ಶಾಂತಿಸಭೆಯಲ್ಲಿ ತಹಸೀಲ್ದಾರ ವಿಶ್ವನಾಥ ಮುರುಡಿ ಮಾತನಾಡಿ, ಹುಲಿಹೈದರ ಗ್ರಾಮದಲ್ಲಿ ಶಾಂತಿ ನೆಲೆಸಲಿ, ಎಲ್ಲ ವರ್ಗದ ಜನಾಂದವರು ಕೂಡಿಕೊಂಡು ಮೊಹರಂ ಆಚರಿಸುವ ಮೂಲಕ ಬಂಧುತ್ವ ಬೆಸೆಯುವಂತಾಗಲಿ ಎನ್ನುವ ಕಾರಣಕ್ಕೆ ತಾಲೂಕಾಡಳಿತ ಈ ಬಾರಿ ಗ್ರಾಮದಲ್ಲಿ ಸರಳ ಮೊಹರಂ ಆಚರಣೆಗೆ ಅವಕಾಶ ನೀಡಿದೆ. ಇದಕ್ಕೆ ಗ್ರಾಮಸ್ಥರು ಸಹಕರಿಸುವ ಮೂಲಕ ಶಾಂತಿಯುತ ಮತ್ತು ಸರಳ ಹಬ್ಬ ಆಚರಣೆ ಮಾಡಿ ಗ್ರಾಮದ ಘನತೆ ಎತ್ತಿ ಹಿಡಿಯಬೇಕು ಎಂದರು.ನಂತರ ಪಿಐ ಎಂ.ಡಿ.ಫೈಜುಲ್ಲಾ ಮಾತನಾಡಿ, ಈ ಬಾರಿಯ ಮೊಹರಂ ಆಚರಣೆಗೆ ಸರಳವಾಗಿ ಆಚರಿಸಿ. ಯಾರೂ ಕೂಡ ಕಟ್ಟಿಗೆ, ಕಬ್ಬಿಣದ ರಾಡು ಹಿಡಿದು ಕುಣಿಯುವುದಾಗಲಿ, ದೊಂಬಿ ಎಬ್ಬಿಸುವುದಾಗಲಿ ಮಾಡುವುದು ಕಂಡು ಬಂದರೆ ಅಂತವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಮೊಹರಂ ಸಂಭ್ರಮಕ್ಕೆ ತಾಷಾ, ಗೆಜ್ಜೆ ಕುಣಿತ ಮತ್ತಿತರೆ ಕಲಾತಂಡಗಳಿಂದ ಮನರಂಜನೆ ಕಾರ್ಯಕ್ರಮ ಹಮ್ಮಿಕೊಂಡು ಸಮಾಜದಲ್ಲಿ ಶಾಂತಿ,ಸೌಹಾರ್ದತೆಯ ನೆಲೆಸುವ ನಿಟ್ಟಿನಲ್ಲಿ ಗ್ರಾಮದ ಮನಸ್ಸುಗಳು ಒಂದಾಗಿ ಶ್ರಮಿಸಬೇಕು ಎಂದರು.
ಇದಕ್ಕೂ ಮೊದಲು ಜಿಪಂ ಮಾಜಿ ಸದಸ್ಯ ಹನುಮೇಶ ನಾಯಕ, ಗೊಸಲಪ್ಪ ಗದ್ದಿ ಮಾತನಾಡಿ, ಗ್ರಾಮದಲ್ಲಿ ಎಲ್ಲರೂ ಕೂಡಿಕೊಂಡು ಮೊಹರಂ ಆಚರಿಸುತ್ತೇವೆ. ಕಳೆದ ವರ್ಷ ಜಾತಿ, ಬೇಧ ಮರೆತು ಹಬ್ಬ ಆಚರಿಸಿದ್ದು, ಈ ವರ್ಷ ಹಬ್ಬವನ್ನು ಇನ್ನಷ್ಟು ಸಂಭ್ರಮದಿಂದ ಆಚರಿಸಲು ಎಲ್ಲರೂ ಕೈಜೋಡಿಸಬೇಕು. ನಮ್ಮೂರಲ್ಲಿ ಶಾಂತಿ, ಸೌಹಾರ್ದತೆಯಿಂದ ಜೀವನ ಸಾಗಿಸೋಣ ಎಂದರು.ಈ ಸಂದರ್ಭದಲ್ಲಿ ತಾಪಂ ಕಾರ್ಯನಿರ್ವಾಹಕಾಧಿಕಾರಿ ರಾಜಶೇಖರ, ಗ್ರಾಪಂ ಅಧ್ಯಕ್ಷೆ ಶರಣಮ್ಮ ಕೆಲ್ಲೂರ್, ಉಪಾಧ್ಯಕ್ಷ ಜಗದೀಶಪ್ಪ ಗದ್ದಿ, ಹನುಮೇಶ ನಾಮಸೇವೆ, ಜಿಲಾನಸಾಬ್, ರಾಜಸಾಬ್ ಸೇರಿದಂತೆ ಇತರರಿದ್ದರು.