ಅಂಜುಮಾನ್‌-ಎ-ಮುಸ್ಲಿಮೀನ್‌ ಕಮಿಟಿ ಸ್ಥಾಪನೆಗೆ ನಿರ್ಧಾರ

| Published : Apr 27 2025, 01:36 AM IST

ಸಾರಾಂಶ

ತಾಲೂಕಿನ ಮುಸ್ಲಿಂ ಯುವಜನರನ್ನು ಉತ್ತಮ ಮಾರ್ಗದಲ್ಲಿ ನಡೆಸುವ ಉದ್ದೇಶದಿಂದ ಅಂಜುಮಾನ್-ಎ-ಮುಸ್ಲಿಮೀನ್ ಕಮಿಟಿ ಸ್ಥಾಪನೆ ಮಾಡಲು ಉದ್ದೇಶಿಸಲಾಗಿದೆ ಎಂದು ಸಮಾಜದ ಮುಖಂಡ ಅಮಾನುಲ್ಲಾ ಚನ್ನಗಿರಿಯಲ್ಲಿ ಹೇಳಿದ್ದಾರೆ.

- ಚನ್ನಗಿರಿಯಲ್ಲಿ ಮುಖಂಡ ಅಮಾನುಲ್ಲಾ ಹೇಳಿಕೆ । ಉಗ್ರರಿಗೆ ಬಲಿಯಾದವರಿಗೆ ಶ್ರದ್ಧಾಂಜಲಿ

- - -

ಕನ್ನಡಪ್ರಭ ವಾರ್ತೆ ಚನ್ನಗಿರಿ

ತಾಲೂಕಿನ ಮುಸ್ಲಿಂ ಯುವಜನರನ್ನು ಉತ್ತಮ ಮಾರ್ಗದಲ್ಲಿ ನಡೆಸುವ ಉದ್ದೇಶದಿಂದ ಅಂಜುಮಾನ್-ಎ-ಮುಸ್ಲಿಮೀನ್ ಕಮಿಟಿ ಸ್ಥಾಪನೆ ಮಾಡಲು ಉದ್ದೇಶಿಸಲಾಗಿದೆ ಎಂದು ಸಮಾಜದ ಮುಖಂಡ ಅಮಾನುಲ್ಲಾ ಹೇಳಿದರು.

ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂಟ್ಹತ್ತು ವರ್ಷಗಳ ಹಿಂದೆ ಈ ಕಮಿಟಿ ಅಸ್ತಿತ್ವದಲ್ಲಿತ್ತು. ಇದರ ಅವಧಿ ಮುಗಿದ ಕಾರಣ ನೂತನ ಕಮಿಟಿ ರಚಿಸಲು ತಾಲೂಕು ಮುಸ್ಲಿಂ ಸಮಾಜದವರು ತೀರ್ಮಾನಿಸಿದ್ದಾರೆ. ಅದರಂತೆ ತಾಲೂಕಿನಲ್ಲಿರುವ ಎಲ್ಲ ಮಸೀದಿಗಳ ಪ್ರಮುಖರ ಸಭೆ ತೀರ್ಮಾನದಂತೆ ನೂತನ ಕಮಿಟಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುವುದು ಎಂದರು.

ಇತ್ತೀಚಿನ ದಿನಗಳಲ್ಲಿ ನಲ್ಲೂರು ಮತ್ತು ತಾವರೆಕೆರೆ, ಚನ್ನಗಿರಿ ಪಟ್ಟಣದಲ್ಲಿ ಮುಸ್ಲಿಂ ಸಮುದಾಯದಲ್ಲಿಯೇ ಕೆಲವೊಂದು ಅಹಿತಕರ ಘಟನೆಗಳು ನಡೆದಿವೆ. ಇಂತಹ ಘಟನೆ ನಡೆಯದಂತೆ ಮತ್ತು ಸರ್ವಧರ್ಮದವರೊಂದಿಗೆ ಸೌಹಾರ್ದ, ಸಾಮರಸ್ಯದಿಂದ ಬದುಕುವ ವಾತಾವರಣ ನಿರ್ಮಾಣ ಮಾಡಲು, ಐಕ್ಯತೆ ಕಾಪಾಡಲು ಕಮಿಟಿ ಪದಾಧಿಕಾರಿಗಳು ಶ್ರಮಿಸುವರು ಎಂದರು.

ಪತ್ರಿಕಾಗೋಷ್ಠಿಗೂ ಮುನ್ನ ಕಾಶ್ಮೀರದ ಪಹಲ್ಗಾಂನಲ್ಲಿ ಉಗ್ರರ ಗುಂಡಿಗೆ ಬಲಿಯಾದವರ ಆತ್ಮಕ್ಕೆ ಶಾಂತಿಕೋರಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಮುಸ್ಲಿಂ ಸಮಾಜದ ಪ್ರಮುಖರಾದ ಮಹಮದ್ ಜಬೀಉಲ್ಲಾ, ಮಹಮದ್ ಫಾಜೀಲ್, ಸರ್ದಾರ್ ಅಹಮದ್, ಉಸ್ಮಾನ್ ಷರೀಫ್‌, ಗೌಸ್ ಪೀರ್, ಸೈಯದ್ ತನ್ವೀರ್, ಜಾವೀದ್ ಪಾಶ, ಅಬ್ದುಲ್ ಖದೀರ್, ಜಾವೀದ್, ಉಮರ್ ಉಪಸ್ಥಿತರಿದ್ದರು.

- - -

-24ಕೆಸಿಎನ್‌ಜಿ1:

ಪತ್ರಿಕಾಗೋಷ್ಠಿಯಲ್ಲಿ ಮುಸ್ಲಿಂ ಸಮಾಜ ಮುಖಂಡ ಅಮಾನುಲ್ಲಾ ಮಾತನಾಡಿದರು.